ದಾವಣಗೆರೆ: ದಾವಣಗೆರೆ ಲೋಕಸಭಾ ಚುನಾವಣೆ ರಂಗೇರಿದೆ. ಜೆಡಿಎಸ್ ಬೆಂಬಲದಿಂದ ಕುರಿ… ಈಗ ಹೋರಿಯಾಗಿ ಗೆಲ್ಲುವ ಹಂತಕ್ಕೆ ಬಂದಿದೆ ಎಂದು ಹರಿಹರ ಕ್ಷೇತ್ರದ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ವಿಶ್ಲೇಷಿಸಿದ್ದಾರೆ.
ಲೋಕಸಭಾ ಚುನಾವಣೆ ಪ್ರಾರಂಭದಲ್ಲಿ ಖುದ್ದು ನಾನೇ ಗೂಳಿಗೂ ಕುರಿಗೂ ಸಮಸಾಟಿ ಅಲ್ಲ ಎಂದು ಹೇಳಿದ್ದೆನು. ಕಾಲ ಕಳೆದಂತೆ ಜೆಡಿಎಸ್ ಬೆಂಬಲದಿಂದ ಕುರಿ… ಈಗ ಹೋರಿಯಾಗಿ ಗೆಲ್ಲುವ ಹಂತಕ್ಕೆ ಬಂದಿದೆ. ಕುರಿ ಎಳೆಯಲೂಬಹುದು, ಗುದ್ದಲೂ ಬಹುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜೆಡಿಎಸ್ ಮೈತ್ರಿ ಧರ್ಮ ಪಾಲನೆ ಮಾಡುತ್ತಿರುವ ಕಾರಣದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಗೆಲುವು ಖಚಿತ. ಅಷ್ಟಾದರೂ ಕಾಂಗ್ರೆಸ್ ಉತ್ಸುಕತೆಯಿಂದ ಕೆಲಸ ಮಾಡದೇ ಆಂತಕ ಮೂಡಿಸುತ್ತಿದೆ. ಚುನಾವಣೆಗೆ ಇನ್ನೂ ಎರಡೇ ದಿನ ಬಾಕಿ ಇವೆ. ಕಾಂಗ್ರೆಸ್‌ನವರು ಪಾಂಪ್ಲೆಟ್ನ್ನು ಸಹ ಹಂಚಿಲ್ಲ. 39 ಜನ ನಗರ ಪಾಲಿಕೆ ಸದಸ್ಯರಿದ್ದಾರೆ. ಈಗಲಾದರೂ ಕೆಲಸ ಮಾಡುವಂತೆ ಕಾಂಗ್ರೆಸ್ ನಾಯಕರು ಸೂಚನೆ ನೀಡಬೇಕು ಎಂದು ಕೋರಿದರು.
ಮಾಜಿ ಸಚಿವ ಮುರುಗೇಶ್ ನಿರಾಣಿ ಪಂಚಮಸಾಲಿ ಸಮಾಜದ ರಾಜ್ಯ ಮುಖಂಡರು. ಅವರು ಸಂಸದ ಜಿ.ಎಂ. ಸಿದ್ದೇಶ್ವರ್ ಕುಟುಂಬದೊಂದಿಗೆ ಸಂಬಂಧ ಬೆಳೆಸಿರುವುದು ಒಳ್ಳೆಯದು. ಆದರೆ, ಆ ಸಂಬಂಧವನ್ನ ರಾಜಕೀಯ ಸಂಬಂಧಕ್ಕೆ ಬಳಕೆ ಮಾಡಬಾರದು. ನಾನು ಎಚ್.ಎಸ್. ಶಿವಶಂಕರ್, ಎನ್. ಕೊಟ್ರೇಶ್ ಅವರನ್ನ ಭೇಟಿ ಮಾಡಿದ್ದೇನೆ, ಮಾತನಾಡಿದ್ದೇನೆ ಎಂದು ಮುರುಗೇಶ್ ನಿರಾಣಿ ಹೇಳುವ ಮೂಲಕ ಪಂಚಮಸಾಲಿ ಸಮಾಜದ ಮುಖಂಡರು ಎಲ್ಲರಲ್ಲೂ ಗೊಂದಲ ಮೂಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುರುಗೇಶ್ ನಿರಾಣಿಯವರು ನನ್ನನ್ನು ಭೇಟಿ ಆಗಿಲ್ಲ. ಮಾತುಕತೆ ನಡೆಸಿಲ್ಲ. ಎಲ್ಲವೂ ಸತ್ಯಕ್ಕೆ ದೂರವಾದ ವಿಚಾರ. ಪಂಚಮಸಾಲಿ ಸಮಾಜದವರು ಯಾರೂ ಸಹ ಗೊಂದಲಕ್ಕೆ ಒಳಗಾಗುವುದು ಬೇಡ. ಮೈತ್ರಿ ಧರ್ಮದಂತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಅವರನ್ನೇ ಬೆಂಬಲಿಸಿ, ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಅರಸೀಕೆರೆ ಎನ್. ಕೊಟ್ರೇಶ್‌ಮಾತನಾಡಿ, ಪಂಚಮಸಾಲಿ ಸಮಾಜದ ರಾಜ್ಯ ಮುಖಂಡರಾದ ಮಾಜಿ ಸಚಿವ ಮುರುಗೇಶ್ ನಿರಾಣಿ ಸಮಾಜ ಬಾಂಧವರಲ್ಲೇ ಗೊಂದಲ ಮೂಡಿಸುತ್ತಿದ್ದಾರೆ. ನಾವು ಯಾವ ಕಾರಣಕ್ಕೂ ಮೈತ್ರಿ ಧರ್ಮದ ಪಾಲನೆಯಿಂದ ಹಿಂದೆ ಸರಿಯುವುದೇ ಇಲ್ಲ. ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಅವರನ್ನ ಗೆಲ್ಲಿಸುತ್ತೇವೆ ಎಂದು ತಿಳಿಸಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ. ಚಿದಾನಂದಪ್ಪ, ಪರಮೇಶ್‌ಗೌಡ್ರು, ಕಂಚಿಕೆರೆ ಕೆಂಚಪ್ಪ, ಮೋತಿ ಶಂಕರಪ್ಪ, ಗಣೇಶ್ ಟಿ. ದಾಸಕರಿಯಪ್ಪ, ತೆಲಗಿ ಈಶ್ವರಪ್ಪ, ಎಚ್.ಎಸ್. ಯೋಗೇಶ್, ಎಸ್. ಓಂಕಾರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.