Advertisement

ಶ್ರಾವಣ ಬಂದರೂ ಹೊಲ-ಗದ್ದೆ ಭಣ ಭಣ!

09:55 AM Aug 02, 2019 | Naveen |

ರಾ. ರವಿಬಾಬು
ದಾವಣಗೆರೆ:
ಶ್ರಾವಣ ಮಾಸ, ನಾಗರ ಪಂಚಮಿ ಬಂದರೂ ರೈತರ ಮೊಗದಲ್ಲಿ ಹಬ್ಬದ ಖುಷಿಯೇ ಇಲ್ಲ.

Advertisement

ಪದೆ ಪದೇ ಮಳೆ ಕೈ ಕೊಡುತ್ತಿರುವ ಕಾರಣಕ್ಕೆ ಅರ್ಧದಷ್ಟು ಹೊಲ-ಗದ್ದೆಯಲ್ಲಿ ಬಿತ್ತನೆಯೇ ಆಗದಿರುವುದು ರೈತರಲ್ಲಿ ಮಾತ್ರವಲ್ಲ ಎಲ್ಲಿಯೂ ಹಬ್ಬದ ಸಂಭ್ರಮವೇ ಕಂಡು ಬರುತ್ತಿಲ್ಲ!.

ಮುಂಗಾರು ಹಂಗಾಮು ಬಹುತೇಕ ಮುಗಿಯುತ್ತಾ ಬರುತ್ತಿದ್ದರೂ ಮಳೆಯ ಕೊರತೆಯ ಪರಿಣಾಮ ಈವರೆಗೆ ನಡು ಕರ್ನಾಟಕದ ಕೇಂದ್ರಬಿಂದು ದಾವಣಗೆರೆ ಜಿಲ್ಲೆಯಲ್ಲಿ ಬಿತ್ತನೆಯಾಗಿರುವುದು ಶೇ.54.32 ಮಾತ್ರ!.

ಶ್ರಾವಣ ಮಾಸದಲ್ಲೂ ಹೊಲ-ಗದ್ದೆಯಲ್ಲಿ ಹಸಿರು ಎನ್ನುವುದೇ ಕಂಡು ಬರುತ್ತಿಲ್ಲ. ಶ್ರಾವಣ ಹೊಲ-ಗದ್ದೆಯಲ್ಲಿ ಬೆಳೆಗಳು ನಳಿನಳಿಸುವ, ಭೂರಮೆ ಹಚ್ಚಹಸಿರಿನಿದ ಮುದ ನೀಡುವ ಕಾಲ. ಕೈಗೆ ಅಕ್ಕಡಿ ಬೆಳೆ ಬಂದ ಸಂಭ್ರಮದಲ್ಲಿ ಭರ್ಜರಿಯಾಗಿಯೇ ನಾಗರಪಂಚಮಿ, ಹಬ್ಬ ಆಚರಿಸುವ ಸಮಯ. ಆದರೆ, ಈ ಮುಂಗಾರು ಹಂಗಾಮಿನಲ್ಲಿ ಹಬ್ಬದ ವಾತಾವರಣವೇ ಕಂಡು ಬರದಂತಾಗಿದೆ. ಮಳೆಯ ಕೊರತೆ, ಬಿತ್ತನೆ ಕಡಿಮೆ ಆಗಿರುವುದು ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಕಳೆದ ಏಪ್ರಿಲ್ನಲ್ಲಿ 36 ಮಿಲಿ ಮೀಟರ್‌ ವಾಡಿಕೆ ಮಳೆಗೆ 18 ಮಿಲಿ ಮೀಟರ್‌, ಮೇ ತಿಂಗಳಲ್ಲಿ 75 ಮಿಲಿ ಮೀಟರ್‌ಗೆ 34, ಜೂನ್‌ನಲ್ಲಿ 76 ಮಿಲಿ ಮೀಟರ್‌ಗೆ 60, ಜುಲೈನಲ್ಲಿ 116 ಮಿಲಿ ಮೀಟರ್‌ಗೆ 89 ಮಿಲಿ ಮೀಟರ್‌ ಮಾತ್ರ ಮಳೆ ಆಗಿರುವುದು ಬಿತ್ತನೆ ತೀವ್ರ ಪ್ರಮಾಣದಲ್ಲಿ ಕಡಿಮೆ ಆಗಲು ಕಾರಣ.

Advertisement

ಪೂರ್ವ ಮುಂಗಾರು ಹಾಗೂ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಜ.1 ರಿಂದ ಜು.31ರ ವರೆಗೆ 309 ಮಿಲಿ ಮೀಟರ್‌ ಮಳೆಯಾಗಬೇಕಿತ್ತು. ಆಗಿರುವುದು 205 ಮಿಲಿ ಮೀಟರ್‌ ಮಾತ್ರ. ಶೇ.24 ರಷ್ಟು ಮಳೆಯ ಕೊರತೆಯಿಂದ ಈವರಗೆ ಕೃಷಿ ಇಲಾಖೆ ಹೊಂದಿರುವ ಗುರಿಯಲ್ಲಿ ಅರ್ಧದಷ್ಟು ಮಾತ್ರ ಬಿತ್ತನೆ ಆಗಿದೆ. ಇದು ಸಹಜವಾಗಿಯೇ ರೈತಾಪಿ ಒಳಗೊಂಡಂತೆ ಎಲ್ಲಾ ವರ್ಗದಲ್ಲಿನ ಆತಂಕಕ್ಕೆ ಕಾರಣವಾಗಿದೆ.

ಜು.31ರ ಅಂತ್ಯಕ್ಕೆ ದಾವಣಗೆರೆ ತಾಲೂಕಿನಲ್ಲಿ 34,344 ಹೆಕ್ಟೇರ್‌ ಪೈಕಿ ಮಳೆಯಾಶ್ರಿತ ಪ್ರದೇಶದಲ್ಲಿ 30,647 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಅದರಂತೆ ಹರಿಹರ ತಾಲೂಕಿನಲ್ಲಿ 7,360 ಹೆಕ್ಟೇರ್‌ ಗುರಿಗೆ 3,981 ಹೆಕ್ಟೇರ್‌, ಜಗಳೂರುನಲ್ಲಿ 50,470 ಹೆಕ್ಟೇರ್‌ಗೆ 38,522, ಹೊನ್ನಾಳಿಯಲ್ಲಿ 32,120 ಹೆಕ್ಟೇರ್‌ಗೆ 29,695, ಚನ್ನಗಿರಿಯಲ್ಲಿ 31,402 ಹೆಕ್ಟೇರ್‌ಗೆ 24,199 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, ಜೋಳ, ರಾಗಿ, ಇತರೆ ಬೆಳೆ ಬಿತ್ತನೆ ಮಾಡಲಾಗಿದೆ. ಒಟ್ಟಾರೆಯಾಗಿ 1,55,696 ಹೆಕ್ಟೇರ್‌ಗೆ 1,27,074 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

ನೀರಾವರಿ ಪ್ರದೇಶದಲ್ಲೂ ಬಿತ್ತನೆ ಪ್ರಮಾಣ ಅಷ್ಟೇನು ಉತ್ಸಾಹದಾಯಕವಾಗಿಲ್ಲ. ಭದ್ರಾ ಜಲಾಶಯದಿಂದ ದೊರೆಯುವ ನೀರಿನ ಲಭ್ಯತೆಯ ಆಧಾರದಲ್ಲಿ ಭತ್ತ ಬೆಳೆಯಬೇಕಾಗುತ್ತದೆ. ಸದ್ಯಕ್ಕೆ ಭದ್ರಾ ಜಲಾಶಯದಲ್ಲಿ 145 ಅಡಿ ನೀರು ಇರುವುದು. ಮುಂದಿನ ದಿನಗಳಲ್ಲಿ ಕಾಡಾ ಸಮಿತಿ ನಿರ್ಧಾರದ ಮೇಲೆ ಭತ್ತ ಬೆಳೆಯುವುದೋ ಇಲ್ಲವೋ ಎಂಬುದು ಖಚಿತವಾಗಲಿದೆ.

ಜಿಲ್ಲೆಯ 87,542 ಹೆಕ್ಟೇರ್‌ ನೀರಾವರಿ ಪ್ರದೇಶದಲ್ಲಿ ಈವರೆಗೆ ಕೇವಲ 5,053 ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ.

ದಾವಣಗೆರೆ ತಾಲೂಕಿನಲ್ಲಿ 29,060 ಹೆಕ್ಟೇರ್‌ ಪ್ರದೇಶದಲ್ಲಿ 990, ಹರಿಹರದಲ್ಲಿ 24,640 ಹೆಕ್ಟೇರ್‌ನಲ್ಲಿ 2,514, ಜಗಳೂರಿನಲ್ಲಿ 3,530 ಹೆಕ್ಟೇರ್‌ಗೆ 62, ಹೊನ್ನಾಳಿಯಲ್ಲಿ 16,685 ಹೆಕ್ಟೇರ್‌ಗೆ 1,492 ಹಾಗೂ ಚನ್ನಗಿರಿಯಲ್ಲಿ 13,447 ಹೆಕ್ಟೇರ್‌ಗೆ 15 ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ ಎನ್ನುತ್ತವೆ ಕೃಷಿ ಇಲಾಖೆ ಮೂಲಗಳು. ದಾವಣಗೆರೆ ಜಿಲ್ಲೆಯಲ್ಲಿ ಮಳೆಯಾಶ್ರಿತ ಮತ್ತು ನೀರಾವರಿ ಒಳಗೊಂಡಂತೆ ಒಟ್ಟು 2,43,238 ಹೆಕ್ಟೇರ್‌ನಲ್ಲಿ 1,32,127 ಹೆಕ್ಟೇರ್‌ನಲ್ಲಿ(ಶೇ.54.32) ಬಿತ್ತನೆಯಾಗಿದೆ.

ದಾವಣಗೆರೆ ತಾಲೂಕಿನಲ್ಲಿ 63,404 ಹೆಕ್ಟೇರ್‌ಗೆ 31,637(ಶೇ.49.90), ಹರಿಹರದಲ್ಲಿ 32 ಸಾವಿರ ಹೆಕ್ಟೇರ್‌ಗೆ 6,495(ಶೇ.20.30), ಜಗಳೂರಿನಲ್ಲಿ 54 ಸಾವಿರ ಹೆಕ್ಟೇರ್‌ಗೆ 38,614(ಶೇ.71.50), ಹೊನ್ನಾಳಿಯಲ್ಲಿ 48,985 ಹೆಕ್ಟೇರ್‌ಗೆ 31,167(ಶೇ.63.63), ಚನ್ನಗಿರಿಯಲ್ಲಿ 44,849 ಹೆಕ್ಟೇರ್‌ನಲ್ಲಿ 24,214(ಶೇ.53.99) ಬಿತ್ತನೆ ನಡೆದಿದೆ.

ಜುಲೈ ಮುಗಿದು ಆಗಸ್ಟ್‌ ಬಂದರೂ ಇಡೀ ಜಿಲ್ಲೆಯಲ್ಲಿ ಬಿತ್ತನೆ ಪ್ರಮಾಣ ಶೇ.54.32 ರಷ್ಟು ಆಗಿರುವುದು. ಈಗಲೂ ಮಳೆಯ ಕಣ್ಣಾಮುಚ್ಚಾಲೆ ರೈತಾಪಿ ವರ್ಗದಲ್ಲಿ ಆತಂಕ ಮೂಡಿಸಿದೆ.

ಅಕ್ಕಡಿ ಬೆಳೆಯೇ ಇಲ್ಲ
ಶ್ರಾವಣ ಮಾಸದಲ್ಲಿನ ಹಬ್ಬ-ಹರಿದಿನಗಳ ಖರ್ಚು ಸರಿದೂಗಿಸಲು ಮೊದಲು ಮುಖ್ಯ ಬೆಳೆಗಳ ಜೊತೆ ಅಕ್ಕಡಿ ಬೆಳೆ ರೂಪದಲ್ಲಿ ಎಳ್ಳು, ತೊಗರಿ, ಅಲಸಂದೆ ಇತರೆ ಬೆಳೆ ಬೆಳೆಯಲಾಗುತ್ತಿತ್ತು. ಶ್ರಾವಣದ ಹೊತ್ತಿಗೆ ಎಳ್ಳು ಮಾರಿ ಹಬ್ಬ ಮಾಡುತ್ತಿದ್ದರು. ಹಬ್ಬದಲ್ಲಿ ಎಳ್ಳುಂಡೆ… ತಯಾರಿಸುತ್ತಿದ್ದರು. ಆದರೆ, ಈಗ ಮಳೆಯೇ ಇಲ್ಲದಂತಾಗಿ, ಅಕ್ಕಡಿ ಬೆಳೆ ಬೆಳೆಯುವುದೇ ಕಡಿಮೆ ಆಗಿದೆ. 435 ಹೆಕ್ಟೇರ್‌ನಲ್ಲಿ ಎಳ್ಳು ಬಿತ್ತನೆ ಗುರಿಗೆ ಈವರೆಗೆ 15 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಹುರುಳಿ 510ಕ್ಕೆ 0, ಉದ್ದು 184ಕ್ಕೆ 19, ಹೆಸರು 300ಕ್ಕೆ 29, ಅಲಸಂದೆ ಇತರೆ 1,248ಕ್ಕೆ 278 ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next