Advertisement

ಕಿರಿಯ ರಾಜಕಾರಣಿಗಳಿಗೆ ಎಸ್‌ಎಆರ್‌ ಮಾದರಿ

11:24 AM Nov 27, 2019 | |

ದಾವಣಗೆರೆ: ಎಸ್‌.ಎ. ರವೀಂದ್ರನಾಥ್‌ ದಾವಣಗೆರೆಯಂತಹ ಗಂಡುಮೆಟ್ಟಿನ ನೆಲಕ್ಕೆ ಕಾಲೂರಿ ಬೆಳೆದಂತಹ ರೈತ ಪರ ಹೋರಾಟಗಾರ, ನಾಯಕ ಎಂದು ವಿಧಾನ ಪರಿಷತ್ತು ಸದಸ್ಯ ಆಯನೂರು ಮಂಜುನಾಥ್‌ ಬಣ್ಣಿಸಿದ್ದಾರೆ.

Advertisement

ಮಂಗಳವಾರ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ಶಾಸಕ ಎಸ್‌.ಎ. ರವೀಂದ್ರನಾಥ್‌ರವರ 74ನೇ ಜನ್ಮದಿನದ ಸಮಾರಂಭದಲ್ಲಿ ಮಾತನಾಡಿದ ಅವರು, ರವೀಂದ್ರನಾಥ್‌ ಜನಸಂಘ ಕಾಲದಿಂದಲೂ ಹೋರಾಟ ಮಾಡುತ್ತಲೇ ಬಂದವರು.

ದಾವಣಗೆರೆಯಂತಹ ಜಿಲ್ಲೆಯಲ್ಲಿ ನೆಲಕ್ಕೆ ಕಾಲೂರಿ ಬೆಳೆದಂತಹವರು ಎಂದರು. ಜನಸಂಘ ಎಂದರೆ ಉತ್ತರ ಭಾರತದ ಪಕ್ಷ ಎಂಬ ಭಾವನೆ ಇತ್ತು. ಅನೇಕರು ಬೇರೆ ಬೇರೆ ಪಕ್ಷಕ್ಕೆ ಕರೆದರೂ ರವೀಂದ್ರನಾಥ್‌ ಹೋಗಲಿಲ್ಲ. ಒಂದೇ ಪಕ್ಷದಲ್ಲಿ ಇದ್ದವರು. ರವೀಂದ್ರನಾಥ್‌ ನಾಯಕರ ಸುತ್ತ ಓಡಾಡಿದವರು ಅಲ್ಲ. ಪಕ್ಷದ ಸುತ್ತ ಓಡಾಡಿದವರು. ಅವರ ಪಕ್ಷ ನಿಷ್ಠೆ, ಪ್ರಾಮಾಣಿಕತೆ ಮತ್ತು ಬದ್ಧತೆಯ ಕಾರಣಕ್ಕೆ ಹಲವಾರು ಹುದ್ದೆ, ಅಧಿಕಾರ ಅರಸಿ ಬಂದವು. ಕಿರಿಯ ರಾಜಕಾರಣಿಗಳು, ಹೊಸ ಪೀಳಿಗೆಯವರಿಗೆ ಪಕ್ಷಕ್ಕಾಗಿಯೇ ನಿಂತ ಗಟ್ಟಿ ಜೀವವಾಗಿರುವ ರವೀಂದ್ರನಾಥ್‌ ಮಾದರಿ ಎಂದು ತಿಳಿಸಿದರು.

ಸಾರ್ವಜನಿಕ ಜೀವನದಲ್ಲಿ ಇದ್ದವರು ತಮ್ಮ ಊರಿನ, ಪ್ರದೇಶದ ಜನರು ಅಭಿವೃದ್ಧಿಗೆ ರಕ್ತವನ್ನೇ ಬೆವರಿನಂತೆ ಹರಿಸಿ, ಕೆಲಸ ಮಾಡಿ, ಸಾರ್ಥಕ ಜೀವನ ನಡೆಸಿದಾಗ ಮಾತ್ರ ಸಾರ್ವಜನಿಕವಾಗಿ ಹುಟ್ಟು ಹಬ್ಬ ಆಚರಿಸಿಕೊಳ್ಳ ಬೇಕು. ಆದರೆ, ಈಗ ಅಂತಹ ವಾತಾವರಣವೇ ಇಲ್ಲ. ಕಾರ್ಪೋರೇಟರ್‌, ಜಿಲ್ಲಾ ಪಂಚಾಯತ್‌, ಗ್ರಾಮ ಪಂಚಾಯತ್‌ ಸದಸ್ಯರಾದರೆ ಸಾಕು, ಅದ್ಧೂರಿಯಾಗಿ ಜನ್ಮ ದಿನ ಆಚರಣೆ ಕಂಡು ಬರುತ್ತದೆ ಎಂದರು.

ರವೀಂದ್ರನಾಥ್‌, ಯಡಿಯೂರಪ್ಪ, ಈಶ್ವರಪ್ಪ , ಶಂಕರಮೂರ್ತಿ ಮುಂತಾದವರು 60 ವರ್ಷದ ನಂತರವೇ ಸಾರ್ವಜನಿಕವಾಗಿ ಜನ್ಮದಿನ ಆಚರಿಕೊಳ್ಳಲಾರಂಭಿಸಿದರು. ಏಕೆಂದರೆ ಅವರಿಗೆ ನಾವು ಹೇಗೆ ಸಾರ್ವಜನಿಕವಾಗಿ ಜನ್ಮದಿನ ಆಚರಿಸಿಕೊಳ್ಳುವುದು ಎಂಬ ಸಾರ್ವಜನಿಕ ಲಜ್ಜೆ, ಮುಜುಗರ ಇತ್ತು. ಹಾಗಾಗಿಯೇ 60 ರ ನಂತರವೇ ಬಹಿರಂಗವಾಗಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.

Advertisement

ರವೀಂದ್ರನಾಥ್‌ ಅದಕ್ಕೆ ಅರ್ಹರು. ಆದರೆ, ನಾನು ಇನ್ನೂ ಆಚರಿಸಿಕೊಂಡಿಲ್ಲ. ಏಕೆಂದರೆ ನಾನು ಅಷ್ಟೊಂದು ದೊಡ್ಡವನಾಗಿಲ್ಲ ಎಂದು ತಿಳಿಸಿದರು. ಈಗಿನ ಕಾರ್ಯಕರ್ತರು ಫೀಲ್ಡ್‌ಗೆ ಹೋಗುವುದೇ ಇಲ್ಲ. ನಾಯಕರೇ ನಮ್ಮ ದೇವರು, ಅವರ ಸುತ್ತಲೇ ಸುತ್ತುತ್ತಾರೆ. ಅದು ಸರಿಯಲ್ಲ. ಕಾರ್ಯಕರ್ತರು ಫೀಲ್ಡ್‌ಗೆ ಹೋಗಬೇಕು. ಈಗಲೂ ಫೀಲ್ಡ್‌ಗೆ ಇಳಿದು ರಾಜಕಾರಣ ಮಾಡುವ ಜೊತೆಗೆ ಕಾರ್ಯಕರ್ತರು, ಜನರಿಗೆ ಬಹಳ ಸುಲಭವಾಗಿ ಸಿಗುವಂತಹ ರವೀಂದ್ರನಾಥ್‌ ಬಿಜೆಪಿಯ ಆಸ್ತಿ ಎಂದರು.

ಶಾಸಕ ಎಸ್‌.ಎ. ರವೀಂದ್ರನಾಥ್‌ ಮಾತನಾಡಿ, ನಾನು ಜನಸಂಘದಲ್ಲಿ ಇದ್ದಾಗನಿಂದಲೂ ನನ್ನನ್ನು ಹಾದಿ ತಪ್ಪಿಸುವ ಕೆಲಸ ಮಾಡಿದರೂ ನಾನು ಪಕ್ಷ ಬಿಟ್ಟು ಹೋಗಲಿಲ್ಲ. ಪಕ್ಷ ಏನು ಕೆಲಸ ಕೊಡುತ್ತದೆಯೋ ಅದನ್ನ ಪ್ರಾಮಾಣಿಕವಾಗಿ ಮಾಡಿಕೊಂಡು ಬಂದವನು. ಸಮ್ಮಿಶ್ರ ಸರ್ಕಾರದಲ್ಲಿ ಶಾಸಕರಿಗೆ ಅನುದಾನ ಕೊಡುವ ಮಾತೇ ಇರಲಿಲ್ಲ. ಯಡಿಯೂರಪ್ಪನವರು ಸಾಕಷ್ಟು ಅನುದಾನ ಕೊಡುತ್ತಿದ್ದಾರೆ. ಅದರಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಮಾಡಲಾಗುವುದು. ಹೊಸ ಕಾರ್ಪೋರೇಟರ್‌ ಗಳು ಏನೇನೋ ಸಿಂಗಾಪುರ್‌ ಮಾಡುತ್ತೇವೆ ಅಂದುಕೊಳ್ಳಲಿಕ್ಕೆ ಹೋಗಬೇಡಿ. ಜನರು ಏನು ಹೇಳುತ್ತಾರೋ ಅದನ್ನ ತಪ್ಪದೇ ಮಾಡಿ ಎಂದು ಸಲಹೆ ನೀಡಿದರು.

ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ರವೀಂದ್ರನಾಥ್‌ ಅವರನ್ನ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.

ಶಾಸಕರಾದ ಮಾಡಾಳ್‌ ವಿರುಪಾಕ್ಷಪ್ಪ, ಎಸ್‌.ವಿ. ರಾಮಚಂದ್ರ, ಪ್ರೊ| ಎನ್‌. ಲಿಂಗಣ್ಣ, ಮಾಜಿ ಶಾಸಕ ಡಾ| ಎ.ಎಚ್‌. ಶಿವಯೋಗಿಸ್ವಾಮಿ, ಪ್ರೊ. ಸಿ. ನರಸಿಂಹಪ್ಪ ಮಾತನಾಡಿದರು.

ದಾವಣಗೆರೆ ಉತ್ತರ ಬಿಜೆಪಿ ಅಧ್ಯಕ್ಷ ಬಿ.ಜಿ. ಸಂಗಜ್ಜಗೌಡ್ರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಮಾಜಿ ಅಧ್ಯಕ್ಷರಾದ ಶೈಲಜಾ ಬಸವರಾಜ್‌, ಸಹನಾ ರವಿ, ಮಂಜುಳಾ ಟಿ.ವಿ. ರಾಜು, ಎಸ್‌.ಎಂ. ವೀರೇಶ್‌, ತಾಪಂ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಹಾಗೂ ರತ್ನಮ್ಮ ರವೀಂದ್ರನಾಥ್‌ ಇತರರು ಇದ್ದರು. ಬಿಜೆಪಿಯ ಹಿರಿಯ ಮುಖಂಡರು, ನಗರಪಾಲಿಕೆಯ ನೂತನ ಸದಸ್ಯರನ್ನ ಅಭಿನಂದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next