Advertisement

ಬಸವಾದಿ ಶರಣರ ಬಯಕೆಯಂತೆ ಕಾಯಕ ಜೀವಿಗಳಾಗಿ

04:31 PM May 23, 2019 | Naveen |

ದಾವಣಗೆರೆ: ಕಾಯಕವೇ ಕೈಲಾಸ… ಎಂಬ ಬಸವಾದಿ ಶರಣರ ಕಾಯಕಪ್ರಜ್ಞೆಯನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಚಾರ್ಯೆ ಪ್ರೊ| ಟಿ. ನೀಲಾಂಬಿಕೆ ಆಶಿಸಿದ್ದಾರೆ.

Advertisement

ಬುಧವಾರ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಏರ್ಪಡಿಸಿದ್ದ ವಿಶ್ವ ಕಾಯಕ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದ ಅವರು, ಇಂದಿನ ಆಧುನಿಕ ಯುಗದಲ್ಲಿ ಕಾಯಕ ಪ್ರಜ್ಞೆ ಜಾಗ್ರತಗೊಳಿಸಬೇಕಾಗಿದೆ ಎಂದರು.

ಪ್ರತಿಯೊಬ್ಬರು ಜೀವನಕ್ಕಾಗಿ ಕೆಲಸ ಮಾಡಬೇಕು. ಆ ಕೆಲಸ ಪರಿಶುದ್ಧತೆಯಿಂದ ಕೂಡಿರಬೇಕು. ಬದುಕಲಿಕ್ಕೆ ಬದುಕ ಮಾಡಬೇಕು ಎನ್ನುವ ಮೂಲಕ ಬಸವಾದಿ ಶರಣರು ಕಾಯಕದ ಮಹತ್ವ ಸಾರಿದರು. ಬಸವಾದಿ ಶರಣರಲ್ಲಿ ಅನೇಕ ಶರಣರು ಸತ್ಯ, ಶುದ್ಧ ಕಾಯಕಯೋಗಿಗಳಾಗಿದ್ದರು. ಆ ಮೂಲಕ ಶರಣರು ಕಾಯಕಕ್ಕೆ ಮಹತ್ವ ತಂದರು ಎಂದು ತಿಳಿಸಿದರು. ಶರಣ ಭಾಷೆಯಲ್ಲಿ ಕಾಯಕ- ಬದುಕಿಗೆ ವಿಶಾಲ ಅರ್ಥ ಇದೆ. ಪ್ರತಿಯೊಬ್ಬರಿಗೂ ಬದುಕಲು ಬದುಕು ಮಾಡಬೇಕು. ಇದು ಯಾಂತ್ರಿಕತೆಯಿಂದ ಕೂಡಿರದೆ ಆತ್ಮತೃಪ್ತಿಯಿಂದ ಕೂಡಿರಬೇಕು ಎಂಬುದನ್ನ ಶರಣರು ಬಯಸುವರು. ನಾವೆಲ್ಲರೂ ಬಸವಾದಿ ಶರಣರ ಬಯಕೆಯಂತೆ ಕಾಯಕ ಜೀವಿಗಳಾಗಬೇಕು ಎಂದು ತಿಳಿಸಿದರು.

ಬಸವಾದಿ ಶರಣರನ್ನು ಅವರ ಕಾಯಕದಿಂದ ಗುರುತಿಸುವ ಪರಂಪರೆ ಇತ್ತು. ಆದರೆ, ಪ್ರಸ್ತುತ ಇದು ಜಾತಿ ಹಿನ್ನೆಲೆ ಪಡೆದುಕೊಳ್ಳುತ್ತಿದೆ ಎಂದು ವಿಷಾದಿಸಿದರು.

ಪ್ರತಿಯೊಬ್ಬರಲ್ಲಿ ಧನವಂತರು, ಆಸ್ತಿವಂತರು ಆಗಬೇಕು ಎಂಬ ಆಸೆ ಸಾಮಾನ್ಯ. ಶ್ರೀಮಂತರಾಗಲಿಕ್ಕೆ ಸಾಕಷ್ಟು ಮಾರ್ಗಗಳಿವೆ. ಸತ್ಯ, ಪರಿಶುದ್ಧ ಕಾಯಕದಿಂದಾಗಿಯೇ ಶ್ರೀಮಂತರಾಗಬೇಕೇ ಹೊರತು ಇನ್ನೊಬ್ಬರದನ್ನು ಕಸಿದು ಆಗುವುದಲ್ಲ. ನಾವು ಮಾಡುವಂತಹ ಯಾವುದೇ ಉದ್ಯೋಗದಲ್ಲಿ ಪಾವಿತ್ರ್ಯತೆ ಹೊಂದಿರಬೇಕು. ನಿರ್ಲಕ್ಷ್ಯ ಮನೋಭಾವನೆಗೆ ಅವಕಾಶವೇ ನೀಡಬಾರದು ಎಂದು ಸಲಹೆ ನೀಡಿದರು.

Advertisement

ಬಸವ ಬಳಗದ ಮುಖಂಡ ವಿ. ಸಿದ್ದರಾಮಣ್ಣ ಮಾತನಾಡಿ, ಶರಣ ಸಾಹಿತ್ಯ ಎಂದರೆ ಮೂಢನಂಬಿಕೆ, ಕಂದಾಚಾರ, ಸಾಮಾಜಿಕ ಅನಿಷ್ಟ… ಎಂಬ ಕತ್ತಲೆಯನ್ನು ಕಳೆಯುವಂತಹ ಮಹಾನ್‌ ಬೆಳಕು. ಜಾತಿ, ಮತ, ವರ್ಗ ರಹಿತವಾದುದು ಎಂದು ತಿಳಿಸಿದರು.

ಇಷ್ಟಲಿಂಗ ಪೂಜೆಗೆ ಲಿಂಗ, ಜಾತಿಯ ಪ್ರಶ್ನೆ ಬರುವುದಿಲ್ಲ. ಇಷ್ಟಲಿಂಗ ಪೂಜೆ ಅಜ್ಞಾನಿಗಳಿಗೆ ಸುಜ್ಞಾನ ಹರಿಸುವಂಥದ್ದು. ಇಷ್ಟಲಿಂಗ ಪೂಜೆ ಮೂಲಕ ಬಸವಣ್ಣ ಪ್ರತಿಯೊಬ್ಬರಲ್ಲೂ ದೇವರಾಗುವ ಶಕ್ತಿ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಕಾಯಕ ಶರಣಶ್ರೀ… ಪ್ರಶಸ್ತಿ ಪುರಸ್ಕೃತೆ ಯಶೋಧಮ್ಮ ರಾಮೇಶ್ವರ ಮಾತನಾಡಿ, ರೈತರು ಕೆಲಸಗಾರರ ಮೇಲೆ ಅವಲಂಬನೆಯಾಗದೆ ಶ್ರಮವಹಿಸಿ ಕೆಲಸ ಮಾಡಿದಾಗ ಉಳಿತಾಯ ಮಾಡಬಹುದು. ಕೃಷಿ ಇಲಾಖೆಯ ಬೆಳೆ ವರ್ಗೀಕರಣ ಪದ್ಧತಿ ಸರಿಯಲ್ಲ. ಗುಣಮಟ್ಟದ ಬೆಳೆ ಮಾರಾಟವಾಗುತ್ತದೆ. ಆದರೆ, ಸ್ವಲ್ಪ ಕಡಿಮೆ ಗುಣಮಟ್ಟದ ಬೆಳೆ ಉಳಿದುಕೊಳ್ಳುತ್ತದೆ. ಇದನ್ನು ಯಾರು ಖರೀದಿಸುತ್ತಾರೆ ಎಂದು ಪ್ರಶ್ನಿಸಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಿಕ್ಕೋಳ್‌ ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಎಚ್.ಎನ್‌.ನಿರಂಜನ್‌, ನಿರ್ಮಲ ಸೋಮಶೇಖರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next