ದಾವಣಗೆರೆ: ಹರಿಹರ ನಗರಸಭೆಗೆ ನಡೆದ ಚುನಾವಣಾ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಅಲ್ಲಿ ಯಾವ ಪಕ್ಷವೂ ಬಹುಮತ ಪಡೆಯದೇ ಅತಂತ್ರ ಸ್ಥಿತಿ ಎದುರಾಗಿದೆ. ಈಗ ಸದ್ಯ ಜಿಲ್ಲೆಯ ಮೂರು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈ ಪರಿಸ್ಥಿತಿ ಸೃಷ್ಟಿಯಾದಂತಾಗಿದೆ.
Advertisement
ಕಳೆದ 29ರಂದು ಹರಿಹರ ನಗರಸಭೆ 31 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಏಣಿಕೆ ಶುಕ್ರವಾರ ನಡೆದಿದ್ದು, ಆ ನಗರಸಭೆಗೆ ಜಾತ್ಯತೀತ ಜನತಾದಳ 14, ಕಾಂಗ್ರೆಸ್ 10, ಭಾರತೀಯ ಜನತಾ ಪಕ್ಷ 5 ಸದಸ್ಯರು ಹಾಗೂ ಎರಡು ವಾರ್ಡ್‌ಗಳಲ್ಲಿ ಪಕ್ಷೇತರರು ಆಯ್ಕೆಯಾಗಿದ್ದಾರೆ. ಜಾತ್ಯತೀತ ಜನತಾದಳ ಅಧಿಕ ಸ್ಥಾನ ಪಡೆದ ಪಕ್ಷವಾದರೂ ಬಹುಮತ ಗಳಿಸುವಲ್ಲಿ ವಿಫಲವಾಗಿದೆ. ಈ ನಗರಸಭೆಯಲ್ಲಿ ಕಾಂಗ್ರೆಸ್ 10 ವಾರ್ಡ್‌ಗಳಲ್ಲಿ ಗೆಲ್ಲುವ ಮೂಲಕ 2ನೇ ಸ್ಥಾನದಲ್ಲಿದೆ. ಬಿಜೆಪಿ ಮೂರನೇ ಸ್ಥಾನದಲ್ಲಿದೆ. ಇಬ್ಬರು ಪಕ್ಷೇತರರು ಆಯ್ಕೆಯಾಗಿದ್ದು, ಅವರ ಬೆಂಬಲದಿಂದ ಜೆಡಿಎಸ್ ಅಧಿಕಾರ ಚುಕ್ಕಾಣಿ ಹಿಡಿಯಬಹುದು. ಇಲ್ಲವೇ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಆಡಳಿತದಲ್ಲಿರುವುದರಿಂದ ಹರಿಹರ ನಗರಸಭೆಯಲ್ಲೂ ಹೊಂದಾಣಿಕೆ ಆಗಬಹುದೆಂಬ ಮಾತು ಕೇಳಿ ಬರುತ್ತಿದೆ.
Related Articles
Advertisement
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಜಗಳೂರು ಹಾಗೂ ಹೊನ್ನಾಳಿ ಪಟ್ಟಣ ಪಂಚಾಯಿತಿ ಬಿಟ್ಟರೆ ಮೂರೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆತಂತ್ರ ಸ್ಥಿತಿ ಇದೆ. ಜಗಳೂರು ಮತ್ತು ಹೊನ್ನಾಳಿ ಪಟ್ಟಣ ಪಂಚಾಯಿತಿಗಳಲ್ಲಿ ಬಿಜೆಪಿ ಬಹುಮತ ಪಡೆದು ಆಡಳಿತ ನಡೆಸುತ್ತಿದೆ. ಹರಿಹರ ನಗರಸಭೆ ಅಧಿಕಾರ ಚುಕ್ಕಾಣಿ ಹಿಡಿಯಲು ಇಬ್ಬರು ಸದಸ್ಯರ ಅವಶ್ಯಕತೆ ಇದ್ದು, ಪಕ್ಷೇತರರು ಜೆಡಿಎಸ್ ಬೆಂಬಲಿಸಲಿದ್ದಾರೋ ಅಥವಾ ಮೈತ್ರಿ ಧರ್ಮ ಈ ನಗರಸಭೆಯಲ್ಲೂ ಪಾಲನೆಯಾಗಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ.