ದಾವಣಗೆರೆ: ದಾವಣಗೆರೆಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಅತ್ಯಂತ ಅವೈಜ್ಞಾನಿಕ, ಕಳಪೆಯಾಗಿವೆ ಎಂದು ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್ ಎಸ್. ದೇವರಮನೆ ದೂರಿದ್ದಾರೆ. ಸ್ಮಾರ್ಟ್‌ಸಿಟಿ ಯೋಜನೆಯ ಅಧಿಕಾರಿಗಳಿಗೆ ಸ್ಥಳೀಯವಾಗಿ ಯಾವುದೇ ಮಾಹಿತಿ ಇಲ್ಲ. ಕಾಮಗಾರಿಯಲ್ಲಿ ದೂರದೃಷ್ಟಿತ್ವವೇ ಇಲ್ಲ. ಹಾಗಾಗಿ ಕೇಂದ್ರ ಸರ್ಕಾರದ ಅತೀ ಮಹತ್ವಾಕಾಂಕ್ಷಿತ ಸ್ಮಾರ್ಟ್‌ಸಿಟಿ ಯೋಜನೆ ದಾವಣಗೆರೆಯಲ್ಲಿ ಸಂಪೂರ್ಣ ವಿಫಲ ವಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಸ್ಮಾರ್ಟ್‌ಸಿಟಿ ಯೋಜನೆ ನಿಯಮದ ಪ್ರಕಾರ ಯಾವುದೇ ಕಾಮಗಾರಿ 6 ತಿಂಗಳಲ್ಲಿ ಮುಕ್ತಾಯವಾಗಬೇಕು. ಆದರೆ, ಮಂಡಿಪೇಟೆ ಇತರೆಡೆ ಎರಡು ವರ್ಷದಿಂದ ಕಾಮಗಾರಿ ನಡೆಯುತ್ತಲೇ ಇವೆ. ಮಂಡಿಪೇಟೆಯಲ್ಲಿ ರಸ್ತೆ ಮಾಡಬೇಕು ಎಂದು ಯಾರೂ ಅರ್ಜಿ ಸಲ್ಲಿಸಿರಲಿಲ್ಲ. ಚೆನ್ನಾಗಿ ಇದ್ದಂತಹ ರಸ್ತೆಯನ್ನು ಹಾಳು ಮಾಡಲಾಗಿದೆ. ಈಗಲೂ ಚರಂಡಿ ನೀರು ಹರಿಯುತ್ತದೆ. ಧಾರಾಳವಾಗಿ ಹಣದ ದುರ್ಬಳಕೆ ಆಗುತ್ತಿದೆ. ಸ್ಮಾರ್ಟ್‌ಸಿಟಿ ಯೋಜನೆ ಅಧಿಕಾರಿಗಳಿಗೆ ತಾಂತ್ರಿಕ ಮಾಹಿತಿಯೇ ಇಲ್ಲ ಎನ್ನುವುದಕ್ಕೆ ಅನೇಕ ಕಾಮಗಾರಿ ಸಾಕ್ಷಿ ಯಾಗಿವೆ ಎಂದು ತಿಳಿಸಿದರು.
ಕುಂದುವಾಡ ಕೆರೆಯಲ್ಲಿ ಸೈಕಲ್ ಪಾಥ್‌ಗೆ 13.5 ಕೋಟಿ ಟೆಂಡರ್ ಆಗಿದೆ. ಅಲ್ಲಿ ಏನಾದರೂ ಸೈಕಲ್ ಪಾಥ್ ಮಾಡಿದರೆ ಅದು ಬೈಕ್ ರೈಡಿಂಗ್ ಪಾಥ್ ಆಗುತ್ತದೆ. ವಾಯುಸಂಚಾರಕ್ಕೆ ಅಡ್ಡಿ, ಕಿರಿಕಿರಿ ಆಗುತ್ತದೆ. ದಾವಣಗೆರೆಯ ಅನೇಕ ರಸ್ತೆಯಲ್ಲಿ ಫುಟ್ಪಾತ್ ಇಲ್ಲ. ಆ ಬಗ್ಗೆ ಗಮನ ನೀಡದ ಅಧಿಕಾರಿಗಳು ಅಗತ್ಯವೇ ಇರದ ಕಡೆ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದ್ದಾರೆ ಎಂದು ದೂರಿದರು.
ಸ್ಮಾರ್ಟ್‌ಸಿಟಿ ಯೋಜನೆಯಡಿ ಹಸಿರೀಕರಣ ಮಾಡಲಾಗುತ್ತದೆ. ಆದರೆ, ಅದಕ್ಕೆ ಸಂಬಂಧಿಸಿದಂತೆ ಇಲ್ಲಿನ ಅರಣ್ಯ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸಂಪರ್ಕಿಸುವುದೇ ಇಲ್ಲ. ಕಡೆಯ ಪಕ್ಷ ಜಿಲ್ಲಾಧಿಕಾರಿಗಳನ್ನೂ ಸಭೆಗೆ ಆಹ್ವಾನಿಸುವುದೇ ಇಲ್ಲ. ಹಸಿರೀಕರಣ ಮಾಡಬೇಕು ಎನ್ನುವುದು ನಿಜ. ಆದರೆ, ಸ್ಮಾರ್ಟ್‌ಸಿಟಿ ಯೋಜನೆಯಡಿ ಹಸಿರೀಕರಣ ಅಕ್ಷರಶಃ ಬ್ಯುಸಿನೆಸ್ ಆಗಿದೆ. ಕೋಟಿಗಟ್ಟಲೆ ಹಣ ನೀಡಿ ವಿದೇಶಗಳಿಂದ ಮರ ತಂದು ಹಸಿರೀಕರಣ ಮಾಡಲಾಗುತ್ತಿದೆ. ಅಂತಹ ಮರ ನೆಡಲಿಕ್ಕೆ ಅನೇಕ ಭಾಗದಲ್ಲಿ 2 ಅಡಿಯಷ್ಟೂ ಫುಟ್ಪಾತ್ ಇಲ್ಲ ಎಂದು ತಿಳಿಸಿದರು.
ಸ್ಮಾರ್ಟ್‌ಸಿಟಿ ಯೋಜನೆಯಡಿ ಆಕ್ಸಿಜನ್ ಪಾರ್ಕ್‌ಗಾಗಿ ಕೋಟಿಗಟ್ಟಲೆ ಹಣ ವ್ಯಯ ಮಾಡಲಾಗುತ್ತಿದೆ. ಅದೇ ಹಣದಲ್ಲಿ ದಾವಣಗೆರೆಯಲ್ಲಿನ 125 ಪಾರ್ಕ್ ಅಭಿವೃದ್ಧಿ ಪಡಿಸಬಹುದಿತ್ತು. ಪ್ರತಿ ಪಾರ್ಕ್‌ನಲ್ಲಿ ಕಾವಲುಗಾರರನ್ನು ನೇಮಕ ಮಾಡುವ ಮೂಲಕ ಉಚಿತವಾಗಿ ಆಮ್ಲಜನಕ ಪಾರ್ಕ್ ಮಾಡಬಹುದು. ಆದರೆ, ಅಧಿಕಾರಿಗಳಿಗೆ ಅದು ಬೇಕಾಗಿಲ್ಲ. ಅನುದಾನ ಬಳಕೆ ಆಗಬೇಕು ಅಷ್ಟೇ ಎನ್ನುವಂತೆ ಬಳಕೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೆ ನೀಡಿಯೇ ಇಲ್ಲ. ಅನೇಕರ ಟೆಂಡರ್ ರದ್ದುಪಡಿಸಲಾಗಿದೆ. ಕೆಲವು ಗುತ್ತಿಗೆದಾರರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇಲ್ಲಿನ ಗುತ್ತಿಗೆದಾರರಿಗೆ ಕೆಲಸ ನೀಡಿದರೆ, ಕೆಲಸ ಮಾಡುವಾಗ ಮಹಾನಗರ ಪಾಲಿಕೆಯವರನ್ನು ಸಂಪರ್ಕಿಸಿದರೆ ಸಾಕಷ್ಟು ಅನುಕೂಲ ಆಗುತ್ತದೆ. ಆದರೆ, ಹಾಗೆ ಮಾಡದೆ ತಮಗೆ ಬೇಕಾದಂತೆ, ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸ್ಮಾರ್ಟ್‌ಸಿಟಿ ಯೋಜನೆ ಅಧಿಕಾರಿಗಳು ಕೂಡಲೇ ತಮ್ಮ ಕೆಲಸ ಸರಿಪಡಿಸಿಕೊಳ್ಳಬೇಕು. ನಗರಪಾಲಿಕೆ, ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ಸ್ಮಾರ್ಟ್‌ಸಿಟಿ ಯೋಜನೆಗೆ ತಕ್ಕಂತೆ ಕೆಲಸ ಮಾಡಬೇಕು. ಇಲ್ಲದೇ ಹೋದಲ್ಲಿ ಕಾನೂನಾತ್ಮಕದ ಜೊತೆಗೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪರಿಸರ ಸಂರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಬಿ.ಎಸ್. ರಾಘವೇಂದ್ರ, ಜನಸಾಮಾನ್ಯರ ಸೇವಾ ಸಂಸ್ಥೆಯ ಪ್ರಸನ್ನ ಬೆಳಕೆರೆ, ಕರುನಾಡ ಕನ್ನಡ ಸೇನೆ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಕೆ.ಟಿ. ಗೋಪಾಲಗೌಡ, ಕರ್ನಾಟಕ ಮಕ್ಕಳ ಅಕಾಡೆಮಿ ಅಧ್ಯಕ್ಷ ಆರ್.ಬಿ. ಹನುಮಂತಪ್ಪ ಸುದ್ದಿಗೋಷ್ಠಿಯಲ್ಲಿದ್ದರು.