Advertisement

ಜೀವನಾನುಭವ ಬರಹಕ್ಕಿಳಿಸಿದ ಸಾಹಿತಿ

10:14 AM Jul 08, 2019 | Naveen |

ದಾವಣಗೆರೆ: ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕಾಣಿಕೆ ನೀಡಿರುವ ಹಿರಿಯ ಲೇಖಕಿ, ಕಾವ್ಯ ಕನ್ನಿಕೆ ಆಗಿರುವ ಟಿ. ಗಿರಿಜಾ ದೇವನಗರಿಯ ದೇವಕನ್ನಿಕೆಯಾಗಿ ಬೆಳಗಬೇಕು ಎಂದು ಸಾಹಿತಿ ಗಂಗಾಧರ್‌ ಬಿ.ಎಲ್. ನಿಟ್ಟೂರ್‌ ಆಶಿಸಿದ್ದಾರೆ.

Advertisement

ಭಾನುವಾರ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ವನಿತಾ ಸಾಹಿತ್ಯ ವೇದಿಕೆ, ವನಿತಾ ಸಮಾಜ ಸಹಯೋಗದಲ್ಲಿ ಕುವೆಂಪು ಕನ್ನಡ ಭವನದಲ್ಲಿ ಏರ್ಪಡಿಸಿದ್ದ ದತ್ತಿ ಕಾರ್ಯಕ್ರಮದ ಉದ್ಘಾಟನೆ ಹಾಗೂ ಹಿರಿಯ ಸಾಹಿತಿ ಟಿ. ಗಿರಿಜಾರವರ ಸಂಸ್ಮರಣೆಯಲ್ಲಿ ಹಿರಿಯ ಸಾಹಿತಿ ಟಿ. ಗಿರಿಜಾರವರ ಕೃತಿ ಅವಲೋಕನ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ತಮ್ಮ ಅಂಗವೈಕಲ್ಯದ ನಡುವೆಯೂ ಹಿರಿಯ ಸಾಹಿತಿ ಟಿ. ಗಿರಿಜಾರವರು 40ಕ್ಕೂ ಹೆಚ್ಚು ಕೃತಿಗಳನ್ನು ಕಾಣಿಕೆ ನೀಡುವ ಮೂಲಕ ಅವರು ಕಾವ್ಯ ಕನ್ನಿಕೆ ಎಂದೇ ಗುರುತಿಸಲ್ಪಡುತ್ತಿದ್ದಾರೆ ಎಂದರು.

ಟಿ.ಗಿರಿಜಾರವರ ಇಡೀ ಬದುಕು ಮತ್ತು ಸಾಹಿತ್ಯವನ್ನ ಅವಲೋಕಿಸಿದಾಗ ಅವರು ಸದಾ ಸಾಮಾಜಿಕ ಸ್ವಾಸ್ಥ್ಯದ ಬಗ್ಗೆ ಚಿಂತನೆ ನಡೆಸುತ್ತಿದ್ದ ದಾದಿ ಮತ್ತು ದೀದಿ ಆಗಿದ್ದಾರೆ. ಮೂಲತಃ ಶುಶ್ರೂಷಕಿಯಾಗಿದ್ದ ಗಿರಿಜಾರವರು ದಾದಿಯಾಗಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಅನೇಕ ಲೇಖಕಿಯರ ಅಕ್ಕನಾಗಿ… ದೀದಿಯೂ ಆಗಿದ್ದಾರೆ. ಅವರು ಜೀವನ, ಅನುಭವವನ್ನು ಬರಹಕ್ಕೆ ತಂದ ಕಾರಣಕ್ಕಾಗಿಯೇ ಈಗಲೂ ಅವರನ್ನು ಸ್ಮರಿಸಲಾಗುತ್ತಿದೆ ಎಂದು ತಿಳಿಸಿದರು.

ಯುವ ಲೇಖಕರು, ಸಾಹಿತಿಯ ಬದುಕಿನ ದಾರಿ ಸಾಹಿತ್ಯ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಟಿ.ಗಿರಿಜಾ ತಮ್ಮ ಬದುಕಿನ ಅನುಭವವನ್ನು ಬರಹಕ್ಕೆ ಇಳಿಸಿದಂತಹ ಯಥಾರ್ತವಾದಿ ಎಂಬುದು ಅವರ 13 ಸಾಮಾಜಿಕ ಕಾದಂಬರಿ ಅವಲೋಕಿಸಿದಾಗ ತಿಳಿದು ಬರುತ್ತದೆ. ಅವರು ಸದಾ ಬದುಕಿಗಾಗಿ ತುಡಿತ ಹೊಂದಿದವರು ಮತ್ತು ಮಿಡಿದವರು ಎಂದು ಸ್ಮರಿಸಿದರು.

ಟಿ. ಗಿರಿಜಾರವರು ತಮ್ಮ ಭಿಕ್ಷುಕಿ… ಕಾದಂಬರಿಯಲ್ಲಿ ಭಿಕ್ಷುಕಿ ಪಾತ್ರವನ್ನು ಬಹಳ ಚೆನ್ನಾಗಿ ರೂಪಿಸಿದ್ದಾರೆ. ತಮ್ಮ ಮನೆಗೆ ದಿನ ನಿತ್ಯ ಬರುತ್ತಿದಂತಹ ಭಿಕ್ಷುಕಿಯ ಜೀವನ, ಸಂಕಷ್ಟ ತಿಳಿದುಕೊಂಡು ಕಾದಂಬರಿಯಲ್ಲಿ ತಾವೇ ಪಾತ್ರವಾಗಿ, ಕಥೆಯಾಗಿದ್ದಾರೆ. ಅಂತಹ ತನ್ಮಯತೆಯಿಂದ ಕೂಡಿದ ಬರಹ ಸದಾ ಸ್ಮರಣೆಯಲ್ಲಿ ಉಳಿಯುತ್ತದೆ ಎಂದು ತಿಳಿಸಿದರು.

Advertisement

ಟಿ.ಗಿರಿಜಾರವರ ಬದುಕು ತೆರೆದ ಪುಸ್ತಕ. ನೇರ, ನಿಷ್ಠುರವಾದಿಯಾಗಿದ್ದ ಅವರು ಐತಿಹಾಸಿಕ ಕಾದಂಬರಿಯ ರಚನೆಗಾಗಿ ತಮ್ಮ ಅಂಗವೈಕಲ್ಯವನ್ನೂ ಲೆಕ್ಕಿಸದೆ ಸ್ಥಳಕ್ಕೆ ತೆರಳಿ ಪ್ರತಿಯೊಂದು ಅಂಶವನ್ನು ಕಲೆ ಹಾಕಿದವರು. ಪ್ರತಿಯೊಂದನ್ನೂ ಸ್ಪಷ್ಟವಾಗಿ ಬರೆದಂತಹ ಸತ್ಯಶೋಧಕಿ, ಬೆಂಕಿಯ ನಡುವೆಯೂ ಸುವಾಸನೆ ಬೀರಿದಂತಹ ಬೆಂಕಿಯಲ್ಲಿನ ಹೂವಾದವರು ಎಂದು ಬಣ್ಣಿಸಿದರು.

ಟಿ. ಗಿರಿಜಾರವರ ಸಾಹಿತ್ಯಕ ಕೃಷಿ ಮುಂದಿನ ಪೀಳಿಗೆಯವರಿಗೂ ತಿಳಿಸುವಂತಹ ನಿಟ್ಟಿನಲ್ಲಿ ವನಿತಾ ಸಮಾಜ, ಸಾಹಿತ್ಯ ವೇದಿಕೆಯವರು ಗ್ರಂಥಾಲಯ ಪ್ರಾರಂಭಿಸಿ, ಗಿರಿಜಾರವರ ಕೃತಿಗಳ ಪರಿಚಯ ಮಾಡುವಂತಾಗಬೇಕು. ಉದಯೋನ್ಮುಖ ಲೇಖಕರು, ಕವಿ, ಸಾಹಿತಿಗಳ ಕೃತಿಗಳನ್ನೂ ಗ್ರಂಥಾಲಯದಲ್ಲಿ ದೊರೆಯುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಶೈಲಜಾ ಬಸವರಾಜ್‌ ಮಾತನಾಡಿ, ಜಿಲ್ಲೆಯ ಹಿರಿಯ ಲೇಖಕಿ ಟಿ. ಗಿರಿಜಾರವರು ತಮ್ಮ ಅಂಗವೈಕಲ್ಯತೆ, ಸರ್ಕಾರಿ ಉದ್ಯೋಗ ನಿರ್ವಹಣೆಯ ನಡುವೆಯೂ ಸಾಹಿತ್ಯ ರಚನೆ ಮಾಡುವ ಮೂಲಕ ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ. ಯಾರು ತಮ್ಮನ್ನು ಸಾರ್ವಜನಿಕ ಕೆಲಸಕ್ಕೆ ಸಮರ್ಪಿಸಿಕೊಂಡಿರುತ್ತಾರೋ ಅಂತಹವರಿಗೆ ಸಾವು ಎಂಬುದೇ ಇಲ್ಲ. ಸದಾ ಸ್ಮರಣೀಯರು, ಚಿರಸ್ಥಾಯಿ ಆಗಿರುತ್ತಾರೆ ಎಂಬುದಕ್ಕೆ ಟಿ. ಗಿರಿಜಾ ಜ್ವಲಂತ ನಿದರ್ಶನ ಎಂದು ತಿಳಿಸಿದರು.

ಅವಿಭಕ್ತ ಕುಟುಂಬ ವ್ಯವಸ್ಥೆಯ ಮುಂದುವರೆದ ಭಾಗವೇ ರಾಜಕೀಯ. ಮನೆಯಂತೆ ಇಲ್ಲೂ ಜವಾಬ್ದಾರಿ, ಕೆಲಸ ಇರುತ್ತವೆ. ಜನಪ್ರತಿನಿಧಿಗಳಾದ ನಾವು ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಕೆಲಸವನ್ನು ಜವಾಬ್ದಾರಿಯಿಂದ ಮಾಡುತ್ತೇವೆ.ಮಹಿಳೆಯರು ಟಿವಿ ವ್ಯಾಮೋಹದಿಂದ ಹೊರ ಬಂದು ಸಮಾಜದಲ್ಲಿ ತಮ್ಮದೇ ಆದಂತಹ ಅಸ್ತಿತ್ವ ರೂಪಿಸಿಕೊಳ್ಳಬೇಕು ಎಂದರು.

ತಾಲೂಕು ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪ್ರಾಧ್ಯಾಪಕಿ ಡಾ| ಯಶೋಧಮ್ಮ ಬಿ. ರಾಜಶೇಖರಪ್ಪ, ಟಿ.ಎಸ್‌. ಶೈಲಜಾ, ವನಿತಾ ವೇದಿಕೆ ಅಧ್ಯಕ್ಷೆ ಎಸ್‌.ಎಂ. ಮಲ್ಲಮ್ಮ, ಕಾರ್ಯದರ್ಶಿ ಕೆ.ಎಚ್. ಸತ್ಯಭಾಮ ಇತರರು ಇದ್ದರು. ರುದ್ರಾಕ್ಷಿಬಾಯಿ ಮತ್ತು ಸಂಗಡಿಗರು ನಾಡಗೀತೆ ಹಾಡಿದರು. ಸಂಧ್ಯಾ ಸುರೇಶ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next