ದಾವಣಗೆರೆ: ಬಂದ್ ಹಿನ್ನೆಲೆಯಲ್ಲಿ ಸೊಪ್ಪು ಮಾರಾಟ ಮಾಡದಂತೆ ತಡೆಯಲು ಬಂದಿದ್ದ ರೈತ ಮುಖಂಡರಿಗೆ ವೃದ್ಧ ವ್ಯಾಪಾರಿಯೇ ಮೋದಿಪರ ಪಾಠ ಮಾಡಿ ಮುಖಂಡರ ಬಾಯಿಮುಚ್ಚಿಸಿದ ಘಟನೆ ನಗರದ ಎಪಿಎಂಸಿ ಮಾರುಕಟ್ಟೆ ಪ್ರದೇಶದಲ್ಲಿ ನಡೆಯಿತು.
ಬಂದ್ ಹಿನ್ನೆಲೆಯಲ್ಲಿ ಸೊಪ್ಪಿನ ವ್ಯಾಪಾರ ಬಂದ್ ಮಾಡಿಸಲು ಮಾರುಕಟ್ಟೆ ಪ್ರವೇಶಿಸಿದ ಕೆಲ ರೈತ ಮುಖಂಡರು, ಸೊಪ್ಪಿನ ವ್ಯಾಪಾರಿ ಗುಡ್ಡಪ್ಪ ಚಿನ್ನಕಟ್ಟೆ ಅವರಿಗೂ ಬಂದ್ ಮಾಡಲು ಒತ್ತಾಯಿಸಿದರು. ಆಗ ವೃದ್ಧ ವ್ಯಾಪಾರಿ ಅಂಗಡಿ ಬಂದ್ ಮಾಡಲು ನಿರಾಕರಿಸಿ ಮುಖಂಡರೊಂದಿಗೆ ವಾಗ್ವಾದಕ್ಕಿಳಿದರು.
ನಾವು ವ್ಯಾಪಾರ ಏಕೆ ಬಂದ್ ಮಾಡಬೇಕು ಎಂದು ರೈತ ಮುಖಂಡರನ್ನು ವ್ಯಾಪಾರಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರೈತ ಮುಖಂಡರು, ಕೊತ್ತಂಬರಿ ಬೆಳೆಯಲು ಇನ್ನು ಮುಂದೆ ಜಮೀನೂ ಇರಲ್ಲ. ರೈತನೂ ಇರಲ್ಲ. ಅಂಥ ಕಾನೂನು ನಿಮ್ಮ ಮೋದಿ ಮಾಡಿದ್ದಾರೆ. ರೈತರ ಜಮೀನು ಕಸಿದುಕೊಳ್ಳುವ ಕಾನೂನು ಮಾಡಿದ್ದಾರೆ ಎಂದು ಪಾಠ ಹೇಳಲು ಮುಂದಾದರು. ಇದಕ್ಕೆ ಪ್ರತಿಕ್ರಿಯಿಸಿದ ವ್ಯಾಪಾರಿ, ಮೋದಿ ಇರೋದರಿಂದಲೇ ನಾವಿದ್ದೇವೆ. ಮೋದಿ ಒಳ್ಳೆಯದನ್ನೇ ಮಾಡಿದ್ದಾರೆ. ನಿಮ್ಮ ನಾಯಕರು ರೈತರಿಗೆ ಏನು ಅನುಕೂಲ ಮಾಡಿದ್ದಾರೆ ಎಂದು ಮರುಪ್ರಶ್ನಿಸುವ ಮೂಲಕ ಮುಖಂಡರ ಬಾಯಿ ಮುಚ್ಚಿಸಿದರು.
ವೃದ್ಧ ವ್ಯಾಪಾರಿಯ ಪ್ರಶ್ನೆಗೆ ಉತ್ತರ ಕೊಡಲಾಗದ ಮುಖಂಡರು, ವ್ಯಾಪಾರ ಮಾಡಿ ಏನಾದರೂ ತೊಂದರೆಯಾದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಹೇಳುತ್ತ ಅಲ್ಲಿಂದ ಕಾಲ್ಕಿತ್ತರು.