ದಾವಣಗೆರೆ: ಬ್ಯಾಂಕ್ ಅಧಿಕಾರಿಗಳ ಸೋಗು…, ಸಾಲಕೊಡುವ ನೆಪ…, ವಿದೇಶಿ ಕಂಪನಿ ಹೆಸರು…, ಲಾಟರಿಯಲ್ಲಿ ಬಹುಮಾನ… ಹೀಗೆ ನಾನಾ ವಿಧದ ರೀತಿಯಲ್ಲಿ ಅಪರಿಚಿತ ವ್ಯಕ್ತಿಗಳು ಮೊಬೈಲ್ ಕರೆ ಮಾಡಿ ಜನರಿಂದ ಎಟಿಎಂ, ಡೆಬಿಟ್, ಕ್ರೆಡಿಟ್ಕಾರ್ಡ್ ಮಾಹಿತಿ ಪಡೆದು ಕ್ಷಣಾರ್ಧದಲ್ಲೇ ಲಕ್ಷಾಂತರ ರೂಪಾಯಿ ವಂಚಿಸುವ ಪ್ರಕರಣ ಈಚೆಗೆ ಸಾಮಾನ್ಯ ಎನ್ನುವಂತಾಗುತ್ತಿವೆ!.
Advertisement
ಹೌದು ಇತ್ತೀಚೆಗೆ ಎಟಿಎಂ, ಡೆಬಿಟ್, ಕ್ರೆಡಿಟ್ ಕಾರ್ಡ್‌ನ ಮಾಹಿತಿ ನೀಡಿ ಹಣ ಕಳೆದುಕೊಳ್ಳುತ್ತಿರುವ ಪ್ರಕರಣ ಜಾಸ್ತಿ ಆಗುತ್ತಿವೆ. ಅಕ್ಷರಸ್ಥರು, ಅನಕ್ಷರಸ್ಥರು ಎನ್ನದೆ ಎಲ್ಲರೂ ನಯವಾದ ಮಾತುಗಳ ಜಾಲಕ್ಕೆ ಸಿಲುಕಿ ಬಹು ಸುಲಭವಾಗಿ ವಂಚನೆಗೆ ತುತ್ತಾಗುತ್ತಿದ್ದಾರೆ.
Related Articles
Advertisement
ಜಾಲತಾಣದ ವ್ಯವಹಾರ ಅಪಾಯ: ಅನಾಮಧೇಯ ನಂಬರ್‌ಗಳಿಂದ ಬರುವ ಕರೆಗಳನ್ನು ಒಳಗೊಂಡಂತೆ ಫೇಸ್‌ಬುಕ್, ವಾಟ್ಸ್ ಆ್ಯಪ್‌ಗ್ಳಲ್ಲಿನ ಜಾಹೀರಾತು, ಸಂದೇಶ ನಂಬಿ ಜನರು ಕಾರು, ಬೈಕ್ ಸೇರಿದಂತೆ ಇತರೆ ವಸ್ತುಗಳನ್ನು ಖರೀದಿ ಮಾಡುವುದು ಈಚೆಗೆ ಹೆಚ್ಚಾಗಿದೆ. ಅದರಲ್ಲೂ ಎಲ್ಲರ ಕೈಯಲ್ಲಿ ಸ್ಮಾರ್ಟ್‌ಫೋನ್‌ಗಳು ಬಂದ ಮೇಲೆ ಎಲ್ಲಾ ವ್ಯವಹಾರಗಳನ್ನು ಮಾಡುವುದು ಸುಲಭ ಎಷ್ಟಾಗಿದೆಯೋ ಅಪಾಯ ಕೂಡ ಅಷ್ಟೇ ಆಗಿದೆ.
ಸೈಬರ್ ಕ್ರೈಂನಲ್ಲಿ ದಾಖಲಾದ ಪ್ರಕರಣಗಳು: 2018ರಲ್ಲಿ ಬ್ಯಾಂಕ್ ಎಟಿಎಂ, ಒಟಿಪಿ ಸಂಖ್ಯೆ ನೀಡಿ ವಂಚನೆಗೆ ಸಂಬಂಧಿದಂತೆ ಸುಮಾರು 165 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 8.2ಲಕ್ಷ ರೂ. ಹಣ ಕಳೆದುಕೊಂಡ ಜನರಿಗೆ ಮರುಪಾವತಿಯಾಗಿದೆ.
2019ರ ಜೂ. 6ರ ಅಂತ್ಯಕ್ಕೆ ಒಟ್ಟು 47 ಪ್ರಕರಣಗಳು ಬೆಳಕಿಗೆ ಬಂದಿದ್ದು, ಅದರಲ್ಲಿ 22 ಪ್ರಕರಣಗಳು ಮಾತ್ರ ಎಫ್‌ಐಆರ್ ಆಗಿವೆ. 2.11 ಲಕ್ಷ ರೂ. ಮರುಪಾವತಿ ಮಾಡಿಕೊಡಲಾಗಿದೆ. ಈ ವರ್ಷದ ಮೇ ತಿಂಗಳೊಂದರಲ್ಲೇ ಜಿಲ್ಲೆಯಲ್ಲಿ 12 ಪ್ರಕರಣ, ಜೂನ್‌ನಲ್ಲಿ ಇಲ್ಲಿಯವರೆಗೂ 2 ಪ್ರಕರಣ ದಾಖಲಾಗಿವೆ.
ತಕ್ಷಣ ವಹಿಸಬೇಕಾದ ಕ್ರಮ: ತಮ್ಮ ಗಮನಕ್ಕೆ ಬಾರದೇ ಹಣ ವರ್ಗಾವಣೆ ಆಗಿದ್ದರೆ ಪಾಸ್‌ವರ್ಡ್, ಪಿನ್ ಬದಲಾಯಿಸಿಕೊಳ್ಳಬೇಕು. ಇಲ್ಲವೇ ತಕ್ಷಣ ಕಾರ್ಡ್ ರದ್ದತಿಗೆ ಬ್ಯಾಂಕ್‌ಗಳಿಗೆ ಸೂಚಿಸಬೇಕು. ಸಮೀಪದ ಬ್ಯಾಂಕ್ ಅಥವಾ ಪೊಲೀಸ್ ಠಾಣೆ ಸಂಪರ್ಕಿಸಿ ದೂರು ನೀಡಬೇಕು. ಹಣ ವರ್ಗಾವಣೆ ಮಾಡುವಾಗ ಮೊಬೈಲ್ ನೋಟಿಫಿಕೇಷನ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳಬೇಕು. ವಂಚನೆಗೊಳಗಾದ ವ್ಯಕ್ತಿಗಳ ಹೆಸರುಗಳನ್ನು ಅಗತ್ಯವಿದ್ದಲ್ಲಿ ಬಹಿರಂಗಗೊಳಿಸದೇ ನ್ಯಾಯ ದೊರಕಿಸಿಕೊಡಲಾಗುವುದು ಎನ್ನುತ್ತಾರೆ ಸೈಬರ್ ಕ್ರೈಂ ಪೊಲೀಸ್ ನಿರೀಕ್ಷಕರು.
ವಿಶೇಷ ತಂಡ ರಚನೆಸೈಬರ್ ಕ್ರೈಂ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಶಾಲಾ-ಕಾಲೇಜು, ಬ್ಯಾಂಕ್‌ಗಳಲ್ಲಿ ಸಾರ್ವಜನಿಕರಿಗೆ ಕಾಣುವಂತೆ ನಾಮಫಲಕ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿಪತ್ರ ಅಂಟಿಸಿ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ವಂಚನೆ ಮಾಡುತ್ತಿರುವ ಅಪರಿಚಿತ ವ್ಯಕ್ತಿಗಳು ಬೇರೆ ರಾಜ್ಯದವರಾಗಿದ್ದು, ಅಲ್ಲಿಯೇ ಕೂತುಕೊಂಡು ಜಿಲ್ಲೆಯ ಬ್ಯಾಂಕ್ ಗ್ರಾಹಕರಿಗೆ ಕರೆ ಮಾಡಿ ವಂಚನೆ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ಪತ್ತೆಹಚ್ಚಲು ವಿಶೇಷ ತಂಡ ರಚಿಸಿ ನೆರೆ ರಾಜ್ಯಗಳಿಗೆ ಕಳಿಸಲಾಗುವುದು. ಯಾವುದೇ ಬ್ಯಾಂಕ್ ಅಧಿಕಾರಿಗಳು ಸಾರ್ವಜನಿಕರ ವೈಯಕ್ತಿಕ ವಿವರ ಕೇಳಲ್ಲ. ಹಾಗಾಗಿ ಯಾರೇ ಅಪರಿಚಿತ ವ್ಯಕ್ತಿಗಳು ಕರೆ ಮಾಡಿದರೂ ಎಟಿಎಂ ಕಾರ್ಡ್ ನಂಬರ್, ಪಿನ್ ನಂಬರ್‌ಗಳ ಮಾಹಿತಿ ನೀಡದೇ ಹೆಚ್ಚಿನ ಜಾಗ್ರತೆ ವಹಿಸಬೇಕು.
•ಆರ್. ಚೇತನ್,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಪರಿಚಿತ ಕರೆ ನಂಬದಿರಿ
ಎಟಿಎಂಗಳಲ್ಲಿ ಹಣ ತೆಗೆಯುವಾಗ ಸಿಸಿ ಕ್ಯಾಮೆರಾ, ಸೆಕ್ಯೂರಿಟಿ ಇರುವ ಕಡೆ ಹಣ ತೆಗೆಯುವುದು ಒಳ್ಳೆಯದು. ಭಾರೀ ಮೊತ್ತದ ಬಹುಮಾನ ಬಂದಿದೆ, ಲಕ್ಕಿ ಡ್ರಾ ಕೂಪನ್ ಬಂದಿದೆ, ಶಾಪಿಂಗ್ ಮಾಲ್ಗಳಲ್ಲಿ ಗಿಫ್ಟ್ ವೋಚರ್ ನೀಡುತ್ತೇವೆ, ಜಾಬ್ ಕೊಡಿಸುತ್ತೇವೆ ಎಂದು ಯಾರೇ ಅಪರಿಚಿತ ವ್ಯಕ್ತಿಗಳು ಕರೆ ಮಾಡಿದರೂ ಅಂತಹ ಕರೆಯನ್ನು ಜನಸಾಮಾನ್ಯರು ನಂಬಬಾರದು. ಜೊತೆಗೆ ಯಾರಾದರೂ ವಂಚನೆ ಮಾಡುವ ಅನುಮಾಸ್ಪದ ವ್ಯಕ್ತಿಗಳ ಬಗ್ಗೆ ಖಚಿತ ಮಾಹಿತಿ ದೊರೆತಲ್ಲಿ ಕೂಡಲೇ ಸೈಬರ್ ಕ್ರೈಂ ಪೊಲೀಸ್ ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಸಹಕರಿಸಬೇಕು. ಅನಾಮಧೇಯ ವ್ಯಕ್ತಿಗಳ ಮೊಬೈಲ್ ಕರೆಗಳ ಬಗ್ಗೆ ಸದಾ ಎಚ್ಚರಿಕೆ ವಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ದಾವಣಗೆರೆ ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ವೆಬ್‌ಸೈಟ್ ಹಾಗೂ ಫೇಸ್‌ಬುಕ್ ಗ್ರೂಪ್‌ಗ್ಳಲ್ಲಿ ಜಾಗೃತಿ ವಿಡಿಯೋ ಸೇರಿದಂತೆ ಉಪಯುಕ್ತ ಮಾಹಿತಿ ಪಡೆಯಬಹುದಾಗಿದೆ.
•ಟಿ.ವಿ. ದೇವರಾಜ್,
ಸಿಇಎನ್ ಕ್ರೈಂ ಪೊಲೀಸ್ ನಿರೀಕ್ಷಕ