Advertisement

ನೂತನ ವರ್ಷಕ್ಕೆ ಸಂಭ್ರಮದ ಸ್ವಾಗತ

05:41 PM Jan 02, 2020 | Naveen |

ದಾವಣಗೆರೆ: ಭರ್ಜರಿ ನೃತ್ಯ, ಬಣ್ಣ ಬಣ್ಣ ಚಿತ್ತಾರದ ಪಟಾಕಿ ಸಿಡಿತ, ಕೇಕ್‌ ಕಟ್‌, ಮೋಜು-ಮಸ್ತಿ… ಹೀಗೆ ವಿಧ ವಿಧವಾಗಿ ದಾವಣಗೆರೆ ಜನರು ಸಡಗರ, ಸಂಭ್ರಮದಿಂದ ಹೊಸ ವರ್ಷ- 2020
ಆಚರಿಸಿದರು.

Advertisement

ಹೊಸ ವರ್ಷದ ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ದಾವಣಗೆರೆ ಪ್ರಮುಖ ಸ್ಥಳ, ವೃತ್ತ, ಬೇಕರಿ, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ಹೋಟೆಲ್‌ಗ‌ಳಿಗೆ ಝಗಮಗಿಸುವ ವಿದ್ಯುತ್‌ ದೀಪಗಳ ಅಲಂಕಾರ ಮಾಡಲಾಗಿತ್ತು. ಮಧ್ಯರಾತ್ರಿ 12 ಆಗುತ್ತಿದ್ದಂತೆ ವಿಷ್‌ ಯು ಹ್ಯಾಪಿ ನ್ಯೂ ಇಯರ್‌, ವೆಲ್‌ಕಂ ಹ್ಯಾಪಿ ನ್ಯೂ ಇಯರ್‌… ಎಂದು ಸಂಭ್ರಮಿಸಿದರು.

ಕೇಕೇ, ವಿಷಲ್‌ ಹಾಕಿ, ಕುಣಿದು, ಕುಪ್ಪಳಿಸುವ ಮೂಲಕ ಸಂಭ್ರಮದಲ್ಲಿ ಮಿಂದೆದ್ದರು. ಹೊಸ ವರ್ಷದ ಸಂಭ್ರಮಾಚರಣೆಗಾಗಿಯೇ ಹಲವೆಡೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಧ್ವನಿವರ್ಧಕ, ಡಿಜೆಗಳಿಂದ ಹೊರ ಹೊಮ್ಮುತ್ತಿದ್ದ ಹಾಡುಗಳಿಗೆ ಭರ್ಜರಿ ಸ್ಟೆಪ್‌ ಹಾಕಿದರು.

ಯುವಕರು, ಯುವತಿಯರು, ಹಿರಿಯರು ಯಾವುದೇ ವಯೋಮಾನದ ಬಿಗುಮಾನವಿಲ್ಲದೆ ಸಂಭ್ರಮಿಸಿದರು. ಹೊಸ ವರ್ಷದ ಸ್ವಾಗತಕ್ಕಾಗಿ ಪಾರ್ಟಿ ಸಾಮಾನ್ಯವಾಗಿತ್ತು. ದಾವಣಗೆರೆ ಕ್ಲಬ್‌ನಲ್ಲಿ ನಡೆದ ಹೊಸ ವರ್ಷದ ಸಂಭ್ರಮಾಚರಣೆ ಗಮನ ಸೆಳೆಯುವಂತಿತ್ತು. ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ಇತರರು ಪಾಲ್ಗೊಂಡು ಹೊಸ ವರ್ಷದ ಶುಭ ಕೋರಿದರು.

ಓಣಿ, ವಠಾರ, ಅಕ್ಕಪಕ್ಕದ ಮನೆಯವರು ಸೇರಿಕೊಂಡು ವಿವಿಧ ಆಟೋಟ, ಮಕ್ಕಳಿಗೆ ಕ್ವಿಜ್‌, ಅಂತ್ಯಾಕ್ಷರಿ, ರಂಗೋಲಿ ಇತರೆ ಸ್ಪರ್ಧೆಗಳ ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಣೆ, ಇತರೆ ಕಾರ್ಯಕ್ರಮಗಳನ್ನು ನಡೆಸಿದರು.

Advertisement

ಬ್ಯಾಡ್ಮಿಂಟನ್‌, ಥ್ರೋಬಾಲ್‌, ಕುಂಟೆಬಿಲ್ಲೆ ಆಡುವ ಮೂಲಕವೂ ಹೊಸ ವರ್ಷದ ಮೊದಲ ಕ್ಷಣಗಳನ್ನು ಸ್ಮರಣೀಯ ವಾಗಿಸಿಕೊಂಡರು. ಹಲವಾರು ಕಡೆ ಕೇಕ್‌ ಕತ್ತರಿಸಿ, ಸಿಹಿ ವಿತರಿಸಿ ಹೊಸ ವರ್ಷಾಚರಣೆ ಮಾಡಿದರು. ಕೆಲವರು ಸರಿ ರಾತ್ರಿಯಲ್ಲೇ ದೇವಸ್ಥಾನಗಳಿಗೆ ತೆರಳಿ, ಪ್ರಾರ್ಥಿಸಿದರು. ಈಚೆಗೆ ಹೊಸ ವರ್ಷ ಎಂದರೆ ಬೈಕ್‌ಗಳ ಸೈಲೆನ್ಸರ್‌ ತೆಗೆದು, ಕರ್ಕಶ ಶಬ್ದ ಮಾಡುತ್ತಾ, ಕೂಗಾಟ, ಚೀರಾಟ ದೊಂದಿಗೆ ಭಾರೀ ವೇಗದಲ್ಲಿ ಸಂಚರಿಸುವುದು ಕಡ್ಡಾಯ ಎನ್ನುವಂತಾಗಿದೆ. ಅಲ್ಲಲ್ಲಿ ಯುವಕರು ಸೈಲೆನ್ಸರ್‌ ತೆಗೆದು, ಕರ್ಕಶ ಶಬ್ದ ಮಾಡುತ್ತಾ, ಕೂಗಾಟ, ಚೀರಾಟದೊಂದಿಗೆ ಭಾರೀ ವೇಗದಲ್ಲಿ ಸಂಚರಿಸಿದರು. ತಮ್ಮದೇ ರೀತಿ ಹೊಸ ವರ್ಷ ಆಚರಿಸಿದರು. ಬುಧವಾರ ಶಾಲಾ-ಕಾಲೇಜು, ಕಚೇರಿಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮುಗಿಲು ಮುಟ್ಟುವಂತಿತ್ತು.

ಶಾಲಾ-ಕಾಲೇಜುಗಳಲ್ಲಂತೂ ಅಕ್ಷರಶಃ ಹಬ್ಬದ ವಾತಾವರಣವೇ ಕಂಡು ಬಂದಿತು. ವಿದ್ಯಾರ್ಥಿಗಳು ಬಣ್ಣ ಬಣ್ಣದ ಬಟ್ಟೆಗಳಲ್ಲಿ ಕಂಗೊಳಿಸಿದರು. ತರಗತಿ ಕೊಠಡಿಗಳನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು. ಕೇಕ್‌ ಕತ್ತರಿಸಿ, ಸಿಹಿ ವಿತರಿಸಿ, ಶಿಕ್ಷಕರು, ಸಹಪಾಠಿಗಳೊಂದಿಗೆ ಹೊಸ ವರ್ಷದ ಮೊದಲ ದಿನ ಸವಿ ಸವಿದರು.

ಹೊಸ ವರ್ಷದ ಹಿನ್ನೆಲೆಯಲ್ಲಿ ಪಾರ್ಕ್‌ಗಳು ತುಂಬಿ ತುಳುಕಿದ್ದವು. ಟಿವಿ ಸ್ಟೇಷನ್‌ ಕೆರೆ, ಕುಂದುವಾಡ ಕೆರೆ, ಕೊಂಡಜ್ಜಿ, ಆನಗೋಡು ಪಾರ್ಕ್‌ ಇತರೆಡೆ ಜನಜಂಗುಳಿ ಕಂಡು ಬಂದಿತು. ಕುಟುಂಬದವರು, ಆಪ್ತರೊಡಗೂಡಿ ಸಾಮೂಹಿಕ ಭೋಜನದ ಮೂಲಕವೂ ಹೊಸ ವರ್ಷವನ್ನು ಸಂಭ್ರಮಿಸಿದರು. ಹೋಟೆಲ್‌, ಚಿತ್ರಮಂದಿರ, ಮಾಲ್‌ನಲ್ಲೂ ಸಂಭ್ರಮಾಚರಣೆ ಕಂಡು ಬಂದಿತು.

Advertisement

Udayavani is now on Telegram. Click here to join our channel and stay updated with the latest news.

Next