ದಾವಣಗೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ದಾವಣಗೆರೆಯಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿ ಬಹುತೇಕ ಅತ್ಯಂತ ಅವೈಜ್ಞಾನಿಕ ಮತ್ತು ಕಳಪೆ ಗುಣಮಟ್ಟದ್ದಾಗಿವೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಜೆ. ಅಮಾನುಲ್ಲಾಖಾನ್ ದೂರಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿತ ಸ್ಮಾರ್ಟ್‌ಸಿಟಿ ಯೋಜನೆಯಡಿ ಮುಂದಿನ 50 ವರ್ಷಗಳ ಕಾಲದ ನಂತರವೂ ಜನರಿಗೆ ಉಪಯೋಗ ಆಗುವಂತೆ ವಿನ್ಯಾಸ ಮಾಡಿ ಕಾಮಗಾರಿ ಕೈಗೊಳ್ಳಲಾಗುತ್ತದೆ. ಆದರೆ, ಈಗಾಗಲೇ ಅನೇಕ ಕಡೆ ಮುಕ್ತಾಯ ಹಂತದಲ್ಲಿರುವ ಚರಂಡಿ ಕಾಮಗಾರಿ ಸಾರ್ವಜನಿಕರಿಗೆ ಅನುಕೂಲಕ್ಕಿಂತ ಹೆಚ್ಚಾಗಿ ಅನಾನುಕೂಲ ಉಂಟು ಮಾಡುವಂತಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಸ್ಮಾರ್ಟ್‌ಸಿಟಿ ಯೋಜನೆಯಡಿ ಮಹಾತ್ಮಗಾಂಧಿ ರಸ್ತೆ, ಮಂಡಿಪೇಟೆ, ಚೌಕಿಪೇಟೆಯಲ್ಲಿ ಚರಂಡಿಗಾಗಿ ಹಾಕಿರುವ ಪೈಪ್‌ಗ್ಳ ಛೇಂಬರ್ ಮೇಲೆ ಹಾಕಿರುವಂತಹ ಸ್ಲ್ಯಾಬ್ ಸಮತಟ್ಟಾಗಿಲ್ಲದೆ ವಾಹನ ಸಂಚಾರ ಮತ್ತು ನಿಲುಗಡೆಗೆ ತೊಂದರೆ ಆಗುತ್ತಿದೆ. ಆ ಕಾಮಗಾರಿಗೆ ಕೋಟ್ಯಾಂತರ ರೂಪಾಯಿ ಟೆಂಡರ್ ಕರೆಯಲಾಗಿದೆ. ಈಗಾಗಲೇ ಲೋಕೋಪಯೋಗಿ ಇಲಾಖೆ ನಿಗದಿ ಪಡಿಸಿರುವಂತೆ ರಸ್ತೆಗಳ ಅಳತೆಗೆ ಅನುಗುಣವಾಗಿ ಕಾಮಗಾರಿ ಕೈಗೊಂಡಿಲ್ಲ ಎಂದು ತಿಳಿಸಿದರು.
ಚರಂಡಿ ಕಾಮಗಾರಿ ಗಮನಿಸಿದರೆ 50 ವರ್ಷವಾದರೂ ಏನೂ ಆಗದಂತಹ ಚರಂಡಿಗಳನ್ನು ಬೇಕಾಬಿಟ್ಟಿಯಾಗಿ ಅಗೆದು, ಮನಸ್ಸಿಗೆ ಬಂದಂತೆ ಕಾಂಕ್ರಿಟ್ ಹಾಕಲಾಗುತ್ತಿದೆ. ಕಾಮಗಾರಿಗಳ ಬಗ್ಗೆ ಯಾರಾದರೂ ಪ್ರಶ್ನೆ ಮಾಡಿದರೆ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಆ ಕಾಮಗಾರಿಯತ್ತ ಮುಖ ಮಾಡುವುದೇ ಇಲ್ಲ. ಯಾವುದೇ ಕಾಮಗಾರಿ ಕೈಗೊಳ್ಳುವ ಮುನ್ನ ಸಂಬಂಧಿತ ಅಧಿಕಾರಿಗಳ ಜೊತೆ ಚರ್ಚೆ ಮಾಡಿ, ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿ ಪ್ರಾರಂಭಿಸದೇ ಇರುವ ಕಾರಣಕ್ಕೆ ಸಾಕಷ್ಟು ಸಮಸ್ಯೆ ಆಗುತ್ತಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಬಸ್ ನಿಲ್ದಾಣದಲ್ಲಿ ಬಹು ಮಹಡಿ ಕಟ್ಟಡ ನಿರ್ಮಾಣದ ಟೆಂಡರ್ ಸಹ ಅವೈಜ್ಞಾನಿಕವಾಗಿದೆ. ಬಸ್ ನಿಲ್ದಾಣ ಪಕ್ಕದಿಂದ ಅಶೋಕ ಚಿತ್ರಮಂದಿರ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಇರುವಂತಹ ಏಕೈಕ ಅವಕಾಶವನ್ನು ವ್ಯವಸ್ಥಿತವಾಗಿ ವಂಚಿಸಲಾಗುತ್ತಿದೆ. ಬಸ್ ನಿಲ್ದಾಣ ಸ್ಥಳಾಂತರ ನೆಪದಲ್ಲಿ ಹೈಸ್ಕೂಲ್ ಮೈದಾನದಲ್ಲಿ ಕೆಲವೇ ಕೆಲ ದಿನಗಳಿಗಾಗಿ ಕೋಟ್ಯಾಂತರ ರೂಪಾಯಿ ಹಣ ಪೋಲು ಮಾಡಲಾಗುತ್ತಿದೆ ಎಂದು ದೂರಿದರು.
ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿ ಗುತ್ತಿಗೆ ಪಡೆದವರಲ್ಲಿ ಕೆಲವರು ತಮಗೆ ಬೇಕಾದವರಿಗೆ ಉಪ ಗುತ್ತಿಗೆ ನೀಡುವುದು, ಅವರಿಗೆ ಕೆಲಸ ಗೊತ್ತೇ ಇಲ್ಲದಿರುವ ಕಾರಣದಿಂದ ಸಾಕಷ್ಟು ಅವಾಂತರ ಆಗುತ್ತಿದೆ. ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿ ಸ್ಮಾರ್ಟ್ ಆಗುತ್ತಿಲ್ಲ. ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸಂಬಂಧಿತರು ಗಮನ ಹರಿಸಿ, ಒಳ್ಳೆಯ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ಸಲ್ಲಿಸುವ ಜೊತೆಗೆ ಸ್ಮಾರ್ಟ್‌ಸಿಟಿ ಕಂಪನಿ ಮತ್ತು ಜಿಲ್ಲಾಡಳಿತದ ವಿರುದ್ಧ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರಧಾನ ಕಾರ್ಯದರ್ಶಿ ಖಾದರ್ ಬಾಷಾ, ಮನ್ಸೂರ್ ಅಲಿ, ಹಿನಾಯತ್ ಅಲಿಖಾನ್, ಪ್ರಭುಲಿಂಗಸ್ವಾಮಿ, ನರಸಿಂಹಮೂರ್ತಿ, ಜಿಕ್ರಿಯಾಸಾಬ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.