Advertisement

ಕಡಲೆಕಾಳು ಖರೀದಿಗೆ ಮೂರು ಕೇಂದ್ರ

11:28 AM Feb 19, 2020 | Naveen |

ದಾವಣಗೆರೆ: ಕೇಂದ್ರ ಸರ್ಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಕಡಲೆಕಾಳು ಉತ್ಪನ್ನ ಖರೀದಿಸಲು ಜಿಲ್ಲೆಯ ಜಗಳೂರು, ಹೊನ್ನಾಳಿ ಮತ್ತು ಚನ್ನಗಿರಿಯಲ್ಲಿ ಖರೀದಿ ಕೇಂದ್ರ ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

Advertisement

ಮಂಗಳವಾರ, ತಮ್ಮ ಕಚೇರಿ ಸಭಾಂಗಣದಲ್ಲಿ 2019-20ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಎಫ್‌.ಎ.ಕ್ಯೂ. ಗುಣಮಟ್ಟದ ಕಡಲೆಕಾಳು ಉತ್ಪನ್ನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ಕೇಂದ್ರಗಳನ್ನು ತೆರೆಯುವ ಕುರಿತು ಚರ್ಚಿಸಲು ಕರೆಯಲಾಗಿದ್ದ ಟಾಸ್ಕ್  ಫೋರ್ಸ್‌ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿ, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಎಫ್‌.ಎ.ಕ್ಯೂ. ಗುಣಮಟ್ಟದ ಕಡಲೆಕಾಳು ಉತ್ಪನ್ನಕ್ಕೆ ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲ್‌ಗೆ 4,875 ರೂ. ನಿಗದಿಪಡಿಸಿದೆ. ನಾಫೆಡ್‌ ಸಂಸ್ಥೆಯನ್ನು ಕೇಂದ್ರದ ಖರೀದಿ ಏಜೆನ್ಸಿಯಾಗಿ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ (ಮಾಕ್‌ ìಫೆಡ್‌) ಸಂಸ್ಥೆಯನ್ನು ರಾಜ್ಯದ ವತಿಯಿಂದ ಖರೀದಿ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ ಎಂದರು.

ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್‌ ಮಾತನಾಡಿ, ಪ್ರಸ್ತುತ ಜಿಲ್ಲೆಯ ಜಗಳೂರು, ಹೊನ್ನಾಳಿ ಮತ್ತು ಚನ್ನಗಿರಿ ತಾಲೂಕುಗಳಲ್ಲಿ ಕಡಲೆಕಾಳು ಹೆಚ್ಚಿನ ಬಿತ್ತನೆಯಾಗಿದೆ. ದಾವಣಗೆರೆ ತಾಲೂಕಿನಲ್ಲಿ 3 ಹೆಕ್ಟೇರ್‌, ಹರಿಹರ 165, ಜಗಳೂರು 5850, ಹೊನ್ನಾಳಿ 460 ಹಾಗೂ ಚನ್ನಗಿರಿ ತಾಲೂಕಿನಲ್ಲಿ 395 ಹೆಕ್ಟೇರ್‌ ಪ್ರದೇಶ ಸೇರಿದಂತೆ ಒಟ್ಟು 6873 ಹೆಕ್ಟೇರ್‌ ಪ್ರದೇಶದಲ್ಲಿ ಕಡಲೆಕಾಳು ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 17869.8 ಟನ್‌ ಇಳುವರಿ ಬರುವ ಅಂದಾಜಿದ್ದು, ಬೆಂಬಲ ಬೆಲೆ ಯೋಜನೆ ಅನುಷಾಠನಗೊಳಿಸಿದಲ್ಲಿ ರೈತರಿಗೆ ಅನುಕೂಲವಾಗುತ್ತದೆ ಎಂದರು.

ದಾವಣಗೆರೆ ಎಪಿಎಂಸಿ ಕಾರ್ಯದರ್ಶಿ ಪ್ರಭು ಮಾತನಾಡಿ, ಜಗಳೂರು ತಾಲೂಕಿನ ರೈತರು ಈ
ಬಾರಿ ಕಡಲೆಕಾಳು ಉತ್ಪನ್ನ ಹೆಚ್ಚಾಗಿ ಬೆಳೆದಿದ್ದಾರೆ. ಬೆಳೆದ ಕಡಲೆಯನ್ನು ಇತರೆ ಮಾರುಕಟ್ಟೆಗಳಿಗೆ ಮಾರಾಟಕ್ಕಾಗಿ ಕೊಂಡೊಯ್ಯುತ್ತಿದ್ದು ಖರೀದಿದಾರರು ನಿಗದಿಪಡಿಸಿಕೊಂಡಿರುವ ಅತಿ ಕಡಿಮೆ ಬೆಲೆಗೆ ಕೊಡದೇ ಹಿಂದಿರುಗುತ್ತಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಸ್ಥಾಪಿಸಬೇಕೆಂದು ಮನವಿ ಸಹ ಸಲ್ಲಿಸಿದ್ದಾರೆ. ರೈತರ ಹಿತ ದೃಷ್ಟಿಯಿಂದ ಕಡಲೇಕಾಳು ಖರೀದಿ ಕೇಂದ್ರ ಸ್ಥಾಪಿಸುವುದು ಸೂಕ್ತ ಎಂದು ಸಭೆ ಗಮನಕ್ಕೆ ತಂದರು.

ಎಪಿಎಂಸಿ ಸಹಾಯಕ ನಿರ್ದೇಶಕ ಎಸ್‌. ಸೋಮಶೇಖರ್‌ ಮಾತನಾಡಿ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಸಂಸ್ಥೆಯನ್ನು ರಾಜ್ಯದ ವತಿಯಿಂದ ಖರೀದಿ ಸಂಸ್ಥೆಯನ್ನಾಗಿ ಕೇಂದ್ರ ಸರ್ಕಾರ ನೇಮಿಸಿದ್ದು, ಫೆ.13 ರಿಂದ 30 ದಿನಗಳವರೆಗೆ ರೈತರ ನೋಂದಣಿಗೆ ಹಾಗೂ ಖರೀದಿ ಕಾಲಾವ ಧಿಯನ್ನು 40 ದಿನಗಳವರೆಗೆ ನಿಗದಿಪಡಿಸಿದ್ದು, ನೋಂದಣಿ ಮತ್ತು ಖರೀದಿ ಪ್ರಕ್ರಿಯೆ ಒಟ್ಟಾಗಿ ಪ್ರಾರಂಭಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

Advertisement

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಮಾತನಾಡಿ, ನಿಯಮಾನುಸಾರ ಪ್ರತಿ ರೈತರಿಂದ ಎಕರೆಗೆ ಮೂರು ಕ್ವಿಂಟಾಲ್‌ನಂತೆ ಗರಿಷ್ಠ 10 ಕ್ವಿಂಟಾಲ್‌ ಕಡಲೆಕಾಳು ಖರೀದಿಸಬಹುದಾಗಿದೆ ಎಂದರು.

ಜಿಲ್ಲಾಧಿಕಾರಿ ಬೀಳಗಿ ಪ್ರತಿಕ್ರಿಯಿಸಿ, ಇಂದಿನಿಂದಲೇ ರೈತರ ನೊಂದಣಿ ಆರಂಭಿಸಿ, ಜಗಳೂರು, ಚನ್ನಗಿರಿ ಮತ್ತು ಹೊನ್ನಾಳಿಯಲ್ಲಿ ಖರೀದಿ ಕೇಂದ್ರ ತೆರೆಯಲು ಪೂರಕ ತಯಾರಿ ನಡೆಸಿ ಖರೀದಿ ಕೇಂದ್ರ ತೆರೆಯುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಸಂಸ್ಥೆ ವ್ಯವಸ್ಥಾಪಕ ಶ್ರೀಕಾಂತ್‌. ಎಸ್‌., ಎಪಿಎಂಸಿ ಸಹಾಯಕ ಕಾರ್ಯದರ್ಶಿ ಶಿಲ್ಪಶ್ರೀ, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಜಿಲ್ಲಾ ವ್ಯವಸ್ಥಾಪಕ ಗಂಗಾಧರಪ್ಪ ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next