Advertisement

ಗುರಿ ಮುಟ್ಟಲು ಅನ್ವೇಷಣೆಯಲ್ಲಿ ತೊಡಗಿ

10:13 AM May 10, 2019 | Team Udayavani |

ದಾವಣಗೆರೆ: ವಿದ್ಯಾರ್ಥಿಗಳು ಜೀವನದ ಗುರಿ ತಲುಪಲು ಅರ್ಥಪೂರ್ಣ ಚರ್ಚೆ ನಡೆಸುವ ಮೂಲಕ ಅನ್ವೇಷಣೆಯಲ್ಲಿ ತೊಡಗಿಕೊಳ್ಳಬೇಕು ಎಂದು ಬೆಂಗಳೂರು ಎ.ಡಿ.ಟಿ.ಜಿ.ಸಿ ಹಿರಿಯ ಯೋಜನಾ ನಿರ್ವಾಹಕ ಸಚಿನ್‌ ಕೆಯೂರ್‌ ಹೇಳಿದರು.

Advertisement

ನಗರದ ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗುರುವಾರ ಮೆಕ್ಯಾನಿಕಲ್ ಎಂಜಿನಿಯರಿಂಗ್‌ ವಿಭಾಗದ ಡಾ| ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ರಾಷ್ಟ್ರಮಟ್ಟದ ತಾಂತ್ರಿಕ ವಿಚಾರ ಸಂಕಿರಣ ಮೆಕ್‌ ಐ ಪ್ರಿಕ್ಸ್‌ -2019 ತಾಂತ್ರಕ ಉತ್ಸವವನ್ನುದ್ದೇಶಿಸಿ ಮಾತನಾಡಿದರು.

ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ಹಲವಾರು ವಿಷಯಗಳ ಗ್ರಹಿಕೆ ಅತ್ಯಗತ್ಯವಾಗಿ ಬೇಕಾಗುತ್ತದೆ. ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್‌ ಹಾಗೂ ಗಣಿತದ ಪರಿಣಿತ ಅಗತ್ಯ. ಹಲವಾರು ವಲಯಗಳ ವಿಚಾರವನ್ನು ಗ್ರಹಿಸಬೇಕು. ಅರ್ಥಪೂರ್ಣ ಚರ್ಚೆಗಳೊಂದಿಗೆ ಹೊಸ-ಹೊಸ ವಿಚಾರಗಳನ್ನು ತಿಳಿಯುವ ಮೂಲಕ ಅನ್ವೇಷಣೆಗಳಲ್ಲಿ ತೊಡಗಿಕೊಳ್ಳಬೇಕು. ಆಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ಮುಖ್ಯವಾಗಿ ಸ್ನೇಹಿತರು, ಕುಟುಂಬ ಹಾಗೂ ಹಿರಿಯ ವಿದ್ಯಾರ್ಥಿಗಳ ಜೊತೆ ನಿರಂತರ ಸಂಪರ್ಕದಲ್ಲಿರಬೇಕು. ಯಾವುದೇ ಸಾಧನೆಯ ಯಶಸ್ಸಿನ ಹಿಂದೆ ತಪ್ಪುಗಳಿಲ್ಲದೇ ಸುಧಾರಣೆ ಅಸಾಧ್ಯ. ಹೊಸ ವಿಷಯಗಳನ್ನು ಕಲಿಯಲು ಹೋದಾಗ ತಪ್ಪುಗಳು ಆಗೇ ಆಗುತ್ತವೆ. ಇದಕ್ಕೆ ಹಿಂಜರಿಯಬಾರದು. ಧೈರ್ಯವಾಗಿ ಮುಂದೆ ಸಾಗಬೇಕು ಎಂದು ಕಿವಿಮಾತು ಹೇಳಿದರು.

ಶಿಕ್ಷಣ ಹಾಗೂ ಉದ್ಯೋಗಕ್ಕೆ ಅಗತ್ಯವಾದ ಮೂಲವನ್ನು ಹೊಂದಬೇಕು. ಉತ್ತಮ ಸಂಬಂಧಗಳ ಜಾಲವನ್ನು ಬೆಳೆಸಿಕೊಳ್ಳಬೇಕು ಮತ್ತು ತಪ್ಪುಗಳನ್ನು ಮಾಡಲು ಹಿಂಜರಿಯಬಾರದು. ಆಗ ಮಾತ್ರ ಯಶಸ್ವಿ ಸಾಧಕರಾಗಲು ಸಾಧ್ಯ ಎಂದರು.

Advertisement

ಬಿಐಇಟಿ ಕಾಲೇಜು ನಿರ್ದೇಶಕ ವೈ. ವೃಷಭೇಂದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳು ಕೇವಲ ವಿಜ್ಞಾನ, ತಾಂತ್ರಿಕ ಜ್ಞಾನ ಹೊಂದಿದರೆ ಸಾಲದು. ಕಲೆಯನ್ನು ಭಿತ್ತರಿಸಬೇಕು, ಸಾಹಿತ್ಯವನ್ನು ಓದಬೇಕು. ತಮ್ಮಲ್ಲಿರುವ ಬಹುಮುಖ ಕಲೆಯನ್ನು ಹೊರಹಾಕುವ ಪ್ರಯತ್ನ ಮಾಡಬೇಕು. ಎಲ್ಲಾ ಜ್ಞಾನ ಹೊಂದುವ ಮೂಲಕ ಮುಂದಿನ ಪೀಳಿಗೆಗೂ ಮಾರ್ಗದರ್ಶಕರಾಗಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಕಾಲೇಜು ಕೊಠಡಿಯೊಂದರಲ್ಲಿ ವಿದ್ಯಾರ್ಥಿಗಳು ಅನ್ವೇಷಣೆ ಮಾಡಿದ ಕೃಷಿ ಬೆಳೆ ಅಧ್ಯಯನ ಮಾಡುವ ರೋಬೋಟೋ, ಬಿಸಿಗಾಳಿ ಬಳಸಿ ಸೊಳ್ಳೆ ಕೊಲ್ಲುವ ಮೆಷಿನ್‌, ಟೂಬ್‌ ಪಂಚರ್‌ ಹಾಕುವ ಸಾಧನ ಹೀಗೆ ಹತ್ತು ಹಲವು ಬಗೆಯ ಸಾಧನಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಒಂದು ತಿಂಗಳ ಕಾಲ ಕಾಲೇಜಿನಲ್ಲಿ ತಾಂತ್ರಿಕ ಶಿಕ್ಷಣದ ಬಗ್ಗೆ ತರಬೇತಿ ನೀಡಲಾದ ವಿವಿಧ ಸರ್ಕಾರಿ ಶಾಲೆಯ 30 ವಿದ್ಯಾರ್ಥಿಗಳು ಹಾಜರಿದ್ದರು.

ಕಾಲೇಜು ಪ್ರಾಂಶುಪಾಲ ಡಾ| ಎಂ.ಸಿ. ನಟರಾಜ್‌ ಅಧ್ಯಕ್ಷತೆ ವಹಿಸಿದ್ದರು. ಬಿಐಇಟಿ ಕಾಲೇಜು ನಿರ್ದೇಶಕ ವೈ. ವೃಷಭೇಂದ್ರಪ್ಪ, ಪ್ರೊ| ಎಸ್‌. ಕುಮಾರಪ್ಪ ಉಪಸ್ಥಿತರಿದ್ದರು. ಎಸ್‌.ಇ. ಮಂಜುಳಾ ಪ್ರಾರ್ಥಿಸಿದರು. ಡಿ.ಇ. ಉಮೇಶ್‌ ಸ್ವಾಗತಿಸಿದರು. ಜಿ.ಎನ್‌.ಕೌಶಲ್ಯ ವಂದಿಸಿದರು.

ಛಲ ಬಿಡದೇ ಶ್ರಮ ಪಟ್ಟೆ
ಇಂಜಿನಿಯರಿಂಗ್‌ ಪೂರ್ಣಗೊಳಿಸುವ ಉದ್ಯೋಗ ಭದ್ರತೆ ಹಾಗೂ ಜೀವನ ಭದ್ರತೆಯ ವಿಷಯ ಹೆಚ್ಚಾಗಿ ಕಾಡುತ್ತಿತ್ತು. ಆದರೆ, ಎರಡು ಮೂರು ವರ್ಷಗಳ ನಂತರ ಉದ್ಯೋಗದಲ್ಲಿ ಏಕಾಂಗಿತನ ಕಾಡಲು ಶುರುವಾಯಿತು. ಪ್ರತಿದಿನವೂ ಅದೇ ಕೆಲಸ ಬೇಸರವಾಗಿ ಚಿಕ್ಕಂದಿನ ಕನಸಾದ ಯು.ಪಿ.ಎಸ್‌.ಸಿ. ಪ್ರಯತ್ನಿಸಲು ನಿರ್ಧರಿಸಿದೆ. ಯು.ಪಿ.ಎಸ್‌.ಸಿ ಪರೀಕ್ಷೆ ಎದುರಿಸುವುದು ಸುಲಭದ್ದಾಗಿರಲಿಲ್ಲ. ಕಬ್ಬಿಣದ ಕಡಲೆಯಂತಿತ್ತು. ಐದು ಬಾರಿ ಯುಪಿಎಸ್‌ಸಿಯ ವಿವಿಧ ಹಂತಗಳಲ್ಲಿ ಅನುತ್ತೀರ್ಣನಾಗಿದ್ದೆ. ಪ್ರತಿದಿನವೂ ನನ್ನ ಕೈಲಾಗದ ಕೆಲಸ ಎಂಬ ಕೀಳರಿಮೆ ಕಾಡಲು ಶುರುವಾಗುತ್ತಿತ್ತು. ಆದರೂ, ಛಲ ಬಿಡದೇ ಪರಿಶ್ರಮ ಪಟ್ಟಿದ್ದಕ್ಕೆ ಫಲ ನೀಡಿತು ಎಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ 114ನೇ ರ್‍ಯಾಂಕ್‌ ಪಡೆದ ಬಿಐಇಟಿ ಕಾಲೇಜಿನ ಹಳೆಯ ವಿದ್ಯಾರ್ಥಿ ರೌಷನ್‌ ಕುಮಾರ್‌ ತಮ್ಮ ಯಶಸ್ಸಿನ ಗುಟ್ಟನ್ನು ವಿದ್ಯಾರ್ಥಿಗಳ ಮುಂದೆ ತೆರೆದಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next