Advertisement

ಮಕ್ಕಳು ನಮ್ಮ ನಡುವೆ ಓಡಾಡುವ ಚೇತನಗಳು: ನ್ಯಾ|ಕುಲಕರ್ಣಿ

10:07 AM Jun 17, 2019 | Team Udayavani |

ದಾವಣಗೆರೆ: ಮಕ್ಕಳು ಪರಿಪೂರ್ಣವಾಗಿ ಬಾಲ್ಯ ಅನುಭವಿಸುವ ವಾತಾವರಣವನ್ನು ಪೋಷಕರು, ಶಿಕ್ಷಕರು ನಿರ್ಮಿಸಿಕೊಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ‌ ಅಂಬಾದಾಸ್‌ ಕುಲಕರ್ಣಿ ಜಿ ಹೇಳಿದರು.

Advertisement

ಶ್ರೀರಾಮ ಬಡಾವಣೆಯ ಬಾಲಕಿಯರ ಬಾಲ ಮಂದಿರದಲ್ಲಿ ಭಾನುವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಬಾಲಕಿಯರ ಬಾಲಭವನ ಸಂಯುಕ್ತಾಶ್ರಯದಲ್ಲಿ ಮಕ್ಕಳಿಗೆ ಆಯೋಜಿಸಲಾಗಿದ್ದ ಒಂದು ದಿನದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ತಮ್ಮ ಬಾಲ್ಯವನ್ನು ಸಂಪೂರ್ಣವಾಗಿ ಅನುಭವಿಸಬೇಕು. ಯಾವುದೇ ಅಡೆತಡೆ ಇಲ್ಲದೇ ಆಟಪಾಠ, ಶಿಸ್ತಿನ ಶಿಕ್ಷಣದಲ್ಲಿ ತೊಡಗಿಕೊಂಡಾಗ ಮಾತ್ರ ಸಮುದಾಯದ ಆಶಯಗಳು ಅರ್ಥಪೂರ್ಣವಾಗಲು ಸಾಧ್ಯ. ಮಕ್ಕಳ ಬದುಕು, ರಕ್ಷಣೆ, ಅಭಿವೃದ್ಧಿಯ ಹಕ್ಕಿಗಾಗಿ ಹಲವಾರು ಕಾನೂನುಗಳಿದ್ದು ಅವುಗಳ ಅರ್ಥಪೂರ್ಣ ಜಾರಿಗೆ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳು ಶ್ರಮಿಸುವ ಜೊತೆಗೆ ರಚನಾತ್ಮಕ ಚಟುವಟಿಕೆಯಲ್ಲಿ ತೊಡಗಬೇಕೆಂದರು.

ಮಕ್ಕಳು ನಮ್ಮ ನಡುವೆ ಇರುವ ಓಡಾಡುವ ಚೇತನಗಳು. ನಮ್ಮ ಸಮುದಾಯದ ಇಂದಿನ ಪ್ರಜೆಗಳು.ಅಂತಹ ಮಕ್ಕಳಿಗೆ ಬಾಲ್ಯದಲ್ಲಿಯೇ ಸುಖ, ಶಾಂತಿ, ಸಂತೋಷದ ಅರ್ಥಪೂರ್ಣ ವಾತಾವರಣ ನಿರ್ಮಿಸಿಕೊಟ್ಟರೆ ಕಲಿಕೆಗೆ ಸಹಾಯವಾಗುತ್ತದೆ. ಆಗ ಇಡೀ ಸಮುದಾಯಕ್ಕೆ ಉತ್ತಮ ಭವಿಷ್ಯ ಇರುತ್ತದೆ ಎಂದರು.

ಪೋಷಕರೇ ಮಕ್ಕಳ ಹಕ್ಕುಗಳ ರಕ್ಷಕರಾಗಿರುವುದರಿಂದ ಅವರಿಗೆ ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸುವುದು ಸೂಕ್ತ. ಪ್ರತಿ ಮಗುವನ್ನು ಅಕ್ಕರೆಯಿಂದ ಬೆಳೆಸಿ, ಎಳೆ ವಯಸ್ಸಿನಲ್ಲೇ ದುಡಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿ ಪೋಷಕರ ಮೇಲಿದೆ ಎಂದು ತಿಳಿಸಿದರು.

Advertisement

ಬಾಲ ಕಾರ್ಮಿಕ ಪದ್ಧತಿ, ಬಾಲ್ಯವಿವಾಹ ಪದ್ಧತಿಗೆ ಒಳಗಾಗಿರುವ ಮಕ್ಕಳು, ಶಿಕ್ಷಣದಿಂದ ದೂರ ಉಳಿದಿರುವ ಮಕ್ಕಳು ಇಂದಿಗೂ ಸಮಾಜದಲ್ಲಿ ಕಂಡು ಬರುತ್ತಿರುವುದು ನಿಜಕ್ಕೂ ಖಂಡನೀಯ. ಮಕ್ಕಳಿಗೆ ಶಿಕ್ಷಣದ ಹಕ್ಕು ಸಂವಿಧಾನ ಬದ್ಧವಾಗಿದೆ. ಈ ಹಕ್ಕನ್ನು ಅರ್ಥಪೂರ್ಣವಾಗಿ ಜಾರಿಗೊಳಿಸುವ ಕೆಲಸ ಆಗಬೇಕಾಗಿದೆ ಎಂದು ಕರೆ ನೀಡಿದರು.

ಪೋಕ್ಸೋ ಕಾಯಿದೆ ಕುರಿತು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಚ್.ನಾಗಶ್ರೀ, ಬಾಲನ್ಯಾಯ ಕಾಯಿದೆ ಕುರಿತು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆಂಗಬಾಲಯ್ಯ, ಮಕ್ಕಳ ವ್ಯಕ್ತಿತ್ವ ವಿಕಸನ ಕುರಿತು ಕೌಟುಂಬಿಕ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಬಿ.ಎಲ್. ಜಿನರಾಲ್ಕರ್‌ ವಿಷಯ ಮಂಡಿಸಿದರು. 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಇ.ಚಂದ್ರಕಲಾ, ಹಿರಿಯ ಸಿವಿಲ್ ನ್ಯಾಯಾಧೀಶ‌ ಪ್ರಭು ಎನ್‌.ಬಡಿಗೇರ್‌, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್‌.ಟಿ.ಮಂಜುನಾಥ್‌, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್. ಅರುಣ್‌ಕುಮಾರ್‌, ಶಿಶು ಅಭಿವೃದ್ಧಿ ಅಧಿಕಾರಿ ಎಂ.ವೀಣಾ, ಪರಿವೀಕ್ಷಣಾಧಿಕಾರಿ ಟಿ.ಆರ್‌.ಶೋಭಾ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next