Advertisement

ಸ್ಮಾರ್ಟ್ ಬಸ್‌ ನಿಲ್ದಾಣ ನಿರ್ಮಾಣ ಶುರು

12:44 PM Dec 06, 2019 | Naveen |

ದಾವಣಗೆರೆ: ಅಂತೂ ಇಂತೂ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿತ ಸ್ಮಾರ್ಟ್‌ಸಿಟಿ ಯೋಜನೆಯಡಿ 28.5 ಕೋಟಿ ವೆಚ್ಚದಲ್ಲಿ ಖಾಸಗಿ ಬಸ್‌ ನಿಲ್ದಾಣ ಕಾಮಗಾರಿಗೆ ಮುಹೂರ್ತ ಕೂಡಿ ಬಂದಿದೆ.

Advertisement

ಹಾಗಾಗಿ ಖಾಸಗಿ ಬಸ್‌ ನಿಲ್ದಾಣ ಸಹ ಹೈಸ್ಕೂಲ್‌ ಫೀಲ್ಡ್‌ಗೆ ಶಿಫ್ಟ್‌ ಆಗಿದೆ. ಸ್ಮಾರ್ಟ್‌ಸಿಟಿ ಯೋಜನೆಗೆ ಅನುಗುಣವಾಗಿ ಖಾಸಗಿ ಬಸ್‌ ನಿಲ್ದಾಣವನ್ನು ಸ್ಮಾರ್ಟ್‌ ನಿಲ್ದಾಣವನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ 28.5 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಸ್ಮಾರ್ಟ್‌ಸಿಟಿ ಯೋಜನೆ ಪ್ರಕಾರ ಜೂನ್‌ ನಲ್ಲೇ ಖಾಸಗಿ ಬಸ್‌ ನಿಲ್ದಾಣ ಕಾಮಗಾರಿ ಪ್ರಾರಂಭವಾಗಬೇಕಿತ್ತು. ಸರ್ಕಾರಿ ಹೈಸ್ಕೂಲ್‌ ಮೈದಾನದಲ್ಲಿ 3 ಕೋಟಿ ವೆಚ್ಚದಲ್ಲಿ ತಾತ್ಕಾಲಿಕ ಬಸ್‌ ನಿಲ್ದಾಣವನ್ನೂ ನಿರ್ಮಾಣ ಮಾಡಲಾಗಿತ್ತಾದರೂ ಅನೇಕ ಕಾರಣದಿಂದ ಖಾಸಗಿ ಬಸ್‌ ನಿಲ್ದಾಣ ಶಿಫ್ಟ್‌ ಆಗಿರಲಿಲ್ಲ.

ಇದ್ದಕ್ಕಿದ್ದಂತೆ ಬುಧವಾರದಿಂದ ಖಾಸಗಿ ಬಸ್‌ ನಿಲ್ದಾಣ ಶಿಫ್ಟ್‌ ಆಗಿದೆ. ಬಸ್‌ ನಿಲ್ದಾಣಕ್ಕೆ ಬಂದು, ಹೋಗುತ್ತಿದ್ದಂತಹ ನೂರಾರು ಖಾಸಗಿ ಬಸ್‌ ಗಳು ಈಗ ಸರ್ಕಾರಿ ಹೈಸ್ಕೂಲ್‌ ಮೈದಾನಕ್ಕೆ ಬಂದು-ಹೋಗುತ್ತಿವೆ. ತಾತ್ಕಾಲಿಕ ಬಸ್‌ ನಿಲ್ದಾಣದಲ್ಲಿ 98 ಮಳಿಗೆ ನಿರ್ಮಾಣ ಮಾಡಲಾಗಿದೆ. ಕೆಲವುಗಳಲ್ಲಿ ವ್ಯಾಪಾರ-ವಹಿವಾಟು ಪ್ರಾರಂಭವಾಗಿದೆ.

ಬುಧವಾರ ಖಾಸಗಿ ಬಸ್‌ ನಿಲ್ದಾಣ ಶಿಫ್ಟ್‌ ಆಗುತ್ತಿರುವ ವಿಷಯ ಗೊತ್ತಾಗದೆ ಬಸ್‌ನವರು ಮಾತ್ರವಲ್ಲ, ಜನರು ಸಹ ತೀವ್ರ ತೊಂದರೆ ಅನುಭವಿಸಬೇಕಾಯಿತು. ಊರುಗಳಿಗೆ ಹೋಗಬೇಕಾದವರು, ಬೇರೆ ಊರುಗಳಿಂದ ಬಂದವರಿಗೆ ಗೊಂದಲ ಉಂಟಾಗಿತ್ತು. ಏಕಾಏಕಿ ಬಸ್‌ ನಿಲ್ದಾಣ ಬದಲಾಗಿದ್ದರಿಂದ ಎಲ್ಲರಿಗೂ ಒಂದಲ್ಲ ಒಂದು ರೀತಿ ತೊಂದರೆ ಆಗಿತ್ತು. ಗುರುವಾರ ಪರಿಸ್ಥಿತಿ ಸುಧಾರಿಸಿದೆ. ಜನರು ನಿಧಾನವಾಗಿ ತಾತ್ಕಾಲಿಕ ಬಸ್‌ ನಿಲ್ದಾಣ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದ್ದಾರೆ.

ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಸ್ಮಾರ್ಟ್‌ ಬಸ್‌ ನಿಲ್ದಾಣ ಮೂರು ಅಂತಸ್ತಿನ ಜೊತೆಗೆ ಅಗತ್ಯ ವ್ಯಾಪಾರ-ವಹಿವಾಟು, ವಾಣಿಜ್ಯ ಮಳಿಗೆ, ಹೋಟೆಲ್‌ ಇತರೆ ಸೌಲಭ್ಯ ಹೊಂದಲಿದೆ. ಬಸ್‌ ಗಳ ಸಂಚಾರದ ಮಾಹಿತಿ ಇತರೆ ಅತ್ಯಾಧುನಿಕ ಸೌಲಭ್ಯದ ಸ್ಪರ್ಶ ಪಡೆಯಲಿದೆ. ಒಟ್ಟಾರೆಯಾಗಿ ಮುಂದಿನ ದಿನಗಳಲ್ಲಿ ಸ್ಮಾರ್ಟ್‌ ಬಸ್‌ ಸ್ಟ್ಯಾಂಡ್ ಆಗಲಿದೆ.

Advertisement

ಖಾಸಗಿ ಬಸ್‌ ನಿಲ್ದಾಣ ಮಾತ್ರವಲ್ಲ, ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣವೂ ಸ್ಮಾರ್ಟ್‌ಸಿಟಿ ಯೋಜನೆಯಡಿ ಸ್ಮಾರ್ಟ್‌ ಆಗಲಿದೆ. 100ಕೋಟಿ ಅನುದಾನದಲ್ಲಿ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣ ನಿರ್ಮಾಣದ ರೂಪುರೇಷೆ ಸಿದ್ಧವಾಗಿದೆ.

ಕೆಎಸ್ಸಾರ್ಟಿಸಿ ಬಸ್‌ಗಳು ಸಹ ಹೈಸ್ಕೂಲ್‌ ಮೈದಾನಕ್ಕೆ ಬಂದು-ಹೋಗಲಿವೆ. ಒಂದು ಕಡೆ ಖಾಸಗಿ, ಇನ್ನೊಂದು ಕಡೆ ಕೆಎಸ್ಸಾರ್ಟಿಸಿ ಬಸ್‌ಗಳು ಹೈಸ್ಕೂಲ್‌ ಮೈದಾನಕ್ಕೆ ದಾಂಗುಡಿಯಿಡುವುದರಿಂದ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ.

ಸರ್ಕಾರಿ ಹೈಸ್ಕೂಲ್‌, ಪಿಯು ಕಾಲೇಜು ಮತ್ತು ಡಯಟ್‌ ಕಾಲೇಜುಗಳ ವಿದ್ಯಾರ್ಥಿಗಳು ಸಂತೆಯ ಗದ್ದಲದಲ್ಲಿ ಕಲಿಯುವಂತಹ ಅನಿವಾರ್ಯತೆ ನಿರ್ಮಾಣವಾಗಲಿದೆ. ಕೆಲವೇ ದಿನಗಳಲ್ಲಿ ಪರೀಕ್ಷಾ ಕಾಲ… ಆಗ ಇನ್ನೂ ಹೆಚ್ಚಿನ ಸಮಸ್ಯೆ ಶತಃಸಿದ್ಧ. ಹಾಗಾಗಿ ಸ್ಮಾರ್ಟ್‌ಸಿಟಿ ಯೋಜನೆ ಅಧಿಕಾರಿಗಳು, ಜನಪ್ರತಿನಿಧಿಗಳು ಎರಡು ಬಸ್‌ ನಿಲ್ದಾಣಗಳ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಮುಗಿಸುವತ್ತ ಚಿತ್ತ ಹರಿಸಲೇಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next