Advertisement

ಡಿಕೆಶಿ ಬಂಧನ ಖಂಡಿಸಿ ಪ್ರತಿಭಟನೆ

11:28 AM Sep 05, 2019 | Team Udayavani |

ದಾವಣಗೆರೆ: ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಬಂಧನ ಖಂಡಿಸಿ ಬುಧವಾರ ಕಾಂಗ್ರೆಸ್‌ ಕಾರ್ಯಕರ್ತರು ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಡಿ.ಕೆ. ಶಿವಕುಮಾರ್‌ ಪರ, ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆ, ಸಿಬಿಐ, ಇಡಿಯಂತಹ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್‌ ಮುಖಂಡರಿಗೆ ಎಲ್ಲಾ ರೀತಿಯ ಕಿರುಕುಳ, ಮಾನಸಿಕ ಹಿಂಸೆ ನೀಡುತ್ತಿದೆ. ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಯದೇವ ವೃತ್ತದಲ್ಲಿ ಮಾನವ ಸರಪಳಿ ರಚಿಸುವ ಮೂಲಕ ಡಿ.ಕೆ. ಶಿವಕುಮಾರ್‌ ಬಿಡುಗಡೆಗೆ ಒತ್ತಾಯಿಸಿದರು. ಡಿ.ಕೆ. ಶಿವಕುಮಾರ್‌ ಪರ ಇಡೀ ಪಕ್ಷ ಇದೆ ಎಂಬುದನ್ನ ಸಾರಿದರು.

ಡಿ.ಕೆ. ಶಿವಕುಮಾರ್‌ ಇಡಿ ವಿಚಾರಣೆಗೆ ನಿರಂತರವಾಗಿ 4 ದಿನ ಹಾಜರಾಗಿ, ಎಲ್ಲಾ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದ್ದಾರೆ. ಆದರೂ, ತನಿಖೆಗೆ ಸಹಕರಿಸುತ್ತಿಲ್ಲ ಎಂದು ಬಂಧನ ಮಾಡಿರುವುದು ಅತ್ಯಂತ ಖಂಡನೀಯ ಎಂದು ದೂರಿದರು.

ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ನಿರಂತರವಾಗಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್‌ ನಾಯಕರನ್ನೇ ಟಾರ್ಗೆಟ್ ಮಾಡಿರುವ ಅವರು ಸಿಬಿಐ, ಇಡಿಯಂತಹ ಸ್ವಾಯತ್ತ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡಿ, ಕಾಂಗ್ರೆಸ್‌ನ ಮುಖಂಡರನ್ನು ಬಂಧಿಸುವಂತೆ ಮಾಡುತ್ತಿದ್ದಾರೆ. ಮಾಜಿ ಸಚಿವ ಚಿದಂಬರಂ ನಂತರ ಈಗ ಡಿ.ಕೆ. ಶಿವಕುಮಾರ್‌ ಅವರನ್ನು ಬಂಧನಕ್ಕೆ ಒಳಪಡಿಸಲಾಗಿದೆ. ದೇಶದಲ್ಲಿ ವಿರೋಧ ಪಕ್ಷಗಳು ಇರಬಾರದು. ನಾವು ಮಾತ್ರ ಇರಬೇಕು ಎಂದು ದ್ವೇಷದ ರಾಜಕಾರಣ ಮಾಡುತ್ತಿರುವ ಬಿಜೆಪಿಗೆ ದೇಶದ ಜನರು ತಕ್ಕ ಪಾಠ ಕಲಿಸುವರು ಎಂದು ಎಚ್ಚರಿಸಿದರು.

Advertisement

ಕಾಂಗ್ರೆಸ್‌ ಮುಖಂಡರು ಮಾತ್ರವೇ ಶ್ರೀಮಂತರಿದ್ದಾರೆ. ಬಿಜೆಪಿಯಲ್ಲಿ ಇಲ್ಲವೇ ಇಲ್ಲ ಎನ್ನುವಂತೆ ವರ್ತಿಸುವ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಬಿಜೆಪಿ ಮುಖಂಡರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವ ಗೋಜಿಗೆ ಹೋಗೊಲ್ಲ. ಅಮಿತ್‌ ಶಾ ಪುತ್ರನ ಕಂಪನಿ ಕೆಲವೇ ಕೆಲ ವರ್ಷದಲ್ಲಿ ನೂರಾರು ಕೋಟಿ ವಹಿವಾಟು ನಡೆಸಿದೆ. ಆ ಬಗ್ಗೆ ಯಾಕೆ ಯಾವ ಸಂಸ್ಥೆ ತನಿಖೆ ನಡೆಸುವುದಿಲ್ಲ ಎಂದು ಪ್ರಶ್ನಿಸಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಪುಲ್ವಾಮಾ ಘಟನೆಯನ್ನೇ ಮುಂದಿಟ್ಟುಕೊಂಡು ಜನರಿಗೆ ಮಂಕುಬೂದಿ ಎರಚೆ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ದೇಶದ ಜಿಡಿಪಿ ಶೇ.5ಕ್ಕೆ ಕುಸಿದಿದೆ. ಜನಸಾಮಾನ್ಯರ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ. ಆದರೂ, ಮೋದಿ ತಮ್ಮ ಸರ್ಕಾರ ಅಚ್ಛೆದಿನ್‌… ತರಲಿದೆ ಎಂದು ಹೇಳುತ್ತಾರೆ.

ರಾಜ್ಯದ 17 ಜಿಲ್ಲೆಯಲ್ಲಿ ಭೀಕರ ನೆರೆಯಿಂದ ಜನರು ಮನೆ, ಬೆಳೆ ಎಲ್ಲವನ್ನೂ ಕಳೆದುಕೊಂಡಿದ್ದರೂ ಪ್ರಧಾನಿ ನರೇಂದ್ರ ಮೋದಿ ಒಮ್ಮೆಯೂ ರಾಜ್ಯಕ್ಕೆ ಭೇಟಿ ನೀಡಿ, ಜನರ ಸಮಸ್ಯೆ ಕೇಳಲೇ ಇಲ್ಲ. ವಿದೇಶಗಳಲ್ಲೇ ಸುತ್ತಾಡುವ ಅವರಿಗೆ ದೇಶದ ಜನರ ಸಮಸ್ಯೆ ಕೇಳುವುದಕ್ಕೆ ಸಮಯ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರಿಗೆ ಆಮಿಷವೊಡ್ಡಿ ಸಮ್ಮಿಶ್ರ ಸರ್ಕಾರ ಕೆಡವಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರದ ಮುಖ್ಯಮಂ ತ್ರಿ ಬಿ.ಎಸ್‌. ಯಡಿಯೂರಪ್ಪ 20 ಕೋಟಿ ಚೆಕ್‌ ಪಡೆದು, 21 ದಿನ ಜೈಲಿನಲ್ಲಿದ್ದರು. ಅವರನ್ನು ಏಕೆ ತನಿಖೆ ಮಾಡುವುದಿಲ್ಲ. ಇಂತಹ ಹಲವಾರು ಪ್ರಕರಣಗಳನ್ನು ಜನರ ಮುಂದೆ ಕೊಂಡೊಯ್ಯುತ್ತೇವೆ. ಬಿಜೆಪಿ ಮುಂದೆ ತಕ್ಕ ಪ್ರಾಯಶ್ಚಿತ್ತ ಅನುಭವಿಸಲಿದೆ ಎಂದು ಕಿಡಿ ಕಾರಿದರು.

ಜಿಲ್ಲಾ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ. ಶೆಟ್ಟಿ, ಜಿಲ್ಲಾ ಪಂಚಾಯತ್‌ ಸದಸ್ಯ ಕೆ.ಎಸ್‌. ಬಸವಂತಪ್ಪ, ಡಿ. ಬಸವರಾಜ್‌, ಅಯೂಬ್‌ ಪೈಲ್ವಾನ್‌, ಬಿ. ವೀರಣ್ಣ, ಡಿ.ಎನ್‌. ಜಗದೀಶ್‌, ಎ. ನಾಗರಾಜ್‌, ಎಂ. ಹಾಲೇಶ್‌, ಕೋಳಿ ಇಬ್ರಾಹಿಂ, ಡಾ| ಸಿ.ಆರ್‌. ನಸೀರ್‌ ಅಹಮ್ಮದ್‌, ಖಾಲಿದ್‌ ಅಹಮ್ಮದ್‌, ಮುಜಾಹಿದ್‌ ಪಾಷಾ, ಸೋಮಲಾಪುರದ ಹನುಮಂತಪ್ಪ, ಹರೀಶ್‌ ಕೆಂಗಲಹಳ್ಳಿ, ಎಲ್.ಎಂ. ಸಾಗರ್‌, ಎಚ್.ಜೆ. ಮೈನುದ್ದೀನ್‌, ಯತಿರಾಜ್‌, ಯುವರಾಜ್‌, ಶ್ರೀಕಾಂತ್‌ ಬಗರೆ, ಮಲ್ಲಿಕಾರ್ಜುನ್‌ ಇಂಗಳೇಶ್ವರ್‌, ಶುಭಮಂಗಳ, ಮಮ್ತಾಜ್‌ ಬೀ ಇತರರು ಇದ್ದರು. ಆಮ್‌ ಆದ್ಮೀ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next