Advertisement

ಹಕ್ಕಿಗಾಗಿ ಹೋರಾಟಕ್ಕೆ ಮುಂದಾಗಿ

03:49 PM Apr 28, 2019 | Naveen |

ದಾವಣಗೆರೆ: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ತಮಗೆ ದೊರೆಯಬೇಕಾದ ಸಂವಿಧಾನ ಬದ್ಧ ಹಕ್ಕಿಗಾಗಿ ಹೋರಾಟ ನಡೆಸಲು ಮುಂದಾಗಬೇಕು ಎಂದು ಎಐಟಿಯುಸಿ ರಾಜ್ಯಾಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ ಕರೆ ನೀಡಿದ್ದಾರೆ.

Advertisement

ನಗರದ ಪಿ.ಜೆ. ಬಡಾವಣೆಯ ಶ್ರೀ ವಾಲ್ಮೀಕಿ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಶನಿವಾರ ದಾವಣಗೆರೆ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ 9ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಸರ್ಕಾರದಿಂದ ದೊರಕಬೇಕಾದ ಸೌಲಭ್ಯ, ಪೌಷ್ಟಿಕ ಆಹಾರ ಪೂರೈಸುತ್ತಾ ಎಲ್ಲರ ಆರೋಗ್ಯವನ್ನು ಅಂಗನವಾಡಿ ಸಹಾಯಕಿಯರು, ಕಾರ್ಯಕರ್ತೆಯರು ಕಾಪಾಡುತ್ತಿದ್ದಾರೆ. ಆದರೆ, ಆಳುವ ಸರ್ಕಾರಗಳ ಒಡೆದಾಳುವ ನೀತಿಯಿಂದಾಗಿ ಕಾರ್ಯಕರ್ತೆಯರು, ಸಹಾಯಕಿಯರು ಇನ್ನೂ ಕೇವಲ ಗೌರವಧನ ಮಾತ್ರ ಪಡೆಯುವಂತಾಗಿದೆ. ಹಾಗಾಗಿ ಮೂಲಭೂತ ಹಕ್ಕಿಗಾಗಿ ಸಂವಿಧಾನಬದ್ಧವಾಗಿ ಹೋರಾಟ ನಡೆಸಬೇಕು. ಆಗ ಮಾತ್ರ ಸಮಸ್ಯೆ ನಿವಾರಣೆ ಸಾಧ್ಯ ಎಂದರು.

ಸಮಗ್ರ ಶಿಶು ಅಭಿವೃದ್ಧಿ ಯೋಜನೆ ದೇಶದಲ್ಲಿ ಜಾರಿಗೆ ಬಂದು 43 ವರ್ಷಗಳಾಗಿವೆ. ಈ ಯೋಜನೆಯಡಿ ಎಲ್ಲಾ ಕೆಲಸಗಳನ್ನು ಅಚ್ಚುಕ್ಕಟಾಗಿ ನಿರ್ವಹಣೆ ಕೂಡ ಮಾಡಲಾಗುತ್ತಿದೆ. ಆದರೆ, ಇಷ್ಟು ವರ್ಷಗಳಾದರೂ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಅಲ್ಪವೇತನಕ್ಕೆ ಸೀಮಿತವಾಗಿದ್ದಾರೆ. ಇಎಸ್‌ಐ, ಗ್ರಾಚ್ಯೂಟಿ, ಪಿಂಚಣಿ ಇತರೆ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಎಲ್ಲಾ ಸೌಲಭ್ಯಗಳಿಗಾಗಿ ದೇಶದಾದ್ಯಂತ ಹೋರಾಟ ಹಮ್ಮಿಕೊಳ್ಳಬೇಕಿದೆ ಎಂದು ಹೇಳಿದರು.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಉತ್ತಮ ಸೇವಾ ಕಾರ್ಯದಿಂದಾಗಿ ಗರ್ಭಿಣಿಯರು, ಬಾಣಂತಿಯರು, ಮಕ್ಕಳ ಸಾವು ಕಡಿಮೆ ಆಗಿದೆ. ಈ ಮೂಲಕ ದೇಶದ ಚಹರೆಯನ್ನೇ ಬದಲು ಮಾಡಿದ್ದಾರೆ. ಆದರೆ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಯಾರಾದರೂ ಸತ್ತಲ್ಲಿ ಯಾವುದೇ ಭದ್ರತೆ ಇಲ್ಲ. ಇಂತಹ ಧೋರಣೆ ನಿಜಕ್ಕೂ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಈಚೆಗೆ ದಾವಣಗೆರೆ ತಾಲೂಕಿನ ಅಗಸನಕಟ್ಟೆ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರ ಮನೆಯಲ್ಲಿ ಆಕೆಯ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಆಭರಣ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಆದರೆ ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೂಡ ಯಾವುದೇ ಕ್ರಮಕ್ಕೆ ಮುಂದಾಗದೇ ಕಡೆಗಣಿಸಿದೆ. ಜೀವನದಲ್ಲಿ ಕಷ್ಟಪಟ್ಟು ಕೆಲಸ ನಿರ್ವಹಿಸಿದವರ ಮೇಲೆ ಈ ರೀತಿ ಘಟನೆ ನಡೆಯಬಾರದು. ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳಿಗೆ ವೇದಿಕೆ ಮೂಲಕ ಮನವಿ ಮಾಡಿದರು.

Advertisement

ಪ್ರಧಾನಿ ನರೇಂದ್ರ ಮೋದಿಯವರು ಐದು ವರ್ಷ ಆಡಳಿತ ನಡೆಸಿದರೂ ಸಹ ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ ಮಾಡಿಲ್ಲ. ಇನ್ನು ರಾಜ್ಯ ಸರ್ಕಾರದಿಂದ ಕೇವಲ ಅತ್ಯಲ್ಪ ಗೌರವಧನ ಹೆಚ್ಚಳ ಮಾತ್ರವಾಗಿದೆ. ಈ ಹಿನ್ನೆಲೆಯಲ್ಲಿ ಮೊದಲು ದೇಶದ 27 ಲಕ್ಷ ಕಾರ್ಯಕರ್ತೆಯರು, ಸಹಾಯಕಿಯರ ಕಾಯಂ ಮಾಡುವ ಕೆಲಸ ಆಗಬೇಕು. ಇಲ್ಲದಿದ್ದರೆ ರಾಜ್ಯ ಮಾತ್ರವಲ್ಲದೇ ದೇಶದಾದ್ಯಂತ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರೊ| ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಮಹಿಳೆಯರು, ಮಕ್ಕಳು, ಶೋಷಿತ ಸಮಾಜಕ್ಕೆ ಸಾಮಾಜಿಕ ನ್ಯಾಯವನ್ನು ಈ ಹಿಂದೆ ಡಾ| ಬಾಬಾ ಸಾಹೇಬ್‌ ಅಂಬೇಡ್ಕರ್‌ ಕಲ್ಪಿಸಿಕೊಟ್ಟಿದ್ದಾರೆ. ಆದರಿಂದು ಕಿವಿ-ಕಣ್ಣಿಲ್ಲದ ಸರ್ಕಾರ ಇದೆ. ಜನರ ಸಂಕಟಗಳೇ ಗೊತ್ತಿಲ್ಲದೇ ಬಣ್ಣದ ಜೀವನ ನಡೆಸುವ ನಾಯಕರು ನಮ್ಮನ್ನಾಳುತ್ತಿದ್ದಾರೆ. ಹಾಗಾಗಿ ಪ್ರತಿಯೊಬ್ಬರೂ ಸಂಘಟಿತರಾಗಬೇಕು. ಚಳವಳಿಯ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಎಐಟಿಯುಸಿ ಜಿಲ್ಲಾ ಅಧ್ಯಕ್ಷೆ ಎಂ.ಬಿ. ಶಾರದಮ್ಮ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ವಿಶಾಲಾಕ್ಷಿ ಮೃತ್ಯುಂಜಯ, ಎಸ್‌.ಎಸ್‌. ಮಲ್ಲಮ್ಮ, ಆನಂದ್‌ರಾಜ್‌, ಆವರಗೆರೆ ಚಂದ್ರು, ರುದ್ರಮ್ಮ ಬೆಳಲಗೆರೆ, ಸರೋಜಮ್ಮ, ಎನ್‌.ಎಚ್. ರಾಮಪ್ಪ ಇತರರಿದ್ದರು. ಡಿ.ಎಂ. ರೇಣುಕಾ ಸ್ವಾಗತಿಸಿದರು. ಐರಣಿ ಚಂದ್ರು-ಹೆಗ್ಗೆರೆ ರಂಗಪ್ಪ ಕ್ರಾಂತಿಗೀತೆ ಹಾಡಿದರು. ಆವರಗೆರೆ ವಾಸು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next