ದಾವಣಗೆರೆ: ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡಿಸೇಲ್ ದರ ಹೆಚ್ಚಾಗುತ್ತಲೇ ಇದ್ದು ನವೀಕರಿಸಬಹುದಾದ ಪರ್ಯಾಯ ಇಂಧನ ಕ್ಕಾಗಿ ನಿರಂತರ ಸಂಶೋಧನೆಗಳು ನಡೆಯುತ್ತಲಿವೆ. ಈ ನಡುವೆ ನಗರದ ಜೈನ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ಪೆಟ್ರೋಲ್ ತಯಾರಿಸುವ ಹೊಸ ತಂತ್ರಜ್ಞಾನ ಪರಿಚಯಿಸಿ ಅಚ್ಚರಿ ಮೂಡಿಸಿದ್ದಾರೆ.
ಪರಿಸರಕ್ಕೆ ಮಾರಕವಾಗಿ ಮಾರ್ಪಟ್ಟಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನೇ ಉಪಯೋಗಿಸಿ ಪೆಟ್ರೋಲ್ ತಯಾರಿಸುವ ತಂತ್ರಜ್ಞಾನ ಇದಾಗಿರುವುದರಿಂದ ಬಹಳ ಕುತೂಹಲ ಕೆರಳಿಸಿದೆ. ಜೈನ್ ಕಾಲೇಜು ವಿದ್ಯಾರ್ಥಿಗಳ ಈ ಸಂಶೋಧನಾ ಪ್ರಾಜೆಕ್ಟ್ ಕೇಂದ್ರ ಸರ್ಕಾರದ “ಮಂಥನ್’ ಸ್ಪರ್ಧೆಯ ಎರಡನೇ ಸುತ್ತಿಗೆ ಆಯ್ಕೆಯಾಗಿದ್ದು, ಮುಂದಿನ ತಿಂಗಳು ಈ ಪ್ರಾಜೆಕ್ಟ್ ನ್ನು ವಿದ್ಯಾರ್ಥಿಗಳು ಪ್ರದರ್ಶಿಸಲು ಸಜ್ಜಾಗಿದ್ದಾರೆ.
ದಿನೇದಿನೆ ಪೆಟ್ರೋಲ್-ಡೀಸೆಲ್ ಬಳಕೆ ಹೆಚ್ಚಾಗುತ್ತಿದ್ದು, ನವೀಕರಿಸಲಾಗದ ಈ ಇಂಧನ ಬರಿದಾಗುವ ಆತಂಕ ಇಡೀ ವಿಶ್ವಕ್ಕೇ ಎದುರಾಗಿದೆ. ತೈಲ ಅಭಾವದ ಕಾರಣದಿಂದ ಈ ಇಂಧನಗಳ ದರವೂ ಗಗನಕ್ಕೇರುತ್ತಿದೆ. ಇಂಧನ ಯಥೇಚ್ಛ ಬಳಕೆಯಿಂದ ಬಿಡುಗಡೆಯಾಗುವ ಅನಿಲದಿಂದ ವಾಯುಮಾಲಿನ್ಯವೂ ಅಷ್ಟೇ ದೊಡ್ಡ ಪ್ರಮಾಣದಲ್ಲಿ ಪರಿಸರಕ್ಕೆ ಹಾನಿ ಮಾಡುತ್ತಿದೆ. ಇವೆಲ್ಲದಕ್ಕೂ ಪರಿಹಾರವಾಗಿ ನಿಲ್ಲಬಹುದಾದ ಈ ತಂತ್ರಜ್ಞಾನ ಇನ್ನಷ್ಟು ಅಭಿವೃದ್ಧಿಪಡಿಸಿದರೆ, ಪೆಟ್ರೋಲ್-ಡಿಸೇಲ್‌ಗೆ ಪರ್ಯಾಯವಾಗುವ ಜತೆಗೆ ಪರಿಸರ ರಕ್ಷಣೆಗೂ ಅನುಕೂಲವಾಗಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.
2 ಮತ್ತು 4 ಸ್ಟ್ರೋಕ್ ಎಂಜಿನ್‌ಗಳಿಗೆ ಬಳಕೆ: ಆವಿಷ್ಕರಿಸಿದ ಇಂಧನವನ್ನು ಎರಡು ಹಾಗೂ ನಾಲ್ಕು ಸ್ಟ್ರೋಕ್ ಯಂತ್ರಗಳಿಗೆ ವಿದ್ಯಾರ್ಥಿಗಳು ಬಳಸಿದ್ದಾರೆ. ಯಂತ್ರಗಳು ಮೂಲ ಡೀಸೆಲ್ ಹಾಗೂ ಪೆಟ್ರೋಲ್ ಇಂಧನ ಚಾಲಿತ ಯಂತ್ರ ಗಳಾಗಿರುವುದರಿಂದ ಮೂಲ ಇಂಧನದಲ್ಲಿ ಶೇ.20ರಷ್ಟು ಆವಿಷ್ಕೃತ ಇಂಧನ ಬಳಸಿದ್ದು ಇದರಿಂದ ಯಂತ್ರದ ಕಾರ್ಯಕ್ಷಮತೆ ಹೆಚ್ಚಾಗಿರುವುದು ಕಂಡು ಬಂದಿದೆ. ಆವಿಷ್ಕೃತ ಇಂಧನದಲ್ಲಿ ಸಲ#ರ್, ಕಾರ್ಬನ್ ಇಲ್ಲದೇ ಇರುವುದರಿಂದ
ವಾಯುಮಾಲಿನ್ಯವೂ ಕಡಿಮೆಯಾದಂತಾಗಿದೆ.
ಇದನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಿದರೆ ಪೆಟ್ರೋಲ್, ಡೀಸೆಲ್‌ಗೆ ಪರ್ಯಾಯವಾಗಬಹುದು. ಅಲ್ಲದೆ ಅಗ್ಗದ ದರದಲ್ಲಿಯೂ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಜೈನ್ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ಸೆಮಿಸ್ಟರ್‌ನ ವಿದ್ಯಾರ್ಥಿಗಳು ಡಾ| ರಮೇಶ್ ಬಿ.ಟಿ. ಅವರ ಮಾರ್ಗದರ್ಶನದಲ್ಲಿ ಐದಾರು ತಿಂಗಳು ಸಂಶೋಧನೆ ಮಾಡಿ ಇದನ್ನು ಆವಿಷ್ಕರಿಸಿದ್ದಾರೆ. ಮೋಹನಕುಮಾರ್ ಜೆ.ಎಸ್., ಮೋಹನ ನಾಯಕ್, ನಯನಾ, ಮಧುಚಂದ್ರ ಚೌಹಾಣ ಈ ಮಾದರಿ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಸಂಶೋಧನೆ ಮಾಡಿದ್ದು ಹೇಗೆ?
ಬಳಸಿ ಬಿಸಾಡಿದ ಬಾಟಲ್ ಸೇರಿ ಇನ್ನಿತರ ಎಲ್ಲ ರೀತಿಯ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿದ ಸಂಶೋಧನಾ ವಿದ್ಯಾರ್ಥಿಗಳು ಅದನ್ನು ತೊಳೆದು ಚಿಕ್ಕದಾಗಿ ಕತ್ತರಿಸಿ ವಿಶೇಷವಾಗಿ ಸಿದ್ಧಪಡಿಸಿದ ವಿದ್ಯುತ್ ಚಾಲಿತ ಚಿಕ್ಕ ಪೆಟ್ಟಿಗೆಯಲ್ಲಿ 400-500ಡಿಗ್ರಿ ತಾಪಮಾನದಲ್ಲಿ ಕಾಯಿಸಿ ಮೆದುಗೊಳಿದ್ದಾರೆ. ಇದರಿಂದ ಉತ್ಪತ್ತಿಯಾದ ಕಂಡೆನ್ಸ್‌ರ್ ಗ್ಯಾಸ್‌ನ್ನು ಇನ್ನೊಂದು ಪೈಪ್ ಮೂಲಕ ಪಡೆದು ಅದನ್ನು ತಣಿಸಿ ದ್ರವೀಕರಿಸಿದ್ದಾರೆ. ಹೀಗೆ ಸಂಗ್ರಹಿಸಿದ ದ್ರವದಲ್ಲಿ ಪೆಟ್ರೋಲ್, ಡೀಸೆಲ್‌ನಲ್ಲಿ ಇರಬಹುದಾದ ಹೈಡ್ರೋಕಾರ್ಬನ್ಸ್ ಇದ್ದು ಪೆಟ್ರೋಲ್-ಡೀಸೆಲ್‌ನಂತೆ ಬಳಸಬಹುದಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.
ಸಂಶೋಧನೆ ವೇಳೆ ಅಂದಾಜು ನಾಲ್ಕು ಕೆಜಿ ಪ್ಲಾಸ್ಟಿಕ್ ತ್ಯಾಜ್ಯದಿಂದ 200 ಎಂಎಲ್ ಪೆಟ್ರೋಲ್ ತಯಾರಿಸಲಾಗಿದ್ದು ಭವಿಷ್ಯದಲ್ಲಿ ತಂತ್ರಜ್ಞಾನವನ್ನು ಇನ್ನಷ್ಟು ಆವಿಷ್ಕರಿಸಿದರೆ ಉತ್ಪಾದನಾ ವೆಚ್ಚವೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ.
● ಡಾ| ರಮೇಶ್ ಬಿ.ಟಿ., ಮಾರ್ಗದರ್ಶಕರು,
ಜೈನ್ ಎಂಜಿನಿಯರಿಂಗ್ ಕಾಲೇಜು, ದಾವಣಗೆರೆ
● ಎಚ್.ಕೆ. ನಟರಾಜ