ದಾವಣಗೆರೆ: ಒಂದು ಕಡೆ ಅನಿವಾರ್ಯತೆ, ಮತ್ತೊಂದು ಕಡೆ ಜೀವ ಭಯ… ನಡುವೆಯೇ ಬೆಸ್ಕಾಂ ಸಿಬ್ಬಂದಿ ಅತೀವ ಒತ್ತಡದಲ್ಲಿ ಮೀಟರ್ ರೀಡಿಂಗ್…. ಕೆಲಸ ಮಾಡಬೇಕಾಗಿದೆ!
ಜಗತ್ತನ್ನೆ ತಲ್ಲಣಗೊಳಿಸಿರುವ ಕೋವಿಡ್ ವೈರಸ್ ತಡೆಯುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದ ಗ್ರಾಹಕರು ಮೂರು ತಿಂಗಳು ವಿದ್ಯುತ್ ಬಿಲ್ ಕಟ್ಟುವಂತಿಲ್ಲ. ಆದರೂ ಬೆಸ್ಕಾಂ ಸಿಬ್ಬಂದಿ ಮೀಟರ್ ರೀಡಿಂಗ್ ಮಾಡಲೇಬೇಕಾಗಿದೆ. ಹೇಳಿ ಕೇಳಿ ದಾವಣಗೆರೆ ಈಗ ಕೋವಿಡ್ ಹಾಟ್ ಸ್ಪಾಟ್ ಆಗುವ ಎಲ್ಲಾ ಲಕ್ಷಣಗಳು ದಿನದಿಂದ ದಿನಕ್ಕೆ ಹೆಚ್ಚು ಸ್ಪಷ್ಟವಾಗುತ್ತಿದೆ. ಯಾವ ಭಾಗ, ಯಾವ ಮನೆಯಲ್ಲಿ ಕೊರೊನಾ ವೈರಸ್ ಕಾದು ಕುಳಿತಿದಿಯೋ ಎಂದು ಹೇಳಲಿಕ್ಕೂ ಆಗದಂತಹ ಗಂಭೀರ ಪರಿಸ್ಥಿತಿಯ ನಡುವೆಯೂ ಮೀಟರ್ ರೀಡಿಂಗ್ ಮಾಡಬೇಕಾಗಿದೆ.
ಕೆಲವಾರು ಕಟ್ಟಡ, ಮನೆಗಳಲ್ಲಿ ಮೀಟರ್ ಹೊರ ಭಾಗದಲ್ಲಿದ್ದರೆ ಇನ್ನು ಕೆಲವು ಕಡೆ ಮನೆಯ ಒಳಗೆ ಇರುತ್ತವೆ. ಮನೆಯ ಹೊರಗೆ ಮೀಟರ್ ಇದ್ದರೆ ಹೇಗೋ ನಡೆಯುತ್ತದೆ. ಒಂದೊಮ್ಮೆ ಮನೆಯ ಒಳಗೆ ಮೀಟರ್ ಇದ್ದರೆ ಸಿಬ್ಬಂದಿ ತಮ್ಮ ಸವಿವರ ನೀಡಿಯೇ ಮನೆಯ ಒಳಗೆ ಹೋಗಬೇಕಾಗುತ್ತದೆ. ಮನೆಯ ಒಳಗೆ ಇರುವಂತಹ ಮೀಟರ್ ರೀಡಿಂಗ್ ಮಾಡುವುದಕ್ಕೆ ಜನರು ಅಷ್ಟು ಸುಲಭವಾಗಿ ಒಪ್ಪುವುದೇ ಇಲ್ಲ. ಸಿಬ್ಬಂದಿ ತಮ್ಮ ಹೆಸರು, ಮೊಬೈಲ್ ನಂಬರ್, ಮೀಟರ್ ರೀಡಿಂಗ್‌ಗೆ ಹೋಗಿ ಬಂದಿರುವ ಏರಿಯಾ, ಮನೆಗಳ ವಿವರವನ್ನೂ ನೀಡಬೇಕಾಗುತ್ತಿದೆ. ಅನೇಕ ಕಡೆ ಮನೆಯ ಒಳಗೆ ಬರಲೇಬೇಡಿ..ಯಾರ ಯಾರ ಮನೆಯ ಒಳಗೆ ಹೋಗಿ ಬಂದಿರುತೀ¤ರೋ, ಅಲ್ಲಿ ಏನೇನು ಇದೆಯೋ… ಹಂಗಾಗಿ ಯಾವುದೇ ಕಾರಣಕ್ಕೂ ಮನೆಯೊಳಗೆ ಕಾಲಿಡಲೇಬೇಡಿ… ಎಂದು ನೇರವಾಗಿಯೇ ಆಕ್ಷೇಪವನ್ನ ಮೀಟರ್ ರೀಡಿಂಗ್‌ಗೆ ಹೋದವರು ಅನುಭವಿಸಲೇಬೇಕಾಗಿದೆ. ಮನೆಯವರೂ ಸಹ ಆ ರೀತಿ ಆಕ್ಷೇಪ ಮಾಡುವುದಕ್ಕೆ ಬಿಟ್ಟು ಬಿಡದೆ ಕಾಡುತ್ತಿರುವ ಕೊರೊನಾ ಭಯ!.
ದಾವಣಗೆರೆಯಲ್ಲಿ 7-9 ಮಹಿಳೆಯರು ಸೇರಿದಂತೆ 70-80 ಜನರು ಮೀಟರ್ ರೀಡರ್‌ಗಳಿದ್ದಾರೆ. ಕಂಟೈನ್ ಮೆಂಟ್ ಝೋನ್ ಹೊರತುಪಡಿಸಿ ಬೇರೆ ಭಾಗದಲ್ಲಿ ಮೀಟರ್ ರೀಡಿಂಗ್‌ಗೆ ಹೋಗಲೇಬೇಕಿದೆ. ಮೀಟರ್ ರೀಡಿಂಗ್ ಗೆ ಹೋದ ಸಂದರ್ಭದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಕಂಟೈನ್‌ಮೆಂಟ್ ಝೋನ್, ಸೀಲ್‌ಡೌನ್ ಇರುವ ಕಡೆ ಬಿಟ್ಟು ಬೇರೆ ಕಡೆ ಮೀಟರ್ ರೀಡಿಂಗ್ ಮಾಡಬೇಕು ಎಂಬುದು ಬೋರ್ಡ್ ಆದೇಶ. ಹಾಗಾಗಿ ಮೀಟರ್ ರೀಡಿಂಗ್ ಮಾಡಲೇಬೇಕು. ಹೋಗದೇ ಇದ್ದರೆ ಇನ್ನೇನು ಆಗುವುದಿಲ್ಲ… ಸಂಬಳ ಕಟ್… ಆಗುತ್ತದೆ ಎಂದು ಹಿರಿಯ ಅಧಿಕಾರಿಗಳು ಹೇಳುವುದರಿಂದ ಜೀವವನ್ನ ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡಬೇಕಾಗುತ್ತಿದೆ.
ಹಿರಿಯ ಅಧಿಕಾರಿಗಳ ಅಣತಿಯಂತೆ ಮೀಟರ್ ರೀಡಿಂಗ್‌ಗೆ ಹೋಗುವಂತಹವರಿಗೆ ಮಾಸ್ಕ್, ಸ್ಯಾನಿಟೈಸರ್ ಒಳಗೊಂಡಂತೆ ಯಾವುದೇ ಸುರಕ್ಷತಾ ಸಾಮಗ್ರಿಗಳನ್ನು ಬೆಸ್ಕಾಂನಿಂದ ನೀಡುತ್ತಿಲ್ಲ. ಸಿಬ್ಬಂದಿಯೇ ತಮ್ಮ ಖರ್ಚಿನಲ್ಲಿ ಕೈಗವಸು, ಮುಖಗವಸು, ಸ್ಯಾನಿಟೈಸರ್ ಖರೀದಿಸಿ ಕೆಲಸಕ್ಕೆ ತೆರಳುವಂತಾಗಿದೆ. ಕೊರೊನಾ ವೈರಸ್ ತಡೆಯುವ ನಿಟ್ಟಿನಲ್ಲಿ ಭಾರೀ ಕ್ರಮ ತೆಗೆದುಕೊಳ್ಳುತ್ತಿರುವ ಸರ್ಕಾರ ತನ್ನದೇ ಆದ ಬೆಸ್ಕಾಂ ಸಿಬ್ಬಂದಿಯ ಆರೋಗ್ಯ, ಸುರಕ್ಷತೆಯತ್ತ ಗಮನ ನೀಡಬೇಕಿದೆ ಎಂಬುದು ಸಿಬ್ಬಂದಿ ಒತ್ತಾಯ. ಸರ್ಕಾರ ಇತ್ತ ಗಮನ ಹರಿಸಬೇಕಿದೆ.
ನೋಡುವ ರೀತಿಯೇ ಬೇರೆ
ನನ್ನ ಹೆಸರು ಕೇಳಿದ ತಕ್ಷಣಕ್ಕೆ ಮನೆಯವರು ಬೇರೆಯದ್ದೇ ರೀತಿ ನೋಡುತ್ತಾರೆ. ಎಷ್ಟೇ ಮನವರಿಕೆ ಮಾಡಿಕೊಟ್ಟರೂ ಜನರು ಒಪ್ಪುವುದೇ ಇಲ್ಲ. ಮನೆಯ ಒಳಕ್ಕೂ ಬಿಟ್ಟುಕೊಳ್ಳುವುದೂ ಇಲ್ಲ. ಬಿಲ್‌ನೂ° ಮುಟ್ಟುವುದಿಲ್ಲ. ಅಲ್ಲಿಯೇ ಬಿಸಾಕಿ… ಎಂದು ನೇರವಾಗಿಯೇ ಹೇಳುತ್ತಾರೆ. ಇಂತಹ ಕಷ್ಟದ ನಡುವೆ ಕೆಲಸ ಮಾಡಿ ಮನೆಗೆ ಹೋದರೂ ಒಂದು ರೀತಿಯ ಭಯಪಡುತ್ತಾರೆ. ನೇರವಾಗಿ ಮನೆಯ ಒಳಗೆ ಹೋಗುವಂತಿಲ್ಲ. ಸ್ನಾನ ಮಾಡಿಯೇ ಮನೆಯ ಒಳಗೆ ಹೋಗಬೇಕಾಗುತ್ತಿದೆ ಎಂಬುದು ಸಿಬ್ಬಂದಿಯೊಬ್ಬರ ಅಳಲು.
ಸೀಲ್‌ಡೌನ್‌ನಲ್ಲೂ ರೀಡಿಂಗ್
ಬೆಸ್ಕಾಂ ಗ್ರಾಮಾಂತರ ಪ್ರದೇಶಕ್ಕೆ ಒಳಪಡುವ ಯರಗುಂಟೆ, ಅಶೋಕ ನಗರ ಭಾಗದಲ್ಲಿ ಮೀಟರ್ ರೀಡಿಂಗ್ ಮಾಡಬೇಕಾಗಿದೆ. ಎರಡು ಏರಿಯಾಗಳು ಸೀಲ್‌ಡೌನ್ ಆಗಿವೆ. ಅಲ್ಲಿ ಹೋಗುವಂತೆಯೇ ಇಲ್ಲ ಎಂದಾದ ಮೇಲೆ ಮೀಟರ್ ರೀಡಿಂಗ್ ಮಾಡುವುದಾದರೂ ಹೇಗೆ ಎಂದು ಸಿಬ್ಬಂದಿಯೊಬ್ಬರು ಪ್ರಶ್ನಿಸುತ್ತಾರೆ.
ರಾ. ರವಿಬಾಬು