Advertisement

ಇಂದಿನಿಂದ ನಗರದಲ್ಲಿ ಮಾವುಮೇಳ

12:56 PM May 17, 2019 | Naveen |

ದಾವಣಗೆರೆ: ರಾಜ್ಯ ಮಾರುಕಟ್ಟೆ ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ತೋಟಗಾರಿಕಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಮೇ 17 ರಿಂದ 23ರ ವರೆಗೆ ಗಾಜಿನಮನೆಯಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ ತಿಳಿಸಿದ್ದಾರೆ.

Advertisement

ನೈಸರ್ಗಿಕವಾಗಿ ಮಾಗಿಸಿದ, ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ಯೋಗ್ಯ ಬೆಲೆಯಲ್ಲಿ ಒದಗಿಸುವ, ಮಾವಿನ ಹಣ್ಣಿನಲ್ಲಿರುವ ಪೋಷಕಾಂಶಗಳ ಲಭ್ಯತೆ, ಸೇವನೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ಒಳಗೊಂಡಂತೆ ವಿವಿಧ ಉದ್ದೇಶದೊಂದಿಗೆ ಮೇಳ ಆಯೋಜಿಸಲಾಗಿದೆ. 30ಕ್ಕೂ ಹೆಚ್ಚು ಮಳಿಗೆಗಳಲ್ಲಿ ಹಲವಾರು ಬಗೆಯ ಮಾವುಗಳ ಪ್ರದರ್ಶನ, ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶುಕ್ರವಾರ ಮಧ್ಯಾಹ್ನ 3ಕ್ಕೆ ನಡೆಯುವ ಮೇಳದ ಉದ್ಘಾಟನೆಯಲ್ಲಿ ತಮ್ಮೊಂದಿಗೆ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್. ಬಸವರಾಜೇಂದ್ರ ಮಾವು ಪ್ರದರ್ಶಿಕೆ, ಜಿಲ್ಲಾ ರಕ್ಷಣಾಧಿಕಾರಿ ಆರ್‌. ಚೇತನ್‌ ಜೇನು ಮಳಿಗೆ ಉದ್ಘಾಟಿಸುವರು. ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಠಾರಿಯಾ, ತೋಟಗಾರಿಕಾ ಇಲಾಖೆ ನಿರ್ದೇಶಕ ಡಾ| ಎಂ.ವಿ. ವೆಂಕಟೇಶ್‌ ಇತರರು ಭಾಗವಹಿಸುವರು ಎಂದು ತಿಳಿಸಿದರು.

ನೈಸರ್ಗಿಕವಾಗಿ ಮಾಗಿಸಿದ,ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ಯೋಗ್ಯ ಬೆಲೆಯಲ್ಲಿ ಒದಗಿಸುವ ಉದ್ದೇಶದಿಂದ ಪ್ರತಿ ವರ್ಷ ತೋಟಗಾರಿಕಾ ಇಲಾಖೆಯಿಂದ ಮೇಳ ನಡೆಸಲಾಗುತ್ತದೆ. ಮಲ್ಲಿಕಾ, ಬಾದಾಮಿ, ಚಿರುಕು ರಸಂ, ಬಂದಾರಿಯ, ಲಾಲ್ ಖಾತ್ರ, ಶಕ್ಕರ್‌ ಗೋಲಾ, ಆರ್ಕಾ ಅರುಣಾ, ಐಶ್ವರ್ಯ, ಪೂಸಾ ಸೂರ್ಯ, ಮರಿಗೌಡ, ರಸಪುರಿ, ತೋತಾಪುರಿ, ನೀಲಂ, ಆಮ್ಲೆಟ್, ಮಲಗೋವಾ… ಇತರೆ ತಳಿಯ ಮಾವುಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ ಎಂದು ತಿಳಿಸಿದರು.

ಕ್ಯಾಲ್ಸಿಯಂ ಕಾರ್ಬೈಡ್‌ನ‌ಂತಹ ಹಾನಿಕಾರಕ ರಾಸಾಯನಿಕ ಬಳಸಿ ಕೃತಕವಾಗಿ ಹಣ್ಣು ಮಾಡುವುದರಿಂದ ಆಗುವ ಅಪಾಯದ ಬಗ್ಗೆಯೂ ಮಾಹಿತಿ ನೀಡಲಾಗುವುದು. ಮಾವು ಮಂಡಳಿಯಿಂದ ರೈತರಿಗೆ ದೊರೆಯುವ ಸೌಲಭ್ಯ, ಪ್ರಯೋಜನಗಳ ತಿಳಿವಳಿಕೆ ಮೂಡಿಸಲಾಗುವುದು ಎಂದು ತಿಳಿಸಿದರು.

Advertisement

ದಾವಣಗೆರೆ ಜಿಲ್ಲೆಯ 3,500 ಹೆಕ್ಟೇರ್‌ನಲ್ಲಿ 30 ಸಾವಿರದಷ್ಟು ಮಾವು ಉತ್ಪಾದನೆ ಇರುತ್ತದೆ. ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಮುಂತಾದ ಕಡೆ ಅತಿ ಹೆಚ್ಚಾಗಿ ಮಾವು ಬೆಳೆಯಲಾಗುತ್ತದೆ. ಬಾದಾಮಿ, ರಸಪುರಿ, ಮಲ್ಲಿಕಾ, ಮಲಗೋವಾ, ತೋತಾಪುರಿ, ದಶೆಹರಿ, ಬೆನಿಷಾನ್‌, ಸಿಂಧೂರ ಮುಂತಾದ ತಳಿಯ ಮಾವನ್ನು ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್. ಬಸವರಾಜೇಂದ್ರ, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಲಕ್ಷ್ಮಿಕಾಂತ್‌ ಬೊಮ್ಮನ್ನರ್‌, ಹಿರಿಯ ಸಹಾಯಕ ನಿರ್ದೇಶಕಿ ರಶ್ಮಿ ಪರ್ವೀನ್‌, ಸಹಾಯಕ ನಿರ್ದೇಶಕ ಯತಿರಾಜ್‌ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಜೇನು ಕೃಷಿ ಮಾಹಿತಿ ಶಿಬಿರ 
ದಾವಣಗೆರೆ: ಗಾಜಿನಮನೆಯಲ್ಲಿ ನಡೆಯುವ ಮಾವು ಮೇಳದ ಜೊತೆಗೆ ತೋಟಗಾರಿಕೆ ಬೆಳೆಗಳ ಅಭಿವೃದ್ಧ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಜೇನು ಕೃಷಿ ಹಾಗೂ ಮಧುವನದ ಬಗ್ಗೆ ಮೇ 18 ರಂದು ರೈತರಿಗೆ ಹಾಗೂ ಸಾರ್ವಜನಿಕರಿಗೆ ಜೇನು ಕೃಷಿಯಲ್ಲಿ ತೊಡಗಿಕೊಂಡಿರುವ ಪ್ರಗತಿಪರ ರೈತರಿಂದ ಮಾಹಿತಿ ಹಾಗೂ ತರಬೇತಿ ನೀಡಲಾಗುವುದು ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ ತಿಳಿಸಿದ್ದಾರೆ.

ಅಂದಿನ ತಾಂತ್ರಿಕ ಕಾರ್ಯಾಗಾರದಲ್ಲಿ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಡಾ| ಎಂ.ಜಿ. ಬಸವನಗೌಡ, ಶಿರಸಿಯ ಜೇನು ಕೃಷಿ ತಜ್ಞ ಮಧುಕೇಶ್ವರ ಜನಕ ಹೆಗಡೆ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next