Advertisement
ರಾಜ್ಯದ ಅತಿ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿ ಒಂದಾಗಿರುವ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಿ ಶೇ. 75.89 ಮತದಾನ ಆಗಿದ್ದರೆ, ಈ ಬಾರಿ ಶೇ. 75.78 ಮತದಾನ ಆಗಿದೆ.
Related Articles
Advertisement
ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಈಗ ಭಾರತೀಯ ಜನತಾ ಪಕ್ಷದ ಜಿ.ಕರುಣಾಕರ ರೆಡ್ಡಿ ಶಾಸಕರು. 2018ರಲ್ಲಿ ನಡೆದ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ನ ಎಂ.ಪಿ.ರವೀಂದ್ರರನ್ನು 9,647 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. ಆ ಚುನಾವಣೆಯಲ್ಲಿ ಜಿ.ಕರುಣಾಕರ ರೆಡ್ಡಿ 67,603 ಮತ ಪಡೆದಿದ್ದರೆ, ಎಂ.ಪಿ.ರವೀಂದ್ರ 57,956 ಮತ ಗಳಿಸಿದ್ದರು. ಬಿಜೆಪಿ ಟಿಕೆಟ್ ಸಿಗದೇ ಜೆಡಿಎಸ್ ಸೇರಿ ಆ ಪಕ್ಷದಿಂದ ಸ್ಪರ್ಧಿಸಿದ್ದ ಅರಸೀಕರೆ ಕೊಟ್ರೇಶ್‌ಗೆ 37,685 ಮತ ದೊರೆತಿದ್ದವು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್‌ನ ಮೈತ್ರಿ ಅಭ್ಯರ್ಥಿ ಕಣಕ್ಕಿಳಿದಿದ್ದರಿಂದ ಹರಪನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ ಕಷ್ಟಸಾಧ್ಯ ಎಂಬ ಮಾತು ಆ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಈ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್.ಮಲ್ಲಿಕಾರ್ಜುನ್‌ಗಿಂತ 19 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ಸಾಧಿಸಿದ್ದರು.
ಈಗ ಸದ್ಯ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಏ.23ರಂದು ನಡೆದ ಲೋಕಸಭಾ ಮತದಾನ ಕುರಿತು ಜಾತಿವಾರು ಲೆಕ್ಕಾಚಾರ ನಡೆಯುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಬಿ.ಮಂಜಪ್ಪರ ಪರ ದಿವಂಗತ ಮಾಜಿ ಶಾಸಕ ಎಂ.ಪಿ.ರವೀಂದ್ರರ ಸಹೋದರಿ ಎಂ.ಪಿ.ಲತಾ ಹಾಗೂ ಜೆಡಿಎಸ್‌ನ ಅರಸೀಕೆರೆ ಎನ್.ಕೊಟ್ರೇಶ್ ಪ್ರಚಾರ ನಡೆಸಿದ್ದಾರೆ.
ಇನ್ನು ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಪರ ಶಾಸಕ ಜಿ.ಕರುಣಾಕರರೆಡ್ಡಿ ಕ್ಷೇತ್ರದಲ್ಲಿ ಸಂಚರಿಸಿ ಬಡ ಜನರಿಗೆ ಅಕ್ರಮ ಸಕ್ರಮದಡಿಯಲ್ಲಿ ಪಟ್ಟಾ ವಿತರಣೆ, ಅಭಿವೃದ್ಧಿ ಕಾರ್ಯಗಳ ಆಧರಿಸಿ ಮತಯಾಚಿಸಿದ್ದಾರೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಅಲೆ ಮತ್ತು ಯುವ ಮತದಾರರ ಒಲವು ಕಂಡು ಬರುತ್ತಿರುವುದರಿಂದ ಈ ಬಾರಿಯೂ ಹರಪನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯೇ ಮುನ್ನಡೆ ಸಾಧಿಸಲಿದ್ದಾರೆ ಎಂಬುದು ಕಮಲ ಪಾಳೆಯದ ಲೆಕ್ಕಾಚಾರ.
ಆದರೆ, ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಿಟ್ಟರೆ ಸಿದ್ದೇಶ್ವರ್ ಪರ ಸ್ಟಾರ್ ಪ್ರಚಾರಕರ್ಯಾರು ಆಗಮಿಸಲಿಲ್ಲ. ಇನ್ನೊಂದೆಡೆ ಶಾಸಕ ಜಿ.ಕರುಣಾಕರರೆಡ್ಡಿ ಜೊತೆ ಮುನಿಸಿಕೊಂಡಿರುವ ಕ್ಷೇತ್ರದ ಬಿಜೆಪಿ ಪ್ರಭಾವಿ ಮುಖಂಡರು ಪ್ರತ್ಯೇಕವಾಗಿ ತಮ್ಮ ಪಕ್ಷದ ಅಭ್ಯರ್ಥಿ ಪರ ಮತಬೇಟೆ ನಡೆಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಸಭೆ ನಡೆಸಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕಣಕ್ಕಿಳಿದಿದ್ದರಿಂದ ಕಾಂಗ್ರೆಸ್ ಸಂಪ್ರದಾಯಿಕ ಮತಗಳ ಜೊತೆಗೆ ಜೆಡಿಎಸ್ ಮತಗಳು ಸೇರುವುದರಿಂದ ಎಚ್.ಬಿ. ಮಂಜಪ್ಪರಿಗೆ ಹೆಚ್ಚು ಲೀಡ್ ದೊರೆಯಲಿದೆ ಎಂಬುವುದು ಮೈತ್ರಿ ಪಾಳೆಯದ ಮುಖಂಡರ ಅಭಿಪ್ರಾಯ. ಯಾವ ಅಭ್ಯರ್ಥಿಗೆ ಲೀಡ್ ಬರಬಹುದು ಎನ್ನುವ ಕುರಿತು ಚರ್ಚೆಗಳು ನಡೆಯುತ್ತಿವೆಯೇ ಹೊರತು ಬೆಟ್ಟಿಂಗ್ ಮಾತು ಕೇಳಿ ಬರುತ್ತಿಲ್ಲ.
ಎನ್.ಆರ್. ನಟರಾಜ್