ದಾವಣಗೆರೆ: ನಕಲಿ ದಾಖಲೆಗಳನ್ನು ಸೃಷ್ಠಿಮಾಡಿ ಆಸ್ತಿ ಕ್ರಯದ ಕರಾರು ಪತ್ರ ನೋಂದಣಿ ಮಾಡಿಸಲಾಗಿದೆ ಎಂಬ ಆರೋಪ ಎದುರಿಸುತ್ತಿದ್ದ ಸಾಮಾಜಿಕ ಕಾರ್ಯಕರ್ತನನ್ನು ಪೊಲೀಸರು ವಿಚಾರಣೆಗೆ ಕರೆ ತರುವಾಗ ಸೇತುವೆಯಿಂದ ಕೆಳಗೆ ಹಾರಿದ ಪರಿಣಾಮ ಸಾವನ್ನಪ್ಪಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಚನ್ನಗಿರಿ ತಾಲೂಕಿನ ಕಾಕನೂರು ಗ್ರಾಮದ ಆರ್ ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಸಾವನ್ನಪ್ಪಿದವರು.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿ ಆವರಗೆರೆ ಗ್ರಾಮದ ಸ.ನಂ 240/ 2ಬಿ ರಲ್ಲಿ ಅಲಿನೇಷನ್ ಆಗಿ ಡೋರ್ ನಂಬರ್ ಆಗಿರುವ 3 ನಿವೇಶನಗಳನ್ನು ಮೃತ ಹೆಚ್.ಆರ್ ಹರೀಶ್ ನಕಲಿ ದಾಖಲೆಗಳನ್ನು ಸೃಷ್ಠಿಸಿದ್ದಲ್ಲದೆ ಯಾವುದೋ ಮಹಿಳೆಯೊಬ್ಬರಿಂದ ನಕಲಿ ಕ್ರಯದ ಕರಾರು ಪತ್ರ ನೋಂದಣಿ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಈಚೆಗೆ ಆಸ್ತಿ ಮೂಲ ಮಾಲಿಕರು ಎಂದು ಕೆ. ಬಾಬುರಾವ್ ಎನ್ನುವರು ಸುದ್ದಿಗೋಷ್ಠಿ ಸಹ ನಡೆಸಿದ್ದರು.
ದಾವಣಗೆರೆಯ ಸಬ್ ರಿಜಿಸ್ಟರ್, ಹರೀಶ್ ಸೇರಿದಂತೆ ಐದು ಮಂದಿ ಮೇಲೆ ಗಾಂಧಿನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು.
ದೂರಿನ ಸಂಬಂಧ ಪೊಲೀಸರು ಹರೀಶ್ ನನ್ನು ವಾಹನದಲ್ಲಿ ಕಾಕನೂರಿನಿಂದ ದಾವಣಗೆರೆಗೆ ಕರೆ ತರುತ್ತಿದ್ದಾಗ ತೋಳಹುಣಸೆ ಬಳಿ ಮೇಲ್ಸೇತುವೆಯಿಂದ ಕೆಳಗೆ ಹಾರಿದ ಹರೀಶ್ ತೀವ್ರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ತಮ್ಮ ಪತಿಯನ್ನ ವಿಚಾರಣೆಗೆ ಕರೆದೊಯ್ಯುತ್ತಿದ್ದ ಪೊಲೀಸರೇ ಕೊಲೆ ಮಾಡಿದ್ದಾರೆ ಎಂದು ಹರೀಶ್ ಪತ್ನಿ ದೂರು ಸಲ್ಲಿಸಿದ್ದಾರೆ. ಈಚೆಗೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಹರೀಶ್ ಚನ್ನಗಿರಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.