Advertisement

ಮೈತ್ರಿ ಅಭ್ಯರ್ಥಿಗೆ ಭಾರತ ಕಮ್ಯೂನಿಸ್ಟ್‌ ಪಕ್ಷದ ಬೆಂಬಲ

01:09 PM Apr 19, 2019 | Naveen |

ದಾವಣಗೆರೆ: 2014ರ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಜಮೆ, ಡಾ| ಸ್ವಾಮಿನಾಥನ್‌ ವರದಿ ಜಾರಿ, ಕನಿಷ್ಟ ವೇತನ ಜಾರಿ ಮಾಡದ ಮೋದಿ ಮುಖ ನೋಡಿ ಮತ ಹಾಕಬೇಕಾ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಎಚ್‌.ಕೆ. ರಾಮಚಂದ್ರಪ್ಪ ಪ್ರಶ್ನಿಸಿದ್ದಾರೆ.

Advertisement

ನರೇಂದ್ರ ಮೋದಿ ಅವರು ಹೇಳಿದ್ದನ್ನೇ ಒಂದು ಮಾಡಲಿಲ್ಲ. ಬದಲಿಗೆ ನೋಟು ಅಮಾನ್ಯ ಮಾಡಿ 148 ಜನ ಅಮಾಯಕರ
ಸಾವಿಗೆ ಕಾರಣರಾದರು. ಸತ್ತಂತಹ ಕುಟುಂಬಕ್ಕೆ ಪರಿಹಾರ ನೀಡಲಿಲ್ಲ. ಒಂದೇ ಒಂದು ಸುದ್ದಿಗೋಷ್ಠಿ ನಡೆಸಿ ದೇಶದ ಅಭಿವೃದ್ಧಿಗೆ ಏನು ಮಾಡಿದ್ದೇನೆ, ಮುಂದಿನ ಯೋಜನೆಗಳೇನು ಎಂದು ಹೇಳದೇ ಇರುವವರ ಮುಖ ನೋಡಿ ಮತ ಹಾಕಬೇಕಾ
ಎಂಬ ತಮ್ಮ ಪ್ರಶ್ನೆಗೆ ಮೋದಿ ಮುಖ ನೋಡಿ ಮತ ಹಾಕಿ ಎನ್ನುವರು ಉತ್ತರ ನೀಡಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ನರೇಂದ್ರ ಮೋದಿ ಅವರ ಮುಖ ನೋಡಿ ಮತ ನೀಡಿ
ಎಂದು ಕೇಳುವುದನ್ನು ನೋಡಿದರೆ ದಾವಣಗೆರೆ ಲೋಕಸಭಾ
ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಇಲ್ಲ ಎಂದು ಭಾವಿಸಬೇಕಾಗುತ್ತದೆ.
ಮೋದಿ ಮುಖ ನೋಡಿ ಯಾವ ಕಾರಣಕ್ಕೆ ಮತ ಹಾಕಬೇಕು. ಏನು ಮೋದಿ ಬಂದು ದಾವಣಗೆರೆ ಕ್ಷೇತ್ರದ ಕೆಲಸ ಮಾಡುತ್ತಾರಾ ಎಂದು ಪ್ರಶ್ನಿಸಿದರು.

ಅಡುಗೆ ಅನಿಲ ಸಿಲಿಂಡರ್‌ ಬೆಲೆ 450 ರೂಪಾಯಿಯಿಂದ 950 ರೂಪಾಯಿಗೆ ಏರಿಸಲಾಗಿದೆ ಎಂಬುದನ್ನ ನೋಡಿ ಮತ ಹಾಕಬೇಕಾ ಎಂಬುದಕ್ಕೆ ಬಿಜೆಪಿಯವರು ಉತ್ತರ ನೀಡಬೇಕು. ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಮಾತನಾಡುವ 56 ಇಂಚು ಎದೆಯ ನರೇಂದ್ರ ಮೋದಿಯವರು 1,800 ಕೋಟಿ ಹಣವನ್ನು
ಬೇರೆಯವರಿಗೆ ನೀಡಲಾಗಿದೆ ಎಂದು ಡೈರಿ ಬರೆದಿರುವ ಬಿ.ಎಸ್‌. ಯಡಿಯೂರಪ್ಪ ಅವರ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಅವರ ಮುಖ ನೋಡಿ ಮತ ನೀಡಬೇಕಾ ಎಂದು ಪ್ರಶ್ನಿಸಿದರು.

ಪುಲ್ವಾಮಾ ಘಟನೆಯನ್ನೇ ಬಂಡವಾಳ ಮಾಡಿಕೊಂಡು, ತಾವೇ ಯುದ್ಧದಲ್ಲಿ ಗನ್‌ ಹಿಡಿದುಕೊಂಡು ಹೋರಾಡಿದವರಂತೆ ಪ್ರಚಾರ
ಮಾಡುವ, ಬಾಯಿಗೆ ಬಂದಂತೆ ಮಾತನಾಡುವ ಸುಳ್ಳಿನ ಸರದಾರನನ್ನು ಜನರು ನಂಬಬಾರದು. ನಂಬಿ ಮೋಸ ಹೋಗಬಾರದು. ದೇಶದ ರೈತರು, ಕಾರ್ಮಿಕರಿಗೆ ಬೇಡವಾದ ಪ್ರಧಾನಿ ಬೇಡ. ದೇಶ, ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು, ಕೋಮುವಾದಿ ಬಿಜೆಪಿ ಸೋಲಿಸಲು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ
ಅಭ್ಯರ್ಥಿ ಎಚ್‌.ಬಿ. ಮಂಜಪ್ಪ ಅವರನ್ನ ಬೆಂಬಲಿಸಲಾಗುವುದು ಎಂದು ತಿಳಿಸಿದರು. ಪಕ್ಷದ ಆನಂದರಾಜ್‌, ಆವರಗೆರೆ ಚಂದ್ರು,
ಟಿ.ಎಸ್‌. ನಾಗರಾಜ್‌, ಆವರಗೆರೆ ವಾಸು, ಐರಣಿ ಚಂದ್ರು, ಎಂ.ಬಿ. ಶಾರದಮ್ಮ, ಹುಣಸಕಟ್ಟೆ ರಂಗನಾಥ್‌, ಎನ್‌.ಎಚ್‌. ರಮೇಶ್‌ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next