Advertisement

ತಾಪಂ ಸಭೆಯಲ್ಲೂ ಮಧ್ಯವರ್ತಿಗಳ ಧ್ವನಿ

12:43 PM Dec 06, 2019 | Naveen |

ದಾವಣಗೆರೆ: ಗ್ರಾಮ ಮಟ್ಟದಲ್ಲೂ ವೃದ್ಧಾಪ್ಯ, ವಿಧವಾ ವೇತನದ ಮಧ್ಯವರ್ತಿಗಳ ಹಾವಳಿ ಹೆಚ್ಚಾಗುತ್ತಿದೆ ಎಂಬ ಆರೋಪ ಗುರುವಾರ ಮಮತಾ ಮಲ್ಲೇಶಪ್ಪ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಪ್ರಬಲವಾಗಿ ಪ್ರತಿಧ್ವನಿಸಿತು.

Advertisement

ಗ್ರಾಮೀಣ ಭಾಗದಲ್ಲಿ ವೃದ್ಧಾಪ್ಯ, ವಿಧವಾ ವೇತನದ ಮಧ್ಯವರ್ತಿಗಳ ಹಾವಳಿ ಹೆಚ್ಚಾಗುತ್ತಿದೆ. ಕೆಲ ಗ್ರಾಮಗಳಲ್ಲಿ ಏಜೆಂಟರ ಮೂಲಕ ನೀಡಲಾಗುವಂತಹ ಅರ್ಜಿಗಳಿಗೆ ಮಾತ್ರ ವೃದ್ಧಾಪ್ಯ, ವಿಧವಾ ವೇತನ ಮಂಜೂರು ಆಗಿಯೇ ಆಗುತ್ತದೆ ಎಂಬ ವಾತಾವರಣ ಇದೆ.

ಅನೇಕರು ತಿಂಗಳಿಗೆ ನೀಡುವ ಪಿಂಚಣಿ ಮೇಲೆಯೇ ಅವಲಂಬಿತರಾಗಿರುತ್ತಾರೆ. ಅಧಿಕಾರಿಗಳು ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಅರ್ಹರಿಗೆ ಮಾಸಾಶನ ಮುಟ್ಟಿಸಬೇಕು ಎಂದು ಸದಸ್ಯ ಮುರುಗೇಂದ್ರಪ್ಪ ಒತ್ತಾಯಿಸಿದರು.

ಗ್ರಾಮೀಣ ಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅನಕ್ಷರಸ್ಥರು ಇರುವುದು ಸಾಮಾನ್ಯ. ಅಧಿಕಾರಿಗಳು ಸಣ್ಣ ಪುಟ್ಟ ತಪ್ಪುಗಳನ್ನ ಅಲ್ಲಿಯೇ ಸರಿಪಡಿಸಿ, ಅರ್ಜಿ ಪಡೆಯುವುದೇ ಇಲ್ಲ. ಸಣ್ಣ ತಪ್ಪಿಗೂ ಅಲೆದಾಡಿಸುತ್ತಾರೆ. ಜನರು ಅಲೆದು ಅಲೆದು ಸಾಕಾಗಿ, ಅರ್ಜಿ ಹಾಕುವುದೇ ಇಲ್ಲ. ಇನ್ನು ಕೆಲವರು ಕೆಲಸ ಆಗಲಿ ಎಂದು ಏಜೆಂಟರ ಮೂಲಕ ಹೋಗುತ್ತಾರೆ. ಅಂತದ್ದನ್ನು ಅಧಿಕಾರಿಗಳು ತಪ್ಪಿಸಬೇಕು ಎಂದು ಬಿಜೆಪಿ ಸದಸ್ಯ ಅಶೋಕ್‌ ಒತ್ತಾಯಿಸಿದರು.

ಖಜಾನೆ-2 ಅನುಷ್ಠಾನದ ಹಿನ್ನೆಲೆಯಲ್ಲಿ ದಾವಣಗೆರೆ ತಾಲೂಕಿನ 3 ಸಾವಿರಕ್ಕೂ ಹೆಚ್ಚು ಜನರಿಗೆ ವೃದ್ಧಾಪ್ಯ, ವಿಧವಾ ವೇತನ ಪಾವತಿ ಆಗುತ್ತಿಲ್ಲ. ಹಿಂದೆ ನೀಡಿರುವಂತಹ ದಾಖಲೆಗಳ ಆಧಾರದಲ್ಲೇ ಖಜಾನೆ-2ಗೆ ಮಾಹಿತಿ ನೀಡಲಾಗುತ್ತಿದೆ. ಮಾಸಾಂತ್ಯಕ್ಕೆ ಸಮಸ್ಯೆ ನಿವಾರಣೆ ಆಗಲಿದೆ.

Advertisement

ಮಧ್ಯವರ್ತಿಗಳಿಗೆ ಅವಕಾಶ ನೀಡುವುದೇ ಇಲ್ಲ. ಜಿಲ್ಲಾಧಿಕಾರಿಗಳ ಸೂಚನೆಯಂತೆ ತಾಲೂಕು ಕಚೇರಿಯಲ್ಲಿ ವಿಶೇಷ ಕೌಂಟರ್‌ ತೆರೆಯಲಾಗಿದೆ. ಸದಸ್ಯರ ಒತ್ತಾಯದ ಹಿನ್ನೆಲೆಯಲ್ಲಿ ಇನ್ನು ಮುಂದೆ ಗ್ರಾಮ ಮಟ್ಟದಲ್ಲಿ ವಿಶೇಷ ಪಿಂಚಣಿ ಅದಾಲತ್‌ ನಡೆಸಲಾಗುವುದು ಎಂದು ದಾವಣಗೆರೆ ತಹಶೀಲ್ದಾರ್‌ ಜಿ. ಸಂತೋಷ್‌ಕುಮಾರ್‌ ತಿಳಿಸಿದರು.

ದಾವಣಗೆರೆ ತಾಲೂಕಿನ 176 ಗ್ರಾಮಗಳಲ್ಲಿ ಪಡಿತರ ಕಾರ್ಡ್‌ ಆಧಾರದಲ್ಲಿ ಪಿಂಚಣಿದಾರರ ಸಮೀಕ್ಷಾ ಕಾರ್ಯ ಪ್ರಾರಂಭಿಸಲಾಗಿದೆ. ಮೊದಲ ಹಂತದಲ್ಲಿ 53 ಗ್ರಾಮಗಳಲ್ಲಿ ಸಮೀಕ್ಷಾ ಕಾರ್ಯ ಮುಗಿದಿದೆ. ಮುಂದಿನ ದಿನಗಳಲ್ಲಿ 53 ಗ್ರಾಮಗಳಲ್ಲಿ ಸಮೀಕ್ಷಾ ಕಾರ್ಯ ಪ್ರಾರಂಭಿಸಲಾಗುವುದು. ಡಿಸೆಂಬರ್‌ನಲ್ಲಿ 2 ಭಾಗದಲ್ಲಿ ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮ ನಡೆಸಲಾಗುವುದು ಎಂದು ಜಿ. ಸಂತೋಷ್‌ಕುಮಾರ್‌ ತಿಳಿಸಿದರು.

ತಾಲೂಕಿನ ಅನೇಕ ಗ್ರಾಮಗಳಲ್ಲಿ ಶಾಲೆ ಒಳಗೊಂಡಂತೆ ಸರ್ಕಾರಿ ಕಟ್ಟಡಗಳಿಗೆ ದಾನವಾಗಿ ಜಾಗ ನೀಡಿರುವರು ಈಗ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಪಡಿಸುವುದು ಕಂಡು ಬರುತ್ತಿದೆ. ಅನೇಕ ಸರ್ಕಾರಿ ಕಟ್ಟಡಗಳ ಖಾತೆ ಬೇರೆಯವರ ಖಾತೆಯಲ್ಲಿವೆ. ಅವುಗಳನ್ನು ಸರ್ಕಾರಿ ಕಚೇರಿಗಳ ಹೆಸರಿಗೆ ಮಾಡಿಸಿಕೊಳ್ಳಬೇಕು ಎಂದು ಮಾಜಿ ಉಪಾಧ್ಯಕ್ಷ ಬಿ.ಜಿ. ಸಂಗಜ್ಜಗೌಡ್ರು ಇತರರು ಒತ್ತಾಯಿಸಿದರು.

ಆದಷ್ಟು ಶೀಘ್ರವೇ ಖಾತೆ ವರ್ಗಾವಣೆ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ತಹಶೀಲ್ದಾರ್‌ ಸಂತೋಷ್‌ ಕುಮಾರ್‌ ತಿಳಿಸಿದರು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿತ ಮಣ್ಣು ಆರೋಗ್ಯ ಕಾರ್ಡ್‌ ಯೋಜನೆಯ ಕಾರ್ಡ್‌ಗಳನ್ನು ತಿಂಗಳ ಅಂತ್ಯಕ್ಕೆ ರೈತರಿಗೆ ಮುಟ್ಟಿಸಬೇಕು. ಮಣ್ಣಿನ ಆರೋಗ್ಯ ಕಾರ್ಡ್‌ ನೀಡಿದಲ್ಲಿ ರೈತರಿಗೆ ಬೆಳೆಗಳನ್ನು ಬೆಳೆಯಲಿಕ್ಕೆ ಅನುಕೂಲ ಆಗುತ್ತದೆ ಎಂದು ಉಪಾಧ್ಯಕ್ಷ ಎ.ಬಿ. ನಾಗರಾಜ್‌ ತಿಳಿಸಿದರು.

ಕೃಷಿ ಇಲಾಖೆ ಮಣ್ಣು ಆರೋಗ್ಯ ಸಮೀಕ್ಷೆ ನಡೆಸಿದ್ದು ಕಾರ್ಡ್‌ ವಿತರಣೆ ಮಾಡಬೇಕಿದೆ. ಸಿಬ್ಬಂದಿ ಕೊರತೆ ಕಾರಣ ನಿಗದಿತ ಸಮಯದಲ್ಲಿ ವಿತರಣೆ ಮಾಡಲಿಕ್ಕೆ ಆಗುತ್ತಿಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕ ಕೆ.ಎಚ್‌. ರೇವಣಸಿದ್ದನಗೌಡ ತಿಳಿಸಿದರು. ಕೃಷಿ ಇಲಾಖೆಯೊಂದಿಗೆ ಇತರೆ ಇಲಾಖೆಗಳ ಸಹಕಾರದಲ್ಲಿ ಕಾರ್ಡ್‌ ವಿತರಣೆಗೆ ವ್ಯವಸ್ಥೆ ಮಾಡೋಣ ಎಂದು ಕಾರ್ಯನಿರ್ವಹಕಾಧಿಕಾರಿ ಬಿ.ಎಂ. ದಾರುಕೇಶ್‌ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next