Advertisement

ದಾವಣಗೆರೆ ದಕ್ಷಿಣ: ಸಂಜೆ ಏರಿದ ಮತದಾನದ ಪ್ರಮಾಣ

05:30 PM May 13, 2018 | |

ದಾವಣಗೆರೆ: ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮತದಾನ ದಿನದ ಸಂಜೆಯವರೆಗೆ ನೀರಸ ಇದ್ದದ್ದು, ಮತದಾನ ಗಡುವು ಇನ್ನೇನು ಮುಗಿಯಲು ಕೆಲವೇ ಕ್ಷಣ ಇರುವಾಗ ಏಕಾಏಕಿ ಕಾವೇರಿತು.

Advertisement

ಎಲ್ಲೂ ಸಹ ಗಂಭೀರ ಸ್ವರೂಪದ ಗಲಾಟೆ, ಗೊಂದಲ ಇಲ್ಲದೆ ಶಾಂತಿಯುತ ಮತದಾನ ನಡೆಯಿತು. ಬೆಳಗ್ಗೆ 8 ಗಂಟೆಯಿಂದಲೇ ಮತಗಟ್ಟೆಗಳಿಗೆ ಮತದಾರರು ಆಗಮಿಸಲು ಆರಂಭಿಸಿದರು. ಆದರೆ, ಮತದಾನ ಕೇಂದ್ರಕ್ಕೆ ಬರುವವರ ಸಂಖ್ಯೆ ಮಾತ್ರ ಕಡಿಮೆ ಇತ್ತು. ಮಧ್ಯಾಹ್ನದವರೆಗೆ ಇದೇ ರೀತಿ ಇತ್ತು. ಆದರೆ, 3 ಗಂಟೆ ನಂತರ ಏಕಾಏಕಿ ಮತದಾನದ ಪ್ರಮಾಣದಲ್ಲಿ ಏರಿಕೆ ಕಂಡು ಬಂತು. ಅದರಲ್ಲೂ ಕೊನೆಯ ಒಂದು ತಾಸು ಎಲ್ಲಾ ಮತಗಟ್ಟೆಗಳ ಮುಂದೆ ಜನರು ಸಾಲುಗಟ್ಟಿ ನಿಂತಿದ್ದು ಗೋಚರಿಸಿತು.

ಕಾರ್ಲ್ ಮಾರ್ಕ್‌ ನಗರ, ಶಿವನಗರ, ಭಾಷಾನಗರದ ಹಲವು ಮತಗಟ್ಟೆಗಳಲ್ಲಿ ಸಂಜೆಯ 6 ಗಂಟೆಯ ನಂತರವೂ ಜನರ ಸಾಲುಗಟ್ಟಿ ಮತ ಹಾಕಲು ನಿಂತಿದ್ದರು. ಚುನಾವಣಾಧಿಕಾರಿಗಳು 6 ಗಂಟೆಯವರೆಗೆ ಬಂದವರಿಗೆ
ಮೊದಲೇ ಚೀಟಿ ನೀಡಿ, ಮತ ಹಾಕಲು ಅವಕಾಶ ಮಾಡಿಕೊಟ್ಟರು. ನಂತರ ಬಂದವರಿಗೆ ಮತ ಹಾಕಲು
ನಿರಾಕರಿಸಲಾಯಿತು.

ಗಾಂಧಿನಗರ, ಆಶ್ರಯ ಕಾಲೋನಿ, ದೇವರಾಜ ಅರಸು ಬಡಾವಣೆ ಭಾಗದಲ್ಲಿ ಬೆಳಗ್ಗೆಯಿಂದ ಮತದಾನ ಪ್ರಕ್ರಿಯೆ ಚುರುಕಾಗಿತ್ತು. ಸಂಜೆ 6 ಗಂಟೆಯ ವೇಳೆಗೆ ಬಹುತೇಕ ಮತಗಟ್ಟೆಗಳಲ್ಲಿನ ಮತದಾನ ಪ್ರಕ್ರಿಯೆ ಪೂರ್ಣಗೊಂಡಿತ್ತು.

ಅತ್ಯಂತ ಜನಸಾಂದ್ರತೆ ಇರುವ ಭಾಷಾನಗರ, ಆಜಾದ್‌ ನಗರದ ಭಾಗದ ಮತಗಟ್ಟೆಗಳ ಮುಂದೆ ಜನ ಜಮಾಯಿಸುತ್ತಿದ್ದುದು ಸರ್ವೇ ಸಾಮಾನ್ಯವಾಗಿತ್ತು. ರಕ್ಷಣಾ ಸಿಬ್ಬಂದಿ ಈ ಜನರನ್ನು ಚದುರಿಸಲು ಪದೇ ಪದೇ ಹರಸಾಹಸ ಪಡುತ್ತಲೇ ಇದ್ದರು. ಭಾಷಾ ನಗರದ 12 ತಿರುವಿನಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಪಾಲಿಕೆ ಸದಸ್ಯರೊಬ್ಬರನ್ನು ಯುವಕರ ಗುಂಪೊಂದು ಅವರು ಹೋದಲ್ಲೆಲ್ಲಾ ಹಿಂಬಾಲಿಸಿಕೊಂಡು ಬಂದಿದ್ದು ಕಂಡು ಬಂತು. ಕೊನೆಗೆ ಪೊಲೀಸರು ಅವರನ್ನು ಚದುರಿಸಿದರು.

Advertisement

ಇದೇ ರೀತಿ ಸಂಜೆ 4 ಗಂಟೆಯ ವೇಳೆಗೆ ಶಿವನಗದಲ್ಲಿ ಗೊಂದಲ ಸೃಷ್ಟಿಯಾಯಿತು. ಪಾಲಿಕೆ ಸದಸ್ಯ, ಕಾಂಗ್ರೆಸ್‌
ಮುಖಂಡ ಶಿವನಗರದಲ್ಲಿ ಕಾಣಿಸಿಕೊಂಡರು. ಜೆಡಿಎಸ್‌ ಅಭ್ಯರ್ಥಿ ಅಮಾನುಲ್ಲಾ ಖಾನ್‌ ಇದನ್ನು ವಿರೋಧಿಸಿದರು.
ಉತ್ತರ ಕ್ಷೇತ್ರದ ಪಕ್ಷದ ಮುಖಂಡ ದಕ್ಷಿಣ ಕ್ಷೇತ್ರಕ್ಕೆ ಬಂದದ್ದನ್ನು ಪ್ರಶ್ನಿಸಿದರು. ಕೊನೆಗೆ ಚುನಾವಣಾ ಫ್ಲೆಯಿಂಗ್‌ ಸ್ಕಾರ್ಡ್‌
ಸ್ಥಳಕ್ಕೆ ಬರುತ್ತಲೇ ಪಾಲಿಕೆ ಸದಸ್ಯ ದಿನೇಶ್‌ ಶೆಟ್ಟಿ ಆದಿಯಾಗಿ ಎಲ್ಲರೂ ಅಲ್ಲಿಂದ ತೆರಳಿದರು. ಇದಕ್ಕೂ ಮುನ್ನ ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರ ನಡುವೆ ಕೆಲಹೊತ್ತು ಮಾತಿನ ಚಕಮಕಿ ನಡೆದಿತ್ತು.

ಭಾವುಕರಾದ ಜಾಧವ್‌ ಬಿಜೆಪಿ ಅಭ್ಯರ್ಥಿ ಯಶವಂತರಾವ್‌ ಜಾಧವ್‌ ದೇವರಾಜ ಅರಸು ಬಡಾವಣೆಯ ಸರ್ಕಾರಿ ಶಾಲೆಯಲ್ಲಿ ತಮ್ಮ ಪತ್ನಿಯೊಂದಿಗೆ ಮತದಾನ ಮಾಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವಾಗ ಭಾವುಕರಾದರು. ಮೂರು ಬಾರಿ ಚುನಾವಣೆಗೆ ಸ್ಪರ್ಧಿಸಿ, ಸೋತಿದ್ದೇನೆ. ನಾಲ್ಕನೆ ಬಾರಿಗೆ ಸ್ಪರ್ಧೆ ಮಾಡುತ್ತಿದ್ದೇನೆ. ಈ ಬಾರಿಯಾದರೂ ಮತದಾರ ಪ್ರಭು ಕೈ ಹಿಡಿಯಲಿದ್ದಾರೆಂಬ ನಂಬಿಕೆ ಇದೆ ಎಂದು ನಗರದ ದೇವತೆ ದುರ್ಗಾಂಬಿಕೆ, ಕುಲದೇವತೆ ಅಂಬಾ ಭವಾನಿಯರನ್ನು ನೆನೆದು ಕಣ್ಣೀರಿಟ್ಟರು. ಕೊನೆಗೆ ಪತ್ನಿ ಸಮಾಧಾನ ಪಡಿಸಿದರು.

ಎಲ್ಲೆಡೆ ಹಣ ಹಂಚಿಕೆ ಮಾತು ಅಲ್ಲಲ್ಲಿ ಹಣ ಹಂಚಿಕೆಯಾಗಿದ್ದ ಕುರಿತು ಮಾತುಗಳು ಕೇಳಿಬಂದವು. ದಕ್ಷಿಣ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಅಮಾನುಲ್ಲಾ ಖಾನ್‌ ಹಣ ಹಂಚಿಕೆ ಕುರಿತು ಆರೋಪ ಸಹ ಮಾಡಿದರು. ನಾಲ್ಕಾರು ಕಡೆ ಹಣ ಹಂಚಿಕೆ ಮಾಡುವುದನ್ನು ವೀಡಿಯೋ ಸಮೇತ ಚಿತ್ರೀಕರಿಸಿರುವುದಾಗಿ ಮಾಧ್ಯಮಗಳಿಗೆ ಹೇಳಿಕೆ ಸಹ ನೀಡಿದರು. ಆದರೆ, ಇಡೀ ದಿನ ಅಲ್ಲಲ್ಲಿ ಹಣ ಹಂಚಿಕೆಮಾಡುವ ಕುರಿತು ಮಾತುಗಳು ಮಾತ್ರ ಕ್ಷೇತ್ರದಲ್ಲಿ ಕೇಳಿಬಂದವು.

Advertisement

Udayavani is now on Telegram. Click here to join our channel and stay updated with the latest news.

Next