Advertisement

ಮತದಾನಕ್ಕೆ ಸಕಲ ಸಿದ್ಧತೆ

11:09 AM Apr 22, 2019 | Naveen |

ದಾವಣಗೆರೆ: ಏ.23ರಂದು ನಡೆಯುವ ಲೋಕಸಭಾ ಚುನಾವಣೆ ಶಾಂತಿಯುತ ಮತ್ತು ನ್ಯಾಯ ಸಮ್ಮತವಾಗಿ ನಡೆಯಲು ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ ತಿಳಿಸಿದ್ದಾರೆ.

Advertisement

ಲೋಕಸಭಾ ಚುನಾವಣಾ ಪ್ರಕ್ರಿಯೆ ಪ್ರಾರಂಭವಾದಾಗಿನಿಂದಲೂ ಜಿಲ್ಲೆಯಲ್ಲಿ ಶಾಂತಿಯುತವಾದ ವಾತಾವರಣ ಇದೆ. ಅದಕ್ಕಾಗಿ ಎಲ್ಲಾ ಸಾರ್ವಜನಿಕರು, ರಾಜಕೀಯ ಮುಖಂಡರು ಒಳಗೊಂಡಂತೆ ಸರ್ವರೂ ಕಾರಣ. ಚುನಾವಣಾ ದಿನದಂದು ಶಾಂತಿಯುತ ವಾತಾವರಣಕ್ಕೆ ಸರ್ವರೂ ಸಹಕರಿಸಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8,24,331 ಪುರುಷ, 8,10,400 ಮಹಿಳೆಯರು, 129 ಇತರೆ ಮತದಾರರು ಒಳಗೊಂಡಂತೆ 16,34,860 ಮತದಾರರು ಇದ್ದಾರೆ. 17,577 ವಿಶೇಷ ಚೇತನ ಮತದಾರರು, 9,196 ಗರ್ಭಿಣಿಯರ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನ ಸಭಾ ಕ್ಷೇತ್ರದಲ್ಲಿ 1,949 ಮತಗಟ್ಟೆಗಳಿವೆ. 516 ಕ್ರಿಟಿಕಲ್, 80 ವಲ್ನರೆಬಲ್ ಮತಗಟ್ಟೆಗಳನ್ನು ಗುರುತಿಸಲಾಗಿದೆ. 9,519 ಮತದಾನ ಸಿಬ್ಬಂದಿ, 455 ಮೈಕ್ರೋ ಅಬ್ಸವರ್‌ಗಳ ನೇಮಕ ಮಾಡಲಾಗಿದೆ. ಸೋಮವಾರ ಆಯಾಯ ತಾಲೂಕು ಕೇಂದ್ರಗಳ ಮೂಲಕ ನಿಯೋಜಿತ ಮತಗಟ್ಟೆಗಳಿಗೆ ಸಿಬ್ಬಂದಿ ತೆರಳುವರು ಎಂದು ತಿಳಿಸಿದರು.

ಮಹಿಳಾ ಮತದಾರರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಪ್ರತಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ 2 ಸಖೀ ಮತಗಟ್ಟೆಗಳನ್ನು ಪ್ರಾರಂಭಿಸಲಾಗುವುದು. ಸಖೀ ಮತಗಟ್ಟೆಯಲ್ಲಿ ಮಹಿಳಾ ಅಧಿಕಾರಿ, ಸಿಬ್ಬಂದಿಯೇ ಕಾರ್ಯ ನಿರ್ವಹಿಸುವರು. ಒಟ್ಟಾರೆಯಾಗಿ 16 ಸಖೀ ಮತಗಟ್ಟೆಗಳಿವೆ ಎಂದು ತಿಳಿಸಿದರು. ದಾವಣಗೆರೆ ಒಳಗೊಂಡಂತೆ ಆಯಾಯ ಪ್ರದೇಶದ ಸಂಪ್ರದಾಯದ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ 2 ರಂತೆ 16 ಸಾಂಪ್ರದಾಯಿಕ ಮತಗಟ್ಟೆ ಇರಲಿವೆ.

Advertisement

ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಪಾಲನೆಗೆ ಸೆಕ್ಟರ್‌ ಆಫೀಸರ್‌, ಫ್ಲೈಯಿಂಗ್‌ ಸ್ಕ್ವಾಡ್‌, ಎಸ್‌ಎಸ್‌ಟಿ, ಸಹಾಯಕ ಲೆಕ್ಕಾಧಿಕಾರಿ, ವಿವಿಟಿ, ವಿಎಸ್‌ಟಿ. ಎಂಸಿಎಂಸಿ, ಮೀಡಿಯಾ ಮಾನಿಟರಿಂಗ್‌ ಹೀಗೆ ವಿವಿಧ ತಂಡಗಳ ರಚನೆ ಮಾಡಲಾಗಿದೆ ಎಂದು ತಿಳಿಸಿದರು.

ಈವರೆಗೆ 3.20 ಕೋಟಿ ಮೊತ್ತದ ಮದ್ಯ, 34.69 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ದಾಖಲೆ ಸಲ್ಲಿಸಿದವರಿಗೆ 11.79 ಲಕ್ಷ ಹಿಂತಿರುಗಿಸಲಾಗಿದೆ. 4.02 ಲಕ್ಷ ಮೌಲ್ಯದ ಬೆಳ್ಳಿ, ಬಂಗಾರ ವಶಕ್ಕೆ ತೆಗೆದುಕೊಂಡು, ದಾಖಲೆ ಸಲ್ಲಿಸಿದದವರಿಗೆ ವಾಪಸ್‌ ನೀಡಲಾಗಿದೆ ಎಂದು ತಿಳಿಸಿದರು.

ಕ್ರಿಮಿನಲ್ ಹಿನ್ನೆಲೆ ಹೊಂದಿರುವಂತಹ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲೇ ಸ್ವಯಂ ಘೋಷಣೆ ಮಾಡಿಕೊಂಡು ಮಾಧ್ಯಮಗಳಲ್ಲಿ ಜಾಹೀರಾತು ನೀಡಬೇಕು. ಬಿಎಸ್ಪಿ ಅಭ್ಯರ್ಥಿ ಜಾಹೀರಾತು ನೀಡಿದ್ದಾರೆ ಎಂದು ತಿಳಿಸಿದರು.

ಮಂಗಳವಾರ ಎಲ್ಲಾ ಮತದಾರರು ತಪ್ಪದೇ ಮತದಾನ ಮಾಡುವ ಮೂಲಕ ಪ್ರಜಾತಂತ್ರದ ತತ್ವ ಎತ್ತಿ ಹಿಡಿಯಬೇಕು. ನ್ಯಾಯಸಮ್ಮತ ಮತ್ತು ಶಾಂತಿಯುತ ಮತದಾನಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಎಸ್‌ಪಿ ಇದ್ದರು.

ಸೂಕ್ತ ಬಂದೋಬಸ್ತ್
ದಾವಣಗೆರೆ:
ಮಂಗಳವಾರ(ಏ.23) ರಂದು ಶಾಂತಿಯುತ ಚುನಾವಣೆಗೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಆರ್‌. ಚೇತನ್‌ ತಿಳಿಸಿದ್ದಾರೆ. ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಪ್ರತಿ ಮತಗಟ್ಟೆಯಲ್ಲಿ ಅಗತ್ಯ ಸಿವಿಲ್, ಕೆಎಸ್‌ಆರ್‌ಪಿ, ಅರೆ ಸೇನಾ ಪಡೆ, ಗೃಹರಕ್ಷಕ ದಳ ಸಿಬ್ಬಂದಿ ಒಳಗೊಂಡಂತೆ ಅಗತ್ಯ ಭದ್ರತಾ ವ್ಯವಸ್ಥೆ ಮಾಡಲಾಗುವುದು. ಒಟ್ಟಾರೆ 3, 500 ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಲೋಕಸಭಾ ಚುನಾವಣೆ ಶಾಂತಿಯುತವಾಗಿ ನಡೆಯುವಂತಾಗಬೇಕು ಎಂದು ಮುನ್ನೆಚ್ಚರಿಕಾ ಕ್ರಮವಾಗಿ 1,700 ರೌಡಿಶೀಟರ್‌ಗಳ ಪೆರೇಡ್‌ ನಡೆಸಿ, ಎಚ್ಚರಿಕೆ ನೀಡಲಾಗಿದೆ. 107 ಪ್ರಕರಣ ದಾಖಲಾಗಿದೆ. ಬಸವನಗರ ಮತ್ತು ಹರಿಹರ ಠಾಣೆಯಲ್ಲಿ ತಲಾ 1 ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮತದಾರರು ನಿರ್ಭೀತಿಯಿಂದ ಮತದಾನ ಮಾಡಲು ಪ್ರೇರಣೆ ನೀಡಲು ಕೆಲವು ಕಡೆ ಮಾರ್ಚ್‌ಪಾಸ್ಟ್‌ ಮಾಡಲಾಗಿದೆ. ಒಟ್ಟಾರೆಯಾಗಿ ಶಾಂತಿಯುತ, ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next