Advertisement

ಮಹಾತ್ಮರ ಚಿಂತನೆ-ಆದರ್ಶ ಅಳವಡಿಸಿಕೊಳ್ಳೋಣ

10:12 AM Jun 28, 2019 | Naveen |

ದಾವಣಗೆರೆ: ಮಹಾತ್ಮರನ್ನು ಮಹಾತ್ಮರಾಗಿರಲು ಬಿಟ್ಟು, ಅವರ ಆಲೋಚನೆ ಹಾಗೂ ಚಿಂತನೆಗಳನ್ನು ಮಾತ್ರ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳೋಣ. ಮಹಾತ್ಮರನ್ನು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತ ಗೊಳಿಸಬಾರದು ಎಂದು ಬೆಂಗಳೂರಿನ ಜಾನಪದ ಹಾಗೂ ಬುಡಕಟ್ಟು ಸಂಶೋಧಕ ಡಾ| ಹನಿಯೂರು ಚಂದ್ರೇಗೌಡ ಅಭಿಪ್ರಾಯಪಟ್ಟರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಒಕ್ಕಲಿಗರ ಸಂಘದ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರದ ಕುವೆಂಪು ಕನ್ನಡ ಭವನದಲ್ಲಿ ಆಯೋಜಿದ್ದ ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಮಹಾತ್ಮರ ಚಿಂತನೆಗಳು ಮತ್ತು ಕಾರ್ಯ ಚಟುವಟಿಕೆಗಳನ್ನು ನಾವು ತಿಳಿದುಕೊಳ್ಳುವ ಮೂಲಕ ನಮ್ಮಲ್ಲಿ ಬದಲಾವಣೆ ತಂದುಕೊಳ್ಳಬೇಕು ಎಂದರು.

ನಾಡಪ್ರಭು ಕೆಂಪೇಗೌಡರು ಸರ್ವಜಾತಿ ಸಮನ್ವಯ, ಸರ್ವಧರ್ಮ ಪಾಲಕರು. ವಿಶಾಲ ನೀರಾವರಿ ಯೋಜನೆಗಳು ಹಾಗೂ ಬೃಹತ್‌ ಬೆಂಗಳೂರು ನಿರ್ಮಾಣದಂತಹ ಕಾರ್ಯದಿಂದ ನಾಡಿನಲ್ಲಿ ಪ್ರಖ್ಯಾತಿ ಹೊಂದಿದಂತಹವರು. ಅವರ ಅಂದಿನ ಯೋಜನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು. ಕೆಂಪೇಗೌಡರು ಸುಮಾರು 480 ವರ್ಷಗಳ ಹಿಂದೆಯೇ ಕೃಷಿ ಮತ್ತು ನೀರಾವರಿಗೆ ಹೆಚ್ಚಿನ ಪ್ರ್ರಾಮುಖ್ಯತೆ ನೀಡಿದ್ದು, ಅದಕ್ಕಾಗಿ 387 ದೊಡ್ಡ ಕೆರೆಗಳು ಹಾಗೂ ಸಾವಿರಕ್ಕೂ ಅಧಿಕ ಸಣ್ಣ ಕೆರೆ ನಿರ್ಮಿಸಿದ್ದರು. ಇಂದು ಬೆಂಗಳೂರು ಶರವೇಗದ ಬೆಳವಣಿಗೆಯಿಂದಾಗಿ ಸಿದ್ದನಕಟ್ಟೆ ದೊಡ್ಡ ಕೆರೆಯು ಕೆ.ಆರ್‌ ಮಾರುಕಟ್ಟೆಯಾಗಿ, ಸಂಪಂಗಿ ಕೆರೆಯು ಕಂಠೀರವ ಸ್ಟೇಡಿಯಂ ಆಟದ ಮೈದಾನವಾಗಿ, ಧರ್ಮಾವತಿ ಕೆರೆಯು ಮೆಜೆಸ್ಟಿಕ್‌ ಬಸ್‌ ನಿಲ್ದಾಣವಾಗಿ ಮಾರ್ಪಟ್ಟಿವೆ. ನಿರಂತರ ಒತ್ತುವರಿಯಿಂದಾಗಿ ಈಗ ಕೇವಲ ಬೆರಳೆಣಿಕೆಯಷ್ಟು ಕೆರೆಗಳು ಮಾತ್ರ ಉಳಿದುಕೊಂಡಿವೆ ಎಂದು ವಿಷಾದಿಸಿದರು.

ಕೆಂಪೇಗೌಡರು ತಮ್ಮ ಕಾಲಾವಧಿಯಲ್ಲಿ ಸರ್ವಜಾತಿಗೆ ಪ್ರಾಮುಖ್ಯತೆ ನೀಡಿ, ಜಾತಿ ಮತ್ತು ಕುಲಕಸುಬುಗಳಿಗೆ ಸಂಬಂಧಿಸಿದಂತೆ ಶೆಟ್ಟಿಪೇಟೆ, ಗೌಡಪೇಟೆ, ಅಕ್ಕಿಪೇಟೆ ಮತ್ತು ಬಳೆಪೇಟೆ ಸೇರಿದಂತೆ ಸುಮಾರು 52 ಪೇಟೆಗಳನ್ನು ಕಟ್ಟಿದ್ದಾರೆ. ಕೆಂಪೇಗೌಡರ ಈ ಪೇಟೆಗಳನ್ನು ಕಂಡ ಬ್ರಿಟಿಷರು ಲಂಡನ್‌ನಲ್ಲಿ 12 ಪೇಟೆಗಳನ್ನು ಇವರ ವಿಚಾರಧಾರೆ ಆಧರಿಸಿ ಲಂಡೋನಿಯಾ ಎನ್ನುವ ಸ್ಟ್ರೀಟ್‌ಗಳನ್ನು ನಿರ್ಮಿಸಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಶೈಲಜಾ ಬಸವರಾಜ್‌ ಮಾತನಾಡಿ, ಇಂದು ಕರ್ನಾಟಕ ಎಂದ ಕೂಡಲೇ ಕೆಂಪೇಗೌಡರು 480 ವರ್ಷಗಳ ಹಿಂದೆ ನಿರ್ಮಿಸಿದ ಬೆಂಗಳೂರು ಹೆಸರನ್ನು ಹೇಳುತ್ತಾರೆ. ಕೆಂಪೇಗೌಡರು ಬೆಂಗಳೂರು ನಗರದಲ್ಲಿ ಉತ್ತಮ ಮಾರುಕಟ್ಟೆ, ವ್ಯವಸ್ಥಿತ‌ ಪೇಟೆಗಳನ್ನು ನಿರ್ಮಿಸಿ, ಅಂದಿನ ಕಾಲದಲ್ಲಿಯೇ ಎಲ್ಲರಿಗೂ ಉಪಯುಕ್ತವಾಗುವಂತಹ ನಗರ ನಿರ್ಮಿಸಿದ್ದಾರೆ ಎಂದು ಹೇಳಿದರು.

Advertisement

ಶಾಸಕ ಎಸ್‌.ಎ ರವೀಂದ್ರನಾಥ್‌ ಮಾತನಾಡಿ, ಕೆಂಪೇಗೌಡರು ಬೆಂಗಳೂರು ನಿರ್ಮಿಸಿ, ನೂರಾರು ಕೆರೆಗಳನ್ನು ಕಟ್ಟಿದ್ದಾರೆ. ಆದರೆ, ನಾವು ಒಂದು ಕೆರೆಯನ್ನೂ ಕಟ್ಟಲಾಗುವುದಿಲ್ಲ. ಅಂದಿನ ಜನರಲ್ಲಿ ತ್ಯಾಗ ಮನೊಭಾವ ಇದ್ದಿದ್ದರಿಂದ ಅವರು ಕೆರೆ ಕಟ್ಟಲು ಜಮೀನು ದಾನ ಮಾಡಿದ್ದರು. ಇಂದು ಕೆರೆಗಳನ್ನು ಒತ್ತುವರಿ ಮಾಡುತ್ತಿರುವುದು ವಿಷಾದನೀಯ ಎಂದರು.

ಜಿಪಂ ಸದಸ್ಯ ಬಸವಂತಪ್ಪ, ಕೆಂಪೇಗೌಡರು ಬೆಂಗಳೂರು ನಿರ್ಮಿಸಿದ್ದರೆ, ನಾವು ಒಡೆದ ಮನಸ್ಸುಗಳನ್ನು ಒಗ್ಗೂಡಿಸಿ, ಜಾತಿ-ಮತ ಭೇದಗಳಿಲ್ಲದ ಹೊಸ ನಾಡನ್ನು ಕಟ್ಟಬೇಕಿದೆ ಎಂದರು.

ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಮಾತನಾಡಿ, ಜನರಿಗಾಗಿ ಕೆಲಸ ಮಾಡಿದಂತಹ ಕೆಂಪೇಗೌಡರು ಮತ್ತು ವಿಶ್ವೇಶ್ವರಯ್ಯನವರು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆೆ. ಮಹನೀಯರ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ನಮ್ಮಿಂದಾಗಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಒಕ‌್ಕಲಿಗ ಸಂಘದ ಅಧ್ಯಕ್ಷ ಎನ್‌.ಜೆ ನಾಗರಾಜ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ, ಸಮಾಜದ ಮುಖಂಡರು ಭಾಗವಹಿಸಿದ್ದರು.

ಕೆಂಪೇಗೌಡರು ತಮ್ಮ ಕಾಲಾವಧಿಯಲ್ಲಿ ಸರ್ವಜಾತಿಗೆ ಪ್ರಾಮುಖ್ಯತೆ ನೀಡಿ, ಜಾತಿ ಮತ್ತು ಕುಲಕಸುಬುಗಳಿಗೆ ಸಂಬಂಧಿಸಿದಂತೆ ಶೆಟ್ಟಿಪೇಟೆ, ಗೌಡಪೇಟೆ, ಅಕ್ಕಿಪೇಟೆ ಮತ್ತು ಬಳೆಪೇಟೆ ಸೇರಿದಂತೆ ಸುಮಾರು 52 ಪೇಟೆಗಳನ್ನು ಕಟ್ಟಿದ್ದಾರೆ. ಕೆಂಪೇಗೌಡರ ಈ ಪೇಟೆಗಳನ್ನು ಕಂಡ ಬ್ರಿಟಿಷರು ಲಂಡನ್‌ನಲ್ಲಿ 12 ಪೇಟೆಗಳನ್ನು ಇವರ ವಿಚಾರಧಾರೆ ಆಧರಿಸಿ ಲಂಡೋನಿಯಾ ಎನ್ನುವ ಸ್ಟ್ರೀಟ್‌ಗಳನ್ನು ನಿರ್ಮಿಸಿದ್ದಾರೆ.
•ಡಾ| ಹನಿಯೂರು ಚಂದ್ರೇಗೌಡ,
ಸಂಶೋಧಕರು

Advertisement

Udayavani is now on Telegram. Click here to join our channel and stay updated with the latest news.

Next