Advertisement

ಸತ್ಯ ಶೋಧನೆಗೆ ಬೇಕಿದೆ ವೈದ್ಯರ ಸಹಕಾರ

10:00 AM Jun 09, 2019 | Naveen |

ದಾವಣಗೆರೆ: ಅಪರಾಧ ಪ್ರಕರಣಗಳಲ್ಲಿ ನ್ಯಾಯಾಲಯದ ಸತ್ಯ ಶೋಧನೆಯ ಪ್ರಕ್ರಿಯೆಯಲ್ಲಿ ವೈದ್ಯರ ಸಹಕಾರ ಅತ್ಯಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕುಲಕರ್ಣಿ ಅಂಬಾದಾಸ್‌ ಜಿ. ಹೇಳಿದ್ದಾರೆ.

Advertisement

ಶನಿವಾರ, ನಗರದ ಎಸ್‌.ಎಸ್‌. ವೈದ್ಯವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಲ್ಲಿ ಫೋರೆನ್ಸಿಕ್‌ ಮೆಡಿಸಿನ್‌ ಮತ್ತು ಟಾಕ್ಸಿಕಾಲಜಿ ವಿಭಾಗ ಆಯೋಜಿಸಿದ್ದ, ವೈದ್ಯಕೀಯ ವೃತ್ತಿಯಲ್ಲಿನ ಕಾನೂನಾತ್ಮಕ ಪ್ರಕ್ರಿಯೆಗಳ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ದುಷ್ಟರಿಗೆ ಶಿಕ್ಷೆ, ನಿರಪರಾಧಿಗಳಿಗೆ ರಕ್ಷಣೆ ನೀಡುವುದು ನ್ಯಾಯಾಲಯದ ಕರ್ತವ್ಯ. ಪೊಲೀಸರು, ವಕೀಲರು ಮತ್ತು ವೈದ್ಯರು ಸಹಕಾರ ನೀಡಿದಾಗ ನ್ಯಾಯ ಒದಗಿಸಲು ಸಾಧ್ಯವಾಗಲಿದೆ ಎಂದರು.

ದಾಖಲೆಗಳ ಸಂರಕ್ಷಣೆ ಬಹಳ ಮಹತ್ವದ್ದಾಗಿದೆ. ವೈದ್ಯಕೀಯ ವೃತ್ತಿಯಲ್ಲಿರುವವರು ದಾಖಲಾತಿಗಳನ್ನು ಸರಿಯಾಗಿ ಅಧ್ಯಯನ ಮಾಡಿಕೊಂಡು ಸಾಕ್ಷ್ಯ ನೀಡಲು ನ್ಯಾಯಾಲಯಕ್ಕೆ ಬಂದರೆ ನ್ಯಾಯದಾನಕ್ಕೆ ಅದು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ಮಾತನಾಡಿ, ವೈದ್ಯಕೀಯ ವೃತ್ತಿಯಲ್ಲಿ ಇರುವವರಿಗೆ ಕಾನೂನಿನ ಜ್ಞಾನವಿದ್ದರೆ ಒಳ್ಳೆಯದು. ಮೆಡಿಕೋ ಲೀಗಲ್ ಪ್ರಕರಣಗಳಿಗೆ ಸಂಬಂಧಿಸಿದ ರೋಗಿಗಳು ಆಸ್ಪತ್ರೆಗೆ ದಾಖಲಾದಾಗ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಬೇಕು. ಜತೆಯಲ್ಲಿ ಡೈರಿ ಇಟ್ಟುಕೊಂಡು ವಿವರಗಳನ್ನು ದಾಖಲಿಸಬೇಕು ಎಂದು ಸಲಹೆ ನೀಡಿದರು.

ವೈದ್ಯರಿಗೆ ನ್ಯಾಯಾಲಯ ಮತ್ತು ಪೊಲೀಸರ ಬಗ್ಗೆ ಭಯ ಬೇಡ. ನಿಮಗೆ ತಿಳಿದಿರುವ ವಿಷಯಗಳನ್ನು ಪ್ರಾಮಾಣಿಕವಾಗಿ ನ್ಯಾಯಾಲಯದಲ್ಲಿ ಹೇಳಿದರೆ ಸಾಕು. ಇತ್ತೀಚೆಗೆ ವೈದ್ಯರ ಮೇಲೆ ಹಲ್ಲೆ ಪ್ರಕರಣಗಳು ನಡೆಯುತ್ತಿವೆ. ಅಂಥ ಸಂದರ್ಭಗಳು ಎದುರಾಗಬಹುದು ಎಂಬ ಸೂಚನೆ ಸಿಕ್ಕಾಗಲೇ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದರೆ, ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಬಹುದು ಎಂದು ಹೇಳಿದರು.

Advertisement

ಕಾಲೇಜು ಪ್ರಾಂಶುಪಾಲ ಡಾ| ಬಿ.ಎಸ್‌. ಪ್ರಸಾದ್‌ ಮಾತನಾಡಿ, ವೈದ್ಯರು ರೋಗಿಗಳೊಂದಿಗೆ ಸರಿಯಾಗಿ ಮಾತನಾಡಬೇಕು. ಅವರೊಂದಿಗೆ ನಡೆಸುವ ಸಂವಹನ ಮತ್ತು ಆಪ್ತ ಸಮಾಲೋಚನೆ ಸರಿಯಾಗಿದ್ದರೆ ಹಲ್ಲೆಯಂಥ ಪ್ರಕರಣ ಸಂಭವಿಸುವುದಿಲ್ಲ ಎಂದರು.

ಇತ್ತೀಚೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಆ ಬಗ್ಗೆ ತಿಳಿದುಕೊಂಡು ನಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕು. ಇದರಿಂದ ವೃತ್ತಿಯಲ್ಲಿ ಬೆಳವಣಿಗೆ ಹೊಂದಲು ಸಹಾಯವಾಗುತ್ತದೆ. ರೋಗಿಗಳು ದೇವರಿದ್ದಂತೆ, ಅವರನ್ನು ಗೌರವದಿಂದ ಕಾಣಬೇಕು ಎಂದು ಕಿವಿಮಾತು ಹೇಳಿದರು.

ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಸ್‌. ನಾಗಶ್ರೀ, ಆರ್‌.ಎಲ್. ಕಾನೂನು ಕಾಲೇಜು ಪ್ರಾಂಶುಪಾಲ ಪ್ರೊ| ಬಿ.ಎಸ್‌. ರೆಡ್ಡಿ, ಕಾಲೇಜಿನ ಉಪ ಪ್ರಾಂಶುಪಾಲ ಡಾ| ಅರುಣಕುಮಾರ್‌, ಕೆ.ಎಂ.ಸಿ. ವೀಕ್ಷಕ ಡಾ| ಸಿ.ಎಸ್‌. ಸಂತೋಷ್‌, ಕಾರ್ಯಕ್ರಮದ ಸಂಘಟನಾ ಅಧ್ಯಕ್ಷ ಡಾ| ವಿಜಯಕುಮಾರ್‌ ಜತ್ತಿ, ಸಂಘಟನಾ ಕಾರ್ಯದರ್ಶಿ ಡಾ| ಸುನೀಲ್ ಕದಮ್‌ ಕಾರ್ಯಕ್ರಮದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next