ದಾವಣಗೆರೆ: ಹೊನ್ನಾಳಿ ತಾಲೂಕಿನ ಅರಕೆರೆ ಬಳಿ ಸೋಮವಾರ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದ ಮಾಜಿ ಸಚಿವ ಬಿ.ಸಿ. ಪಾಟೀಲ್ ಅವರ ಅಳಿಯ ಕೆ.ಜಿ. ಪ್ರತಾಪ್ ಕುಮಾರ್ ಅವರ ಅಂತ್ಯಕ್ರಿಯೆ ಮಂಗಳವಾರ ಚನ್ನಗಿರಿ ತಾಲೂಕಿನ ಸ್ವಗ್ರಾಮ ಕತ್ತಲಗೆರೆಯಲ್ಲಿ ವೀರಶೈವ ಪದ್ಧತಿಯಂತೆ ನೆರವೇರಿತು.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಪ್ರತಾಪ್ ಕುಮಾರ್ ಅವರ ಪಾರ್ಥಿವ ಶರೀರವನ್ನು ತಡರಾತ್ರಿಯೇ ಕತ್ತಲಗೆರೆಗೆ ತಂದು ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕಿಡಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿನ ಜನರು ಅಂತಿಮ ದರ್ಶನ ಪಡೆದರು. ಮನೆಯಿಂದ ತೋಟದವರೆಗೆ ಪಾರ್ಥಿವ ಶರೀರದ ಮೆರವಣಿಗೆ ನಡೆಸಿ, ಪ್ರತಾಪ್ ಕುಮಾರ್ ಅವರ ತಂದೆಯ ಸಮಾಧಿ ಪಕ್ಕದಲ್ಲೇ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಹಿರೇಕೆರೂರು ಶಾಸಕ ಯು.ವಿ. ಬಣಕಾರ್, ಬಿ.ಸಿ. ಪಾಟೀಲ್, ಪತ್ನಿ ವನಜಾ ಪಾಟೀಲ್, ಪ್ರತಾಪ್ ಕುಮಾರ್ ಪತ್ನಿ ಸೌಮ್ಯ, ಸೊಸೆ ಸೃಷ್ಟಿ ಪಾಟೀಲ್, ಪ್ರತಾಪ್ ಕುಮಾರ್ ತಾಯಿ ವಸಂತಮ್ಮ, ಸಹೋದರರು ಒಳಗೊಂಡಂತೆ ಅನೇಕ ಗಣ್ಯರು, ಜನಪ್ರತಿನಿಧಿಗಳು, ಎರಡು ಕುಟುಂಬಗಳ ಸದಸ್ಯರು, ಬಂಧು-ಬಳಗದವರು ಅಂತ್ಯಸಂಸ್ಕಾರ ಸಂದರ್ಭದಲ್ಲಿ ಹಾಜರಿದ್ದರು.
ಅಕಾಲಿಕವಾಗಿ ಪತಿಯನ್ನು ಕಳೆದುಕೊಂಡಿರುವ ಸೌಮ್ಯ ಪಾಟೀಲ್ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಯಾರು ಎಷ್ಟೇ ಸಮಾಧಾನ ಪಡಿಸಲು ಯತ್ನಿಸಿದರೂ ರೋಧನ ನಿಲ್ಲಿಸಲಿಲ್ಲ. ಪ್ರತಾಪ್ ಕುಮಾರ್ ಅವರ ತಾಯಿ ವಸಂತಮ್ಮ ಮಗನ ನೆನೆದು ಕಂಬನಿ ಮಿಡಿದರು.
ಕಳೆದ 16 ವರ್ಷಗಳಿಂದ ಪ್ರತಾಪ್ ಕುಮಾರ್ ಅಳಿಯ ಎನ್ನುವುದಕ್ಕಿಂತಲೂ ನನ್ನ ಹಿರಿಯ ಮಗನಂತೆ ಇದ್ದರು. ಮನೆ, ತೋಟ, ಹೊಲ ಎಲ್ಲ ವಿಷಯಗಳನ್ನೇ ಅವರೇ ನೋಡಿಕೊಳ್ಳುತ್ತಿದ್ದರು. ಮಕ್ಕಳಾಗಲಿಲ್ಲ ಎಂಬ ಬೇಸರದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಹಿರಿಯ ಮಗನನ್ನೇ ಕಳೆದು ಕೊಂಡಿದ್ದೇನೆ. ಪ್ರತಾಪ್ ಆತ್ಮಹತ್ಯೆಯ ಕುರಿತಂತೆ ಅವರ ಸಹೋದರ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು.