Advertisement

ದಾವಣಗೆರೆ ಬಜೆಟ್ ಸಭೆಯಲ್ಲಿ ಬಡಾವಣೆ ಹೆಸರು ಚರ್ಚೆ; ಬಿಜೆಪಿ-ಕಾಂಗ್ರೆಸ್ ಸದಸ್ಯರ ಮಾತಿನ ಚಕಮಕಿ

12:34 PM Mar 31, 2022 | Team Udayavani |

ದಾವಣಗೆರೆ: ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಗುರುವಾರ ನಡೆದ ಬಜೆಟ್ ಸಭೆಯ ಪ್ರಾರಂಭದಲ್ಲೇ ಶಾಮನೂರು ಸಮೀಪದ ಶಾಮನೂರು ಶಿವಶಂಕರಪ್ಪ ಬಡಾವಣೆ ಹೆಸರು ಮುಂದಾಗಿರುವ ವಿಚಾರವಾಗಿ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

Advertisement

ಮಹಾನಗರ ಪಾಲಿಕೆಯ 16 ನೇ ವಾರ್ಡ್ ಸದಸ್ಯ ಎ. ನಾಗರಾಜ್ ಮಾತನಾಡಿ, ಶಾಮನೂರು ಸಮೀಪದ ಶಾಮನೂರು ಶಿವಶಂಕರಪ್ಪ ಬಡಾವಣೆಯ ನಿವಾಸಿಗಳು ಬಡಾವಣೆಯ ಹೆಸರನ್ನು ಮಲ್ಲಿಕಾರ್ಜುನಪ್ಪ ಬಡಾವಣೆ ಎಂಬುದಾಗಿ ಹೆಸರು ಬದಲಾವಣೆ ಮಾಡಲು ಮುಂದಾಗಿದ್ದಾರೆ. ಅದರಿಂದ ನಾಗರಿಕರಿಗೆ ತೊಂದರೆ ಆಗಲಿದೆ.‌ ಹಾಗಾಗಿ ಬಡಾವಣೆ ಹೆಸರು ಬದಲಾವಣೆ ಮಾಡಬಾರದು ಎಂದು ಮನವಿ ಮಾಡಿದ್ದಾರೆ.‌ ಮೇಯರ್ ಅವರು ಸೂಕ್ತ ಉತ್ತರ ನೀಡಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಇದು ಬಜೆಟ್ ಸಭೆ. ಬಜೆಟ್ ಮಂಡನೆಗೇ ಮೊದಲ ಆದ್ಯತೆ ಎಂದು ಬಿಜೆಪಿ ಸದಸ್ಯರು ಹೇಳಿದರು. ನಾಡಗೀತೆಯಲ್ಲಿ ಇರುವ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಸಾಲನ್ನೇ ಅಳಿಸಲು ಹೊರಟಿದ್ದಾರೆ ಎಂದು ನಾಗರಾಜ್ ಆರೋಪಿಸಿದರು. ಶಾಂತಿ ಹಾಳು ಮಾಡಲಾಗಿದೆ ಎಂದೂ ದೂರಿದರು. ಇದರಿಂದ ಕೆರಳಿದ ಬಿಜೆಪಿ ಸದಸ್ಯರು ನೀವೇ ಕಾಂಗ್ರೆಸ್ ನವರು ಶಾಂತಿ ಹಾಳು ಮಾಡಲು ಪ್ರಾರಂಭಿಸಿದವರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ನವರು ಮಾಧ್ಯಮದವರು ಇದ್ದಾರೆ ಎಂದು ಪ್ರಚಾರ ಪಡೆಯಲು ಬಜೆಟ್ ಸಭೆಯಲ್ಲಿ ಬೇರೆ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ. ಮಹಿಳೆ ಒಬ್ಬರು ಮೇಯರ್ ಆಗಿದ್ದಾರೆ. ಅವರಿಗೆ ಮಾತನಾಡಲಿಕ್ಕೆ ಅವಕಾಶ ನೀಡದೆ ಅಪಮಾನ ಮಾಡಲಾಗಿದೆ ಎಂದು ದೂರಿದರು. ನಾವು ಮಹಿಳೆಯರಿಗೆ ಅಪಮಾನ ಮಾಡುತ್ತಿಲ್ಲ. ನೀವೇ ಅವರಿಗೆ ಮಾತನಾಡಲು ಅವಕಾಶ ನೀಡದೇ ಅಪಮಾನ ಮಾಡುತ್ತಿದ್ದೀರಿ ಎಂದು ಕಾಂಗ್ರೆಸ್ ಸದಸ್ಯರು ಹೇಳಿದರು.

ಇದನ್ನೂ ಓದಿ:ಬುದ್ದಿಜೀವಿಗಳು ದೇಶದ ಬಗ್ಗೆ ಯೋಚನೆ ಮಾಡುವುದಿಲ್ಲ: ಆರಗ ಜ್ಞಾನೇಂದ್ರ

Advertisement

ಈ ಮಧ್ಯೆ ಪರಿಷತ್ತು ಕಾರ್ಯದರ್ಶಿ ಬಜೆಟ್ ಸಭೆಗೆ ಮೇಯರ್ ಅವರಿಗೆ ಸ್ವಾಗತ ಕೋರಲು ಮುಂದಾದರು. ಕಾಂಗ್ರೆಸ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮೇಯರ್ ಉತ್ತರ ನೀಡಿದ ಮೇಲೆ ಸಭೆ ಮುಂದುವರೆಸಬೇಕು ಎಂದು ಪಟ್ಟು ಹಿಡಿದರು.

ಮೇಯರ್ ಈಗಾಗಲೇ ರೂಲಿಂಗ್ ನೀಡಿದ್ದಾರೆ.‌ ಬಜೆಟ್ ಮಂಡನೆ ಸಭೆ ಪ್ರಾರಂಭಿಸಬೇಕು. ಮೇಯರ್ ರೂಲಿಂಗ್ ನೀಡಿರುವಂತೆ ಸಭೆ ಪ್ರಾರಂಭಿಸಿ ಎಂದು ಮಾಜಿ ಮೇಯರ್ ಎಸ್.ಟಿ. ವೀರೇಶ್ ಒತ್ತಾಯಿಸಿದರು.

ಬಜೆಟ್ ಮಂಡನೆ ನಂತರ ಈ ವಿಚಾರ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಮೇಯರ್ ಜಯಮ್ಮ ಗೋಪಿನಾಯ್ಕ ರೂಲಿಂಗ್ ನೀಡಿದ ನಂತರವೇ ಪರಿಸ್ಥಿತಿ ತಿಳಿಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next