ದಾವಣಗೆರೆ: ತುಂಗಭದ್ರಾ ನದಿ ಪಾತ್ರದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಗೆ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಬಿ. ಪಾಟೀಲ್ ಗಮನ ಸೆಳೆದ ಘಟನೆ ಮಂಗಳವಾರ ನಡೆದಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಂತರ ಸಚಿವರು, ಹರಿಹರ ತಾಲ್ಲೂಕಿನ ರಾಜನಹಳ್ಳಿ ಬಳಿಯ ತುಂಗಭದ್ರಾ ನದಿ ಪಾತ್ರದಲ್ಲಿನ ಗುತ್ತಿಗೆದಾರರ ಸ್ಟಾಕ್ ಯಾರ್ಡ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಜನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್ ಎಂಬುವರು, ಅಲ್ಲಿನ ಅಕ್ರಮ ಮರಳುಗಾರಿಕೆ ಕುರಿತು ದೂರಿದರು.
ನದಿ ಪಾತ್ರದಲ್ಲಿ ಒಂದು ಮೀಟರ್‌ಗಿಂತ ಹೆಚ್ಚು ಆಳ ಗುಂಡಿ ತೆಗೆಯಬಾರದೆಂಬ ನಿಯಮವಿದ್ದರೂ ಗುತ್ತಿಗೆದಾರರು 10 ಅಡಿ ಆಳ ಗುಂಡಿ ತೆಗೆದು ಮರಳು ಎತ್ತುತ್ತಿದ್ದಾರೆ. ಹುಡುಗರು, ದನಗಾಹಿಗಳು ಓಡಾಡುತ್ತಿರುತ್ತಾರೆ. ಮನುಷ್ಯರಿಗೇ ತಿಳಿಯದ ಗುಂಡಿಗಳ ಆಳ ದನ ಕರುಗಳಿಗೆ ಹೇಗೆ ಗೊತ್ತಾಗುತ್ತದೆ. ಅಮಾಯಕರ ಬಲಿ ಪಡೆದು ಸರ್ಕಾರ ಆದಾಯ ಪಡೆಯಬೇಕೆ?. ಯಾವುದೇ ಅನಾಹುತ ಸಂಭವಿಸುವ ಮುನ್ನ ಕ್ರಮ ಕೈಗೊಳ್ಳಿ ಎಂದು ಸಚಿವರನ್ನು ಕೋರಿದರು.
ನೀರಲ್ಲಿ ಮರಳು ಎತ್ತಬಾರದೆಂಬ ನಿಯಮವಿದ್ದರೂ ನದಿಯಲ್ಲಿ ಮರಳುಗಾರಿಕೆ ನಡೆಯುತ್ತಿದೆ. ಇಲ್ಲಿ ನಡೆಯುವ ಮರಳುಗಾರಿಗೆ ಬಗ್ಗೆ ಗ್ರಾಮ ಪಂಚಾಯಿತಿ ಗಮನಕ್ಕೆ ಅಧಿಕಾರಿಗಳು ತರುವುದೇ ಇಲ್ಲ. ಇಲ್ಲಿನ ಮರಳುಗಾರಿಕೆಯಿಂದ ನಮ್ಮ ಗ್ರಾಮ ಪಂಚಾಯಿತಿಗೂ ಆದಾಯ ಸಿಗಲಿದೆ. ಆದರೆ, ಆದಾಯ ಬರಲಿದೆ ಎಂಬ ಉದ್ದೇಶದಿಂದ ಅಕ್ರಮಕ್ಕೆ ದಾರಿ ಮಾಡಿಕೊಡುವುದು ಬೇಡ. ಅಂತಹ ಆದಾಯವೂ ಬೇಡ ಎಂದು ಹೇಳಿದರು.
ಮರಳು ಅಧಿಕ ಪ್ರಮಾಣದಲ್ಲಿ ಸಾಗಿಸಲಾಗುತ್ತಿದೆ. 5 ಮೆಟ್ರಿಕ್ ಟನ್ ಪರವಾನಿಗೆ ಪಡೆದು 10 ಮೆಟ್ರಿಕ್ ಟನ್ ಮರಳು ಸಾಗಣೆ ನಡೆಯುತ್ತಿದೆ. ಎಲ್ಲವೂ ಗೊತ್ತಿದ್ದರೂ ಅಧಿಕಾರಿಗಳು ಸುಮ್ಮನಿದ್ದಾರೆ. ನಾವೂ ಸಹ ಸಾಕಷ್ಟು ಬಾರಿ ತಹಶೀಲ್ದಾರ್ ಗಮನಕ್ಕೆ ತಂದಿದ್ದೇವೆ. ಅದರಿಂದ ಯಾವುದೇ ಪ್ರಯೋಜನ ಆಗಿಲ್ಲ. ಗ್ರಾಮ ಪಂಚಾಯಿತಿ ಸಭೆಗೆ ಅಧಿಕಾರಿಗಳು ಬರುವುದೇ ಇಲ್ಲ. ಎಲ್ಲಾ ಮಾಹಿತಿ ಮುಚ್ಚಿಡಲಾಗುತ್ತಿದೆ. ಹಲವಾರು ಬಾರಿ ಅಧಿಕಾರಿಗಳಿಗೆ ಫೋನ್ ಮಾಡಿದರೆ ಅವರು ಸ್ಪಂದಿಸುವುದೇ ಇಲ್ಲ. ಮರಳುಗಾರಿಕೆಯೇ ಬೇಡ ಎಂದು ವಿರೋಧಿಸುತ್ತಿಲ್ಲ. ಅದು ಕಾನೂನು ಪ್ರಕಾರ ನಡೆಯಲು ಕ್ರಮ ವಹಿಸಿ ಎಂದು ಸಚಿವರ ಗಮನ ಸೆಳೆದರು.
ಆಗ ಸಚಿವರು, ನಾನು ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಾಗ ಈ ಸಮಸ್ಯೆ ಬಗ್ಗೆ ಯಾರೂ ಗಮನ ಸೆಳೆಯಲಿಲ್ಲ. ಇಲ್ಲಿ ಹೇಳುತ್ತಿದ್ದೀರಿ ಎಂದರಲ್ಲದೆ, ಸ್ಥಳದಲ್ಲಿದ್ದ ಹರಿಹರ ತಹಶೀಲ್ದಾರ್‌ಗೆ ಬೌಂಡರಿ ಫಿಕ್ಸ್ ಮಾಡಿ. ಜನರಿಗೆ ತೊಂದರೆಯಾಗದಂತೆ ಕ್ರಮ ವಹಿಸಲು ಸೂಚಿಸಿದರು.
ಕಾನೂನುಬಾಹಿರ ಮರಳುಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಿ. ಮರಳುಗಾರಿಗೆ ಸಂಬಂಧ ಬರೀ ಗ್ರಾಮ ಪಂಚಾಯಿತಿಗಲ್ಲ ಸಾರ್ವಜನಿಕರಿಗೂ ಮಾಹಿತಿ ತಿಳಿಯಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ಜಿಲ್ಲೆಯಲ್ಲಿ ಮರಳುಗಾರಿಕೆಯಿಂದ ಸರ್ಕಾರಕ್ಕೆ 20 ಕೋಟಿ ರಾಯಲ್ಟಿ ಬರುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.
ಈ ಸಂದರ್ಭದಲ್ಲಿ ಹರಿಹರ ತಹಶೀಲ್ದಾರ್ ರೆಹಾನ ಪಾಷ, ರಾಜನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾಂತೇಶ್, ಪಿಡಿಓ ವಿಜಯಲಕ್ಷ್ಮಿ, ಇತರರು ಈ ಸಂದರ್ಭದಲ್ಲಿದ್ದರು.