ದಾವಣಗೆರೆ: ರಾಜ್ಯದಲ್ಲಿ ತೆಲಂಗಾಣ ಮಾದರಿ ಮರಳು ನೀತಿ ಜಾರಿಯ ಪ್ರಸ್ತಾವನೆ ಕುರಿತಂತೆ ಬುಧವಾರ(ಜು.3) ನಡೆಯುವ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ರಾಜಶೇಖರ್ ಬಿ. ಪಾಟೀಲ್ ತಿಳಿಸಿದ್ದಾರೆ.
ಮಂಗಳವಾರ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್‌ನಲ್ಲಿನ ಮರಳು ನೀತಿಯ ಬಗ್ಗೆ ಅಧ್ಯಯನ ನಡೆಸಿದ್ದಾರೆ. ತೆಲಂಗಾಣ ಮಾದರಿ ಮರಳು ನೀತಿ ಜಾರಿಗೆ ವೈಯಕ್ತಿಕ ಒಲವು ಇದೆ ಎಂದರು.
ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಬುಧವಾರ ಮಧ್ಯಾಹ್ನ 12ಕ್ಕೆ ವಿಧಾನಸೌಧದಲ್ಲಿ ನಡೆಯುವ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ, ಮರಳು ನೀತಿಯ ಜೊತೆಗೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ, ಹರಿಹರ ಶಾಸಕ ಎಸ್. ರಾಮಪ್ಪ ಅವರ ಆಶ್ರಯ, ದೇವಸ್ಥಾನ, ಶೌಚಾಲಯ ನಿರ್ಮಾಣಕ್ಕೆ ರಾಯಲ್ಟಿ ದರದಲ್ಲಿ ಮರಳು ಪೂರೈಕೆ ಮಾಡಬೇಕು ಎಂಬ ಪ್ರಸ್ತಾವನೆಯನ್ನೂ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ, ರಾಜ್ಯದಲ್ಲಿ ಮರಳಿನ ಸಮಸ್ಯೆಯೇ ಇಲ್ಲ. ಮರಳಿನ ಸಮಸ್ಯೆ ಇದ್ದರೆ ಕಟ್ಟಡಗಳ ಕೆಲಸ ಕಾರ್ಯ ನಡೆಯುತ್ತಲೇ ಇರಲಿಲ್ಲ. ಎಲ್ಲಿಯೂ ಕೆಲಸ ನಿಂತಿಲ್ಲ ಎಂದು ಸಚಿವ ರಾಜಶೇಖರ್ ಪಾಟೀಲ್ ಹೇಳಿದರು. ನಮ್ಮ ಸ್ವಂತ ಜಿಲ್ಲೆ ಬೀದರ್‌ನಲ್ಲಿ ನದಿಯೇ ಇಲ್ಲ. ಹಾಗಾಗಿ ಮರಳು ಬ್ಲಾಕ್ ಇಲ್ಲ. ನಾವೇ ಮಹಾರಾಷ್ಟ್ರ, ಕಲಬುರುಗಿ ಕಡೆಯಿಂದ ಮರಳು ತರಿಸಿಕೊಳ್ಳಬೇಕಾಗುತ್ತದೆ. ರಾಜ್ಯದ 13 ಜಿಲ್ಲೆಯಲ್ಲಿ ಮರಳು ಬ್ಲಾಕ್ ಇಲ್ಲವೇ ಇಲ್ಲ. ತುಮಕೂರಿನಲ್ಲಿ ಎಂ-ಸ್ಯಾಂಡ್ ಬಳಕೆ ಮಾಡಲಾಗುತ್ತಿದೆ. ಪ್ಲಾಸ್ಟರಿಂಗ್ ಬೇರೆ ಕೆಲಸಕ್ಕೆ ಮರಳು ಬಳಕೆ ಮಾಡುತ್ತಾರೆ. ರಾಜ್ಯದಲ್ಲಿ ತೀವ್ರತರವಾಗಿ ಮರಳಿನ ಸಮಸ್ಯೆ ಇಲ್ಲ ಎಂದು ಸಚಿವ ರಾಜಶೇಖರ್ ಪಾಟೀಲ್ ತಿಳಿಸಿದರು.
ದಾವಣಗೆರೆ ಜಿಲ್ಲೆಯಲ್ಲೇ ಸಾಕಷ್ಟು ಮರಳಿನ ಸಮಸ್ಯೆ ಇದೆ. ಆಶ್ರಯ ಮನೆ, ದೇವಸ್ಥಾನ, ಶೌಚಾಲಯ ಕಟ್ಟಿಕೊಳ್ಳಲಿಕ್ಕೂ ಮರಳು ಸಿಗದೇ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹೊನ್ನಾಳಿ ತಾಲೂಕಿನ ಬೇಲಿ ಮಲ್ಲೂರ ಹೊಳೆ ದಂಡೆಯಲ್ಲೇ ಇದ್ದರೂ 2 ವರ್ಷದಿಂದ ಮರಳು ಸಿಗದೆ ಆಶ್ರಯ ಮನೆ ಕೆಲಸ ಅರ್ಧಕ್ಕೆ ನಿಂತಿದೆ. ಬೇಕಾದರೆ ಈಗಲೇ ಸ್ಥಳ ತೋರಿಸುತ್ತೇನೆ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಹರಿಹರ ಶಾಸಕ ಎಸ್. ರಾಮಪ್ಪ ಸಹ, ಹರಿಹರದಲ್ಲೇ ಮರಳು ಸಿಕ್ಕದೆ ಸಾಕಷ್ಟು ಸಮಸ್ಯೆ ಆಗಿದೆ. ಒಂದು ಲಾರಿ ಲೋಡ್‌ಗೆ 18-20 ಸಾವಿರ ರೂಪಾಯಿ ಬೇಕಾಗುತ್ತದೆ. ಬಡವರು ಅಷ್ಟೊಂದು ಹಣ ಎಲ್ಲಿಂದ ತರಲು ಆಗುತ್ತದೆ. ಸಮಸ್ಯೆ ಇದೆ ಎಂದು ಧ್ವನಿ ಗೂಡಿಸಿದರು.
ಆಶ್ರಯ ಮನೆ, ದೇವಸ್ಥಾನ, ಶೌಚಾಲಯ ಕಟ್ಟಿಕೊಳ್ಳಲಿಕ್ಕೂ ಅನುಕೂಲ ಆಗುವಂತೆ 60 ರೂಪಾಯಿ ರಾಯಲ್ಟಿ ದರದಲ್ಲಿ ಮರಳು ತೆಗೆದುಕೊಂಡು ಹೋಗಲು ಅವಕಾಶ ಮಾಡಿಕೊಡಬೇಕು. ಕೆರೆ -ಕಟ್ಟೆ, ಹಳ್ಳದಲ್ಲಿ ಮರಳು ಸಿಗುವ ಕಡೆ ಪಾಯಿಂಟ್ ಮಾಡಿ, ರಾಯಲ್ಟಿ ಕಟ್ಟಿ, ತೆಗೆದುಕೊಂಡು ಅವಕಾಶ ಮಾಡಿಕೊಡಬೇಕು. ಆಗ ಸಮಸ್ಯೆಯೇ ಇರುವುದಿಲ್ಲ. ಸೂಕ್ತ ಆದೇಶ ನೀಡಬೇಕು ಎಂದು ಶಾಸಕದ್ವಯರು ಪಟ್ಟು ಹಿಡಿದರು. ಈ ಸಭೆಯಲ್ಲಿ ಅಂತಹ ತೀರ್ಮಾನ ತೆಗೆದುಕೊಳ್ಳಲಿಕ್ಕೆ ಆಗುವುದೇ ಇಲ್ಲ. ಇಡೀ ರಾಜ್ಯಕ್ಕೆ ಅನ್ವಯ ಆಗುವಂತೆ ಆದೇಶ ಮಾಡಬೇಕಾಗುತ್ತದೆ. ಇಬ್ಬರೂ ಶಾಸಕರ ಪ್ರಸ್ತಾವನೆಯನ್ನ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು.
ಡಿಸಿ ಜಿ.ಎನ್. ಶಿವಮೂರ್ತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಎಚ್, ಬಸವರಾಜೇಂದ್ರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ಕುಮಾರ್, ಭೂ ವಿಜ್ಞಾನಿ ಪಿ.ಎಚ್. ಪ್ರದೀಪ್, ವಿನುತಾಭಟ್, ಚೈತ್ರಾ, ಕವಿತಾ ಇದ್ದರು.