Advertisement
ಶುಕ್ರವಾರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 64ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಲಿಖೀತ ಸಂದೇಶ ನೀಡಿದ ಅವರು, ಆಂಗ್ಲಭಾಷಾ ವ್ಯಾಮೋಹಕ್ಕೆ ಸಿಲುಕಿ ಕನ್ನಡ ಸಂಸ್ಕೃತಿಯನ್ನು ನಾಶಗೊಳಿಸಿಕೊಳ್ಳುತ್ತಿದ್ದೇವೆ. ಆಧುನಿಕ ಯುಗದಲ್ಲಿ ಅನ್ಯ ಭಾಷೆಗಳ ಕಲಿಕೆ ಅನಿವಾರ್ಯ. ಅನ್ಯಭಾಷೆಗಳ ಕಲಿಯುವ ಜೊತೆಗೆ ಕನ್ನಡವನ್ನು ಹೆಚ್ಚಾಗಿ ಬಳಸುವ, ಪ್ರೀತಿಸುವ ಮೂಲಕ ಉಳಿಸಿ, ಬೆಳೆಸುವಂತಾಗಬೇಕು ಎಂದರು.
Related Articles
Advertisement
ಮಕ್ಕಳ ಪ್ರತಿಭೆ ಅರಳುವಿಕೆಯಲ್ಲಿ, ಬೌದ್ಧಿಕ ಬೆಳವಣಿಗೆಯಲ್ಲಿ, ವ್ಯಕ್ತಿತ್ವ ವಿಕಸನದಲ್ಲಿ ಭಾಷೆಯಿಂದ ದೊರೆಯುವ ಅನಂದದ ಅನುಭವಕ್ಕೆ ಅವಕಾಶ ಕಲ್ಪಿಸಬೇಕು. ಕನ್ನಡಿಗರು ಫಲವತ್ತಾದ ಕನ್ನಡ ನೆಲದಲ್ಲಿ ಆಳಕ್ಕೆ ಬೇರೂರಿ, ಹೆಮ್ಮರವಾಗಿ ಬೆಳೆಯಬೇಕು. ನಮ್ಮ ತಾಯ್ನುಡಿಯ ಬಗ್ಗೆ ನಿರಭಿಮಾನ, ದುರಭಿಮಾನ ಹೊಂದದೆ ಸದಭಿಮಾನ ರೂಢಿಸಿಕೊಂಡಾಗ ಮಾತ್ರ ರಾಜ್ಯೋತ್ಸವದ ಆಚರಣೆ ಅರ್ಥಪೂರ್ಣ ಎನಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಇಂದಿನ ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಭಾಷೆ ಬೇಕು. ಆದರೆ, ನಮ್ಮ ಭಾಷೆಯ ಬದಲಿಗೆ ಅಲ್ಲ. ಆಂಗ್ಲ ಮಾಧ್ಯಮದಲ್ಲಿ ಓದಿದರೆ ಮಾತ್ರವೇ ಉದ್ಯೋಗ ದೊರೆಯುತ್ತದೆ ಎಂಬುದು ಭಾವನೆಯಲ್ಲಿ ಬೆರೆತಿದೆ. ಅದು ಸರಿಯಲ್ಲ. ಕನ್ನಡ ಮಾಧ್ಯಮದಲ್ಲೇ ಓದಿದವರು ಉನ್ನತ ಸ್ಥಾನಮಾನ ಹೊಂದಿರುವುದು ನಮ್ಮ ಕಣ್ಮುಂದೆ ಇದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಬಹುಸಂಖ್ಯಾತ ಜನರ ಭಾಷೆ ಕನ್ನಡವೇ ಆಗಿದ್ದರೂ, ಅದು ರಾಜ್ಯ ಸರ್ಕಾರದ ಅಧಿಕೃತ ಭಾಷೆಯಾಗಿದೆಯಷ್ಟೆ. ಉದ್ಯೋಗವನ್ನು ದೃಷ್ಟಿಯಲ್ಲಿರಿಸಿಕೊಂಡು ಪೋಷಕರು ಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ಕೆ ಶರಣಾಗುತ್ತಿರುವ ಪರಿಣಾಮವಾಗಿ ನಾಡಿನೆಲ್ಲೆಡೆ ಸಾವಿರಾರು ಕನ್ನಡ ಶಾಲೆಗಳು ಮುಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಕನ್ನಡಿಗರು ಅತ್ಯಂತ ಉದಾರ ಮನಸ್ಸಿನವರು ಮತ್ತು ವಿಶಾಲ ಹೃದಯವಂತರಾಗಿದ್ದು ಎಲ್ಲರನ್ನೂ ಹಾಗೂ ಎಲ್ಲವನ್ನೂ ಸ್ವೀಕರಿಸುವ ಮನೋಭಾವ ಹೊಂದಿದ್ದೇವೆ. ಭಾಷಾಭಿಮಾನ ಕೊರತೆಯೊಂದಿಗೆ ಭಾಷಾ ಅಭಿಮಾನವೂ ನಮ್ಮಲ್ಲಿಲ್ಲ. ಅನ್ಯ ಭಾಷಿಕರ ಆಕ್ರಮಣವಿಲ್ಲದಿದ್ದರೂ ನಾವೇ ಅವರನ್ನು ಸಂತುಷ್ಟಗೊಳಿಸುತ್ತಿದ್ದೇವೆ. ಈಗಾಗಲೇ ನಾವು ಬಳಸುವ ಕನ್ನಡ ಭಾಷೆಯಲ್ಲಿ ಶೇ.60 ರಷ್ಟು ಆಂಗ್ಲಭಾಷಾ ಪದಗಳೇ ಸೇರಿರುವುದು ದುರಂತ ಎಂದು ಬಣ್ಣಿಸಿದರು.
ಅನ್ಯಭಾಷಿಕರಿಗಿಂತ ಕನ್ನಡಿಗರ ಕೌಶಲ್ಯ ಹೆಚ್ಚಿದ್ದರೂ ಅವರ ಕಾರ್ಯವೇಗಕ್ಕೆ ಹೆಚ್ಚಿನ ಒತ್ತು ನೀಡಿ ಅನ್ಯಭಾಷಿಕರಿಗೆ ನಮ್ಮ ನಾಡಿನಲ್ಲಿ ಹೆಚ್ಚಿನ ಉದ್ಯೋಗಾವಕಾಶ ನೀಡುತ್ತಿರುವುದು ನಿಲ್ಲಬೇಕಿದೆ ಎಂದರು.
ಬ್ರಿಟಿಷರ ಅಧಿಕಾರವಧಿಯಲ್ಲಿ ಹರಿದು ಹಂಚಿ ಹೋಗಿದ್ದ ಕರ್ನಾಟಕದ ಏಕೀಕರಣ ಕನಸನ್ನು ಡೆಪ್ಯೂಟಿ ಚನ್ನಬಸಪ್ಪ ಕಂಡಿದ್ದರು. 1856ರಲ್ಲಿ ಚಾಲನೆ ನೀಡಿದ ಬೀಜ ರೂಪದ ಚಳವಳಿ 100 ವರ್ಷಗಳವರೆಗೆ ನಿರಂತರ ಹೋರಾಟ ನಡೆಸಿದ ಫಲ ಸ್ವರೂಪ 1956ರ ನ. 1 ರಂದು ವಿಶಾಲ ಮೈಸೂರು ರಾಜ್ಯವಾಯಿತು. ಅದಕ್ಕಾಗಿ ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾಯರು, ರಾ.ಹ. ದೇಶಪಾಂಡೆ, ರೊದ್ದಂ ಶ್ರೀನಿವಾಸ ರಾವ್, ಬಿ.ಎಂ. ಶ್ರೀಕಂಠಯ್ಯ, ಆ.ನ. ಕೃಷ್ಣರಾಯ, ಹಡೇìಕರ್ ಮಂಜಪ್ಪ, ಬೆನಗಲ್ ಶಿವರಾಮ್, ಬೆನಗಲ್ ರಾಮರಾವ್, ಹುಯಿಲಗೋಳ ನಾರಾಯಣರಾವ್, ಕುವೆಂಪು, ಎಸ್. ನಿಜಲಿಂಗಪ್ಪ, ಪಾಟೀಲ್ ಪುಟ್ಟಪ್ಪ ಇತರರ ಹೋರಾಟ ಅವಿಸ್ಮರಣೀಯ ಎಂದು ಸ್ಮರಿಸಿದರು.
ಏಕೀಕರಣ ಚಳವಳಿ ಸಮಯದಲ್ಲಿ ಕನ್ನಡ ಹೋರಾಟಗಾರ ಹಡೇìಕರ್ ಮಂಜಪ್ಪ ದಾವಣಗೆರೆಗೆ ಆಗಮಿಸಿದ್ದರು. ದಾವಣಗೆರೆಯವರೇ ಆದ ಎ.ಎಚ್.ಶಿವಾನಂದಸ್ವಾಮಿ ಏಕೀಕರಣ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅನೇಕರ ಅಹರ್ನಿಶಿ ಹೋರಾಟದ ಫಲವಾಗಿ ಉದಯವಾಗಿರುವ ಕನ್ನಡನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ ಜೊತೆಗೆ ನಾಡು, ನುಡಿ, ಸಂಸ್ಕೃತಿಯನ್ನ ಅಖಂಡವಾಗಿಸೋಣ ಎಂದು ಮನವಿ ಮಾಡಿದರು. ತರಳಬಾಳು ಶಾಲೆ, ಗೋಲ್ಡನ್ ಪಬ್ಲಿಕ್ ಸ್ಕೂಲ್ ಹಾಗೂ ಸೊಪ್ರೊಸೈನ್ ಕಾನ್ವೆಂಟ್ ಮಕ್ಕಳು ಚಿತ್ತಾಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ವೇದಿಕೆ ಕಾರ್ಯಕ್ರಮದ ಮುನ್ನ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಶ್ರೀ ಭುವನೇಶ್ವರಿ ಪ್ರತಿಮೆ ಮೆರವಣಿಗೆ ಕಲಾ ತಂಡಗಳೊಂದಿಗೆ ಜರುಗಿತು. ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಕನ್ನಡ ಪರ ಸಂಘಟನೆ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. ಶಿಸ್ತುಬದ್ಧ ಪಥಸಂಚಲನಕ್ಕೆ ಮೀಸಲು ಸಶಸ್ತ್ರ ಪಡೆಯ ಮುಖ್ಯ ಸಮಾದೇಷ್ಟ ಎಸ್.ಎನ್.ಕಿರಣ್ ಕುಮಾರ್ ಕನ್ನಡಲ್ಲೇ ಆಜ್ಞೆ ನೀಡುವ ಮೂಲಕ ಗಮನ ಸೆಳೆದರು.