Advertisement

ಹೊನ್ನಾಳಿಯಲ್ಲಿ ಹರಿದ ಮತಗಳ ಹೊಳೆ

11:02 AM Apr 24, 2019 | Team Udayavani |

ಹೊನ್ನಾಳಿ: ದಾವಣಗೆರೆ ಲೋಕಸಭಾ ಚುನಾವಣೆಯ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲ 245 ಮತಗಟ್ಟೆ ಕೇಂದ್ರಗಳಲ್ಲಿ ಮಂಗಳವಾರ ಚುನಾವಣೆ ಶಾಂತಿಯುತವಾಗಿ ನಡೆಯಿತು.

Advertisement

ಬೆಳಿಗ್ಗೆ 7ಕ್ಕೆ ನಿಧಾನ ಗತಿಯಲ್ಲಿ ಆರಂಭವಾದ ಮತದಾನ ಪ್ರಕ್ರಿಯೆ ಬಿಸಿಲಿನ ಪ್ರಖರತೆ ಏರಿದಂತೆ ಮತದಾನದ ಕಾವೂ ಏರಿತು. ಸಂಜೆ 5ಕ್ಕೆ ತಾಲೂಕಿನಲ್ಲಿ ಒಟ್ಟು ಶೇ. 68.87 ಮತದಾನ ದಾಖಲಾಗಿತ್ತು.

ಬೆಳಿಗ್ಗೆ 9 ಗಂಟೆಗೆ ಶೇ.9.6, 11ಕ್ಕೆ ಶೇ.14, 1ಕ್ಕೆ ಶೇ.30, 3ಗಂಟೆಗೆ ಶೇ.60, 5ಗಂಟೆವರೆಗೆ ಶೇ. 68.87 ಮತದಾನ ದಾಖಲಾಯಿತು. ಸಂಜೆ 6 ಗಂಟೆಗೆ ಮತದಾನದ ಸರತಿ ಸಾಲಿನಲ್ಲಿದ್ದವರಿಗೆಲ್ಲ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದರಿಂದ ಕೆಲ ಮತಗಟ್ಟೆ ಕೇಂದ್ರಗಳಲ್ಲಿ 6.45ರವರೆಗೂ ಮತದಾನ ಪ್ರಕ್ರಿಯೆ ನಡೆಯಿತು.

ಸಂಜೆ 4ಗಂಟೆ ಸುಮಾರಿಗೆ ಮೋಡ ಕವಿದು ಗಾಳಿ ಬೀಸಲಾರಂಭಿಸಿತು. ಇನ್ನೇನು ಮಳೆ ಪ್ರಾರಂಭವಾಗಿ ಮತದಾನಕ್ಕೆ ಅಡ್ಡಿಯಾಗಬಹುದು ಎನ್ನುತ್ತಿದ್ದಂತೆ ಮೋಡ ಮಾಯವಾಗಿ ವಾತಾವರಣ ಸಂಪೂರ್ಣ ತಿಳಿಯಾಗಿ ಮತದಾನ ಸರಾಗವಾಗಿ ನಡೆಯಿತು.

ವಿಶೇಷ ಚೇತನರಿಗೆ, ಗರ್ಭಿಣಿಯರಿಗೆ ಹಾಗೂ ವಯೋವೃದ್ಧರಿಗೆ ಸ್ವಯಂಸೇವಕರು ಮತ ಚಲಾಯಿಸಲು ಸಹಕರಿಸಿದರು. ಮತಗಟ್ಟೆ ಕೇಂದ್ರಗಳಿಗೆ ಕರೆದುಕೊಂಡು ಬಂದು ಮತ ಹಾಕಿದ ನಂತರ ಅವರನ್ನು ಪುನಃ ಮನೆಗೆ ಕಳಿಸುವ ವ್ಯವಸ್ಥೆ ಮಾಡುತ್ತಿದ್ದರು.

Advertisement

ಸೆಕ್ಟರ್‌ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ಪರಿಶೀಲಿಸಿದರು. ಸಹಾಯಕ ಚುನಾವಣಾಧಿಕಾರಿ ಸುರೇಶ್‌ರೆಡ್ಡಿ ಮತ್ತು ತಹಶೀಲ್ದಾರ್‌ ಎಂ.ಮಲ್ಲಿಕಾರ್ಜುನ ತಾಲೂಕಿನ ವಿವಿಧ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ ನಂತರ ಕೇಂದ್ರ ಸ್ಥಾನದಲ್ಲಿಯೇ ಉಳಿದು ಚುನಾವಣೆ ಉಸ್ತುವಾರಿ ನಡೆಸಿದರು.

ಶಾಸಕ ಎಂ.ಪಿ.ರೇಣುಕಾಚಾರ್ಯ ಹಿರೇಮಠ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಅಭ್ಯರ್ಥಿ ಎಚ್.ಬಿ.ಮಂಜಪ್ಪ ದೇವನಾಯ್ಕನಹಳ್ಳಿ ಜಿಜೆಸಿ ಮತಗಟ್ಟೆ ಕೇಂದ್ರದಲ್ಲಿ ಮತ ಚಲಾಯಿಸಿದರು.

ಇವಿಎಂ, ವಿವಿಪ್ಯಾಟ್ ಸೇರಿದಂತೆ ಯಂತ್ರಗಳು ಯಾವುದೇ ಮತಗಟ್ಟೆಯಲ್ಲಿ ಕೈ ಕೊಟ್ಟ ಪ್ರಕರಣಗಳು ವರದಿಯಾಗಿಲ್ಲ.

ಮತಗಟ್ಟೆ ಸಿಬ್ಬಂದಿಗೆ ಅಕ್ಷರ ದಾಸೋಹದಿಂದ ಅಡುಗೆ ವ್ಯವಸ್ಥೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next