ದಾವಣಗೆರೆ: ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಎರಡನೇ ಬಾರಿಗೆ ಎನ್‌ಡಿಎ ಮೈತ್ರಿಕೂಟ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು, ಗಣ್ಯರು, ಅಭಿಮಾನಿಗಳು ಗುರುವಾರ ಸಂಜೆ ಜಯದೇವ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.
ದೇಶದ ಪ್ರಧಾನಿಯಾಗಿ ಸತತ ಎರಡನೇ ಬಾರಿಗೆ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಜಯದೇವ ವೃತ್ತದಲ್ಲಿ ನೆರೆದ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿದರು.
ಮುಗಿಲು ಮುಟ್ಟುವಂತೆ ಭಾರತ್ ಮಾತಾ ಕೀ ಜೈ…, ಮೋದಿ… ಮೋದಿ… ಎಂಬ ಘೋಷಣೆ ಕೂಗಿದರು. ಬಿಜೆಪಿ ಮುಖಂಡರು, ಕಾರ್ಯಕರ್ತರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಜಯದೇವ ವೃತ್ತದಲ್ಲಿ ಅನೇಕರಿಗೆ ಪೇಢೆ, ಇತರೆ ಸಿಹಿ ವಿತರಿಸುವ ಮೂಲಕ ಸಂತಸಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ರಾಜಶೇಖರ್, ವಿಶ್ವದ ಬಹು ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಸತತ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭ ಸುವರ್ಣ ಅಕ್ಷರದಲ್ಲಿ ಬರೆದಿಡುವಂತದ್ದು ಎಂದು ಬಣ್ಣಿಸಿದರು.
ಕಳೆದ ಚುನಾವಣೆಯಲ್ಲಿ ದೇಶದ ಜನರು ನರೇಂದ್ರ ಮೋದಿ ಅವರ ಮೇಲೆ ಭಾರೀ ವಿಶ್ವಾಸ ಇಟ್ಟು ಆಯ್ಕೆ ಮಾಡಿದ್ದರು. ಐದು ವರ್ಷಗಳ ಅವಧಿಯಲ್ಲಿ ಮೋದಿ ಅವರು ಜನರ ಆಶೋತ್ತರಗಳಿಗೆ ಸ್ಪಂದಿಸಿದ್ದರು ಎಂಬುದಕ್ಕೆ ಸಾಕ್ಷಿ ಎನ್ನುವಂತೆ ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ಅವರ ಮೇಲೆ ಮತ್ತೂಮ್ಮೆ ನಂಬಿಕೆ, ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ. ಖಂಡಿತವಾಗಿಯೂ ಅವರು ಜನರ ಆಶೋತ್ತರಗಳಿಗೆ ಸ್ಪಂದಿಸಿ, ನವ ಭಾರತದ ನಿರ್ಮಾಣ ಮಾಡುವರು ಎಂದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಶಾಸಕ ಎಂ. ಬಸವರಾಜನಾಯ್ಕ, ಪಿ.ಸಿ. ಶ್ರೀನಿವಾಸ್, ಎಚ್.ಸಿ. ಜಯಮ್ಮ, ಎಚ್.ಎನ್. ಶಿವಕುಮಾರ್, ರಾಜನಹಳ್ಳಿ ಶಿವಕುಮಾರ್, ವೈ. ಮಲ್ಲೇಶ್, ಧನಂಜಯ ಕಡ್ಲೇಬಾಳು, ಕೆ.ಎನ್. ಓಂ.ಕಾರಪ್ಪ, ಎಲ್.ಡಿ. ಗೋಣೆಪ್ಪ, ಹಾಲಮ್ಮ, ಸುಶೀಲಮ್ಮ ಮಂಜುನಾಥ್, ಭಾಗ್ಯ ಪಿಸಾಳೆ, ಶಂಕರಗೌಡ ಬಿರಾದಾರ್, ಶಿವನಗೌಡ ಪಾಟೀಲ್, ಗೌತಮ್ ಜೈನ್, ಟಿಂಕರ್ ಮಂಜಣ್ಣ, ಅಜ್ಜಂಪುರಶೆಟ್ರಾ ಮೃತ್ಯುಂಜಯ, ಕೆ. ಹೇಮಂತ್‌ಕುಮಾರ್, ಕಲ್ಲಿಂಗಪ್ಪ, ವೀರೇಶ್ ಪೈಲ್ವಾನ್, ಮೋಹನ್, ರಾಜು ಇತರರು ಇದ್ದರು.