Advertisement

ಸಾಹಿತಿಗಿರಲಿ ವಾಸ್ತವವಾದಿತನ-ಸಾಮಾಜಿಕ ಜವಾಬ್ದಾರಿ

04:14 PM Aug 05, 2019 | Naveen |

ದಾವಣಗೆರೆ: ಕವಿ, ಲೇಖಕ, ಸಾಹಿತಿ ಸದಾ ವಾಸ್ತವವಾದಿತನ ಮತ್ತು ಸಾಮಾಜಿಕ ಜವಾಬ್ದಾರಿ ಹೊಂದಿರಬೇಕು ಎಂದು ಖ್ಯಾತ ಸಾಹಿತಿ ಡಾ| ಆನಂದ ಋಗ್ವೇದಿ ಆಶಿಸಿದ್ದಾರೆ.

Advertisement

ಭಾನುವಾರ ರೋಟರಿ ಬಾಲಭವನದಲ್ಲಿ ಚುಟುಕು ಸಾಹಿತ್ಯ ಪರಿಷತ್ತು, ಜನಮಿಡಿತ ದಿನಪತ್ರಿಕೆ, ಭಾವಸಿರಿ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ಅಣಬೇರು ತಾರಕೇಶ್‌ರವರ ಮೂರನೇ ಕವನ ಸಂಕಲನ ಒಂಟಿ ಪಯಣ… ಹಾಗೂ ಎನ್‌.ಕೆ. ಪರಮೇಶ್ವರ್‌ ಗೋಪನಾಳ್‌ರವರ ಪ್ರಥಮ ಚುಟುಕು ಸಂಕಲನ ಒಡಲ ಹನಿಗಳು… ಲೋಕಾರ್ಪಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಕವಿ, ಸಾಹಿತಿ ವರ್ತಮಾನದ ತಲ್ಲಣ, ಸಮಸ್ಯೆಗಳ ಬಗ್ಗೆ ತನ್ನ ಓದುಗರ ಮುಂದೆ ಇಡಬೇಕು. ವರ್ತಮಾನದ ಇತಿಹಾಸಕ್ಕೆ ಸಾಕ್ಷಿಯಾಗಬೇಕು ಎಂದು ತಿಳಿಸಿದರು.

ಇಂದಿನ ಆಧುನಿಕರಣ ಕಾಲಘಟ್ಟದಲ್ಲಿ ಮಾನವೀಯತೆ ಕೊರತೆ ಕಾಣಬರುತ್ತಿದೆ. ಭಾವನೆಯ ಪ್ರತೀಕವಾಗಿರುವ ಪ್ರೀತಿ ಎನ್ನುವುದು ತೀರಾ ವ್ಯವಹಾರಿಕ ವಸ್ತುವಿನಂತಾಗುತ್ತಿದೆ. ಅನೇಕ ಕಾರಣಗಳಿಂದ ಜಗತ್ತಿನ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಒಂಟಿತನದ ಜೀವನ ನಡೆಸುವಂತಾಗಿದೆ. ಅಂತಹ ಒಂಟಿತನದ ಕುರಿತಂತೆ ಅಣಬೇರು ತಾರಕೇಶ್‌ ಒಂಟಿ ಪಯಣ…. ಕವನ ಸಂಕಲನದಲ್ಲಿ ಅನೇಕ ಕವಿತೆಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.

ಕವಿ, ಸಾಹಿತಿ ಭ್ರಮಾಲೋಕದಲ್ಲೇ ಸುತ್ತಾಡುವ ಬದಲಿಗೆ ವಾಸ್ತವತೆಯ ಪ್ರತಿರೂಪ ಆಗಬೇಕು. ವರ್ತಮಾನದ ಇತಿಹಾಸದ ಅನುಭವಗಳ ಸಾಹಿತ್ಯಕವಾಗಿ ದಾಖಲಿಸುತ್ತಾ ಸಾಗಬೇಕು. ಬರೀ ಕನಸುಗಾರಿಕೆ, ಅದರ ಚಿತ್ರಣದಿಂದ ಸಾಹಿತ್ಯದ ಆಶಯ, ಹಂಬಲ ಈಡೇರಲಾರದು. ವಾಸ್ತವತೆಯ ಕುರಿತು ಬರೆದಾಗ ಅದು ಮುಂದಿನ ಇತಿಹಾಸ ಆಗುತ್ತದೆ ಎಂದು ತಿಳಿಸಿದರು.

ಈಗಿನ ವಾತಾವರಣದಲ್ಲಿ ನಂಬಿಕೆಯ ಕೊರತೆಯಿಂದಾಗಿಯೇ ದಾಂಪತ್ಯದ ನಡುವೆ ಅಪಸ್ವರ ಹೆಚ್ಚಾಗುತ್ತಿದೆ. ಬೇರೆಯಾಗುವ ವಿಚ್ಛಿದ್ರಕಾರಿತನ ಸುಳಿದಾಡುತ್ತಿದೆ. ಎಲ್ಲರಲ್ಲೂ ಒಂಟಿತನ ಕಾಡುತ್ತಿದೆ. ಒಂಟಿಯಾಗಿಯೇ ಬದುಕುವುದು ಸಾಮಾನ್ಯ ಎನ್ನುವಂತಾಗುತ್ತಿರುವುದರ ನಡುವೆ ಸಮುದಾಯಿಕ ಬದುಕು ಹೇಗೆ ಸಾಧ್ಯ ಎಂಬುದು ಕವಿಯನ್ನು ಕಾಡುತ್ತಿದೆ. ಮಾನವೀಯತೆ ಕಾಣೆಯಾಗುತ್ತಿರುವ ಕುರಿತಂತೆ ಇರುವ ಮರೆಯಾದ ಮಾಣಿಕ್ಯ… ಎಂಬ ಕವನದಲ್ಲಿ ಅತ್ಯಾಚಾರಕ್ಕೀಡಾದ ಅಪ್ರಾಪ್ತೆಗೆ ಶಾಂತಿ ಸಿಗಲವ್ವ ನಿನಗೆ… ಎಂಬ ಕವಿಯ ಪ್ರಾರ್ಥನೆ ಆತನ ಬಯಕೆ, ಉದ್ದೇಶ, ಭಾವನೆಯನ್ನು ತೋರಿಸುತ್ತದೆ. ಕನ್ನಡ ಸಾಹಿತ್ಯ ಲೋಕಕ್ಕೆ ವರ್ತಮಾನದ ಇತಿಹಾಸದ ಸಾಹಿತ್ಯದ ಹೊನಲು ಹರಿದು ಬರುವಂತಾಗಲಿ ಎಂದು ಆಶಿಸಿಸದರು.

Advertisement

ಸಾಹಿತಿ ಬಸವರಾಜ ಹನುಮಲಿ ಮಾತನಾಡಿ, ಓದುಗರಿಂದಲೇ ಯಾವುದೇ ಕಾವ್ಯ, ಲೇಖನ, ಕಾದಂಬರಿಗೆ ಬೆಲೆ, ಗೌರವ ಬರುತ್ತದೆ. ಅಣಬೇರು ತಾರಕೇಶ್‌ರವರ ಮೂರನೇ ಕವನ ಸಂಕಲನ ಒಂಟಿ ಪಯಣ… ಹಾಗೂ ಎನ್‌.ಕೆ. ಪರಮೇಶ್ವರ್‌ ಗೋಪನಾಳ್‌ರವರ ಪ್ರಥಮ ಚುಟುಕು ಸಂಕಲನ ಒಡಲ ಹನಿಗಳು.. ನಲ್ಲಿ ಪ್ರಕೃತಿ, ಪ್ರೀತಿ, ಜಾತಿ, ಆಳುವ, ವಿರೋಧ ಪಕ್ಷ, ಇಷ್ಟದ ದೇವರು.. ಬಗ್ಗೆ ಬರೆದಿಲ್ಲ. ಬದುಕು, ಜೀವನ, ಸಾಮಾಜಿಕ ಕ್ರೌರ್ಯ, ಪರಿಸರದ ವಿನಾಶ… ಇಂತಹ ವಿಚಾರಗಳ ಕವನಗಳಿವೆ. ಕವಿ ನಮ್ಮ ಸುತ್ತಮುತ್ತಲಿನ ತಲ್ಲಣ, ಸಮಸ್ಯೆಗೆ ಸ್ಪಂದಿಸುವಂತಾಗಬೇಕು ಎಂದು ತಿಳಿಸಿದರು.

ಶ್ರೀ ಸೋಮೇಶ್ವರ ವಿದ್ಯಾಲಯ ಕಾರ್ಯದರ್ಶಿ ಕೆ.ಎಂ. ಸುರೇಶ್‌ ಮಾತನಾಡಿ, ಜೀವನದಲ್ಲಿ ಓದುವಿಕೆಗೆ ಹೆಚ್ಚಿನ ಮಹತ್ವ ನೀಡಬೇಕು. ಓದುವ ಮುಖೇನ ಧನಾತ್ಮಕ ಚಿಂತನೆ ಬರುತ್ತದೆ. ಓದು ಇಲ್ಲ ಎಂದಾದಲ್ಲಿ ಋಣಾತ್ಮಕ ಚಿಂತನೆ ಹೆಚ್ಚಾಗುತ್ತದೆ. ಓದುವಿಕೆ ಶಿಕ್ಷಣ, ಸಂಸ್ಕೃತಿಯನ್ನು ಕಲಿಸಿಕೊಡುತ್ತದೆ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಜಿ.ಎಂ.ಆರ್‌. ಆರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಗಂಗಮ್ಮ ಪರಮೇಶ್ವರಪ್ಪ, ಕೆ.ಕೆ. ಶಿವಬಸವ, ಜಿ.ಎಚ್. ರಾಜಶೇಖರ ಗುಂಡಗಟ್ಟಿ, ಮಹಾರುದ್ರಸ್ವಾಮಿ ಇತರರು ಇದ್ದರು. ರಾಜ್ಯ ಮಟ್ಟದ ಕವಿಗೋಷ್ಠಿ ನಡೆಯಿತು.

ಶೋಭಾ ಮಂಜುನಾಥ್‌ ಪ್ರಾರ್ಥಿಸಿದರು. ಅಪ್ಪಾಜಿ ಮುಸ್ಟೂರ್‌ ಸ್ವಾಗತಿಸಿದರು. ಸುನೀತಾ ಪ್ರಕಾಶ್‌, ಅರವಿಂದ್‌ ನಿರೂಪಿಸಿದರು. ರೇಖಾ ನಾಗರಾಜ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next