Advertisement

ಮೊದಲು ಅಂಡರ್‌ಪಾಸ್‌, ನಂತರ ಷಟ್ಪಥ ರಸ್ತೆ

11:15 AM Sep 07, 2019 | Team Udayavani |

ದಾವಣಗೆರೆ: ದಾವಣಗೆರೆ ತಾಲೂಕಿನ ಲಕ್ಕಮುತ್ತೇನಹಳ್ಳಿ, ಹೊನ್ನೂರು ಗೊಲ್ಲರಹಟ್ಟಿ, ಮಲ್ಲಶೆಟ್ಟಿಹಳ್ಳಿ, ಎಚ್. ಕಲ್ಪನಹಳ್ಳಿ ಬಳಿ ಅಂಡರ್‌ಪಾಸ್‌, ಬಾಡ ಕ್ರಾಸ್‌ ಸಮೀಪ ಪ್ರವೇಶದ್ವಾರ ಕಾಮಗಾರಿಗೆ ಅನುಮತಿ ದೊರೆಯುವ ತನಕ ಷಟ್ಪಥ ಯೋಜನೆ ಕಾಮಗಾರಿಗೆ ಅವಕಾಶವನ್ನೇ ನೀಡುವುದಿಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದ್ದಾರೆ.

Advertisement

ಶುಕ್ರವಾರ ಅಪರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕರ ಬೇಡಿಕೆಯಂತೆ ನಾವು ಶಿಫಾರಸು ಮಾಡಿರುವ ಕೆಲಸಗಳಿಗೆ ಮಂಜೂರಾತಿ ದೊರೆಯದಿದ್ದಲ್ಲಿ ಯಾವುದೇ ಕಾರಣಕ್ಕೂ ಕೆಲಸ ಪ್ರಾರಂಭಿಸಿಲು ಬಿಡುವುದೇ ಇಲ್ಲ ಎಂದು ಎಚ್ಚರಿಸಿದರು.

ಲಕ್ಕಮುತ್ತೇನಹಳ್ಳಿ ಬಳಿ ಅಂಡರ್‌ಪಾಸ್‌ಗೆ ತಾಂತ್ರಿಕವಾಗಿ ಅನುಮತಿ ದೊರೆಯುವುದಿಲ್ಲ. ನಿಯಮದ ಪ್ರಕಾರ 2 ಕಿಲೋ ಮೀಟರ್‌ಗೆ ಒಂದು ಅಂಡರ್‌ಪಾಸ್‌ ಮಾಡಬೇಕು. 700 ಮೀಟರ್‌ ಅಂತರದಲ್ಲಿ ಎಮ್ಮೆಹಟ್ಟಿ ಬಳಿ ಅಂಡರ್‌ಪಾಸ್‌ ಇದೆ. ಹಾಗಾಗಿ ಅಂಡರ್‌ಪಾಸ್‌ ಮಾಡಲಿಕ್ಕೆ ಬರುವುದಿಲ್ಲ ಎಂದು ಈಚೆಗೆ ಪರಿಶೀಲನೆ ನಡೆಸಿದ ಹಿರಿಯ ಅಧಿಕಾರಿಗಳ ತಂಡ ತಿಳಿಸಿ, ಮಂಜೂರಾತಿ ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಭರಮಸಾಗರದ ಹತ್ತಿರ 300 ಮೀಟರ್‌ ಅಂತರದಲ್ಲಿ 2 ಅಂಡರ್‌ಪಾಸ್‌ ಇದೆ. ಇಲ್ಲಿ ಆಗುವುದಿಲ್ಲ ಎಂದು ಹೇಳುತ್ತೀರಾ. ಅಧಿಕಾರಿಗಳ ತಂಡ ನನಗೆ ಯಾಕೆ ಮಾಹಿತಿ ನೀಡಲಿಲ್ಲ ಎಂದು ಸಿದ್ದೇಶ್ವರ್‌ ಪ್ರಶ್ನಿಸಿದರು.

ನೀವು ಸಂಸತ್‌ ಕಲಾಪದಲ್ಲಿದ್ದ ಕಾರಣಕ್ಕೆ ಮಾಹಿತಿ ನೀಡಲಾಗಲಿಲ್ಲ ಎಂದು ಹೇಳಿದಾಗ ಕುಪಿತಗೊಂಡ ನಾನು ಸಂಸತ್‌ನಲ್ಲೇ ಆಗಲಿ ಎಲ್ಲಿಯಾದರೂ ಇದ್ದರೂ ಮಾಹಿತಿ ಕೊಡಬಾರದು ಎಂದೇನು ಇಲ್ಲವಲ್ಲ. ನನಗೆ ಅಲ್ಲದಿದ್ದರೂ ಶಾಸಕರು, ಜಿಲ್ಲಾಧಿಕಾರಿಗಳ ಗಮನಕ್ಕಾದರೂ ತರಬಹುದಿತ್ತು. ನಿಮಗೆ ನೀವೇ ಎಲ್ಲವನ್ನೂ ಮಾಡಲಿಕ್ಕೆ ಏನು ಮಹಾರಾಜರೆ ಎಂದು ಖಾರವಾಗಿ ಪ್ರಶ್ನಿಸಿದರು.

Advertisement

ವಿಸ್ತೃತ ಚರ್ಚೆಯ ನಂತರ ಮತ್ತೂಮ್ಮೆ ಪರಿಶೀಲನೆಗೆ ತಂತ್ರಜ್ಞರು, ಹಿರಿಯ ಅಧಿಕಾರಿಗಳ ತಂಡವನ್ನ ಕರೆಸುವಂತೆ ಸಿದ್ದೇಶ್ವರ್‌, ಜಿಲ್ಲಾಧಿಕಾರಿ ಸೂಚಿಸಿದರು.

ಹಣದ ಸಮಸ್ಯೆ ಎಂದು ಈಗ ಹೇಳುತ್ತೀರಿ. ಹಣ ಇಲ್ಲದೇ ಹೋದ ಮೇಲೆ ರಸ್ತೆ ಕೆಲಸ ಯಾಕೆ ಮಾಡಬೇಕಿತ್ತು. ಯಾರು ಮಾಡಿ ಎಂದು ನಿಮ್ಮನ್ನು ಕೇಳಿದರು. ನೀವು ಮಾಡುವಂತಹ ರಸ್ತೆ ನೋಡಿದರೆ ರಸ್ತೆಯೇ ಬೇಡ ಅನ್ನುವಂತೆ ಇರುತ್ತವೆ. ಈಗ ಮಾಡಿರುವ ಅಂಡರ್‌ಪಾಸ್‌ನಲ್ಲಿ ಗಾಡಿಗಳಲ್ಲಿ ಸೊಪ್ಪೆ, ಏನನ್ನೂ ತೆಗೆದುಕೊಂಡು ಹೋಗುವುದಕ್ಕೆ ಬರುವುದೇ ಇಲ್ಲ ಎಂದು ಸಿದ್ದೇಶ್ವರ್‌ ಹೇಳಿದರು.

ಅಂಡರ್‌ಪಾಸ್‌ನಲ್ಲಿ ಸಾಕಷ್ಟು ಜಾಗ ಇದೆ ಎಂದು ಅಧಿಕಾರಿ ಹೇಳಿದಾಗ ನೀನು ಎಂದಾದರೂ ಗಾಡಿಲೀ ಸೊಪ್ಪೆ ತೆಗೆದುಕೊಂಡು ಹೋಗಿದಿಯಾ. ಜನರಿಗೆ ಅನುಕೂಲ ಆಗುವಂತೆ ಇದ್ದರೆ ಮಾತ್ರವೇ ಕೆಲಸ ಮಾಡಿ, ಇಲ್ಲದೇ ಇದ್ದರೆ ನಾನೇ ಕೆಲಸ ಮಾಡಲಿಕ್ಕೆ ಬಿಡುವುದಿಲ್ಲ. ನೀನು ಅದೆಷ್ಟು ಪೊಲೀಸ್‌ ಫೋರ್ಸ್‌ ತಂದು ಕೆಲಸ ಮಾಡಿಸುತ್ತಿಯೋ ನೋಡುತ್ತೇವೆ. ಇವತ್ತಿನ ಸಭೆಯಲ್ಲಿ ಏನೇನು ಚರ್ಚೆ ಆಗಿದೆಯೋ, ನಾನು ಹೇಳಿದ್ದನ್ನೂ ಸೇರಿಸಿ ಪತ್ರ ಬರೆಯುವಂತೆ ಮತ್ತೆ ಸೂಚಿಸಿದರು.

ಈಗಾಗಲೇ ಎರಡು ಬಾರಿ ಪತ್ರ ಬರೆಯಲಾಗಿದೆ. ಆದರೂ, 4 ಅಂಡರ್‌ಪಾಸ್‌ಗೆ ಮಂಜೂರಾತಿ ನೀಡಿಲ್ಲ ಎಂದು ಅಧಿಕಾರಿ ಹೇಳಿದಾಗ, ಮತ್ತೂಮ್ಮೆ ಪತ್ರ ಬರೆಯಿರಿ, ನಂಗೇನು ಈಗ ಭಯ ಇಲ್ಲ. ಇದೇ ನನ್ನ ಕೊನೆ ಚುನಾವಣೆ. ಯಾರ ಹತ್ತಿರ ಬೇಕಾದರೂ ಫೈಟ್ ಮಾಡಿ, ಕೆಲಸ ಮಂಜೂರು ಮಾಡಿಸಿಕೊಂಡು ಬರುತ್ತೇನೆ. ಎಂದು ಸಿದ್ದೇಶ್ವರ್‌ ಹೇಳಿದರು. ಸಂಸದರು ಹೇಳಿದಂತೆ ಇಂದಿನ ಸಭೆಯಲ್ಲಿನ ಚರ್ಚೆಯ ಬಗ್ಗೆ ಸವಿವರವಾಗಿ ಪತ್ರ ಬರೆಯುವಂತೆ ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ಅಧಿಕಾರಿಗಳಿಗೆ ಸೂಚಿಸಿದರು.

ಹೆದ್ದಾರಿ ಪಕ್ಕದಲ್ಲಿರುವ ಟವರ್‌ಗಳನ್ನು ಒಂದು ಕಡೆ ಶಿಫ್ಟ್‌ ಮಾಡಿ, ನೇರವಾದ ಸರ್ವೀಸ್‌ ರಸ್ತೆ ನಿರ್ಮಾಣ ಮಾಡಲಾಗುವುದು. ಹಳೆ ಮತ್ತು ಹೊಸ ಕುಂದುವಾಡ ಒಳಗೊಂಡಂತೆ 7 ಕಡೆ ಮಂಜೂರಾಗಿರುವ ಅಂಡರ್‌ಪಾಸ್‌ ಕೆಲಸ ಮಾಡಲಾಗುವುದು. ತಮ್ಮ ಆಕ್ಷೇಪಣೆ, ಸಭೆಯಲ್ಲಿನ ಚರ್ಚೆಯ ವಿಷಯದ ಬಗ್ಗೆ ಜಿಲ್ಲಾಡಳಿತದ ಮೂಲಕ ಮತ್ತೂಮ್ಮೆ ಪತ್ರ ಬರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಶಾಸಕ ಎಸ್‌.ಎ. ರವೀಂದ್ರನಾಥ್‌, ಶಿರಮಗೊಂಡನಹಳ್ಳಿ ಬಳಿ ಸ್ವಾಧೀನಕ್ಕೆ ಒಳಗಾಗಿರುವ ದೇವಸ್ಥಾನ, ಅಂಗನವಾಡಿಗೆ ಜಾಗ ಕೊಡಿಸುತ್ತೇವೆ. ಕಟ್ಟಿಸಿಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ಪ್ರೊ.ಎನ್‌. ಲಿಂಗಣ್ಣ, ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್‌ ಆರ್‌. ಬಳ್ಳಾರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next