Advertisement

ಮೌಲ್ಯಯುತ ಶಿಕ್ಷಣವೇ ಸಮಸ್ಯೆಗಳಿಗೆ ಪರಿಹಾರ

12:17 PM Sep 16, 2019 | Team Udayavani |

ದಾವಣಗೆರೆ: ಮೌಲ್ಯಯುತ ವಿಜ್ಞಾನ ಶಿಕ್ಷಣವೊಂದೇ ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಮಾರ್ಗ ಎಂದು ಸ್ವದೇಶಿ ವಿಜ್ಞಾನ ಆಂದೋಲನ- ಕರ್ನಾಟಕದ ಕಾರ್ಯಾಧ್ಯಕ್ಷ, ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಭಾರತರತ್ನ ಸರ್‌.ಎಂ. ವಿಶ್ವೇಶ್ವರಯ್ಯ ಜನ್ಮದಿನೋತ್ಸವದ ಅಂಗವಾಗಿ ಸ್ವದೇಶಿ ವಿಜ್ಞಾನ ಆಂದೋಲನ-ಕರ್ನಾಟಕದ ವತಿಯಿಂದ ಭಾನುವಾರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಡೆದ 15ನೇ ಕನ್ನಡ ವಿಜ್ಞಾನ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಕೃತಿಯನ್ನು ಗೆಲ್ಲಬಲ್ಲೆ ಎಂಬ ಮನುಷ್ಯನ ದುರಹಂಕಾರ, ಮಿತಿಮೀರಿದ ಸ್ವಾರ್ಥದಿಂದ ಜಗತ್ತು ವಿನಾಶದತ್ತ ಸಾಗುತ್ತಿರುವುದನ್ನು ಯಾವ ವಿಜ್ಞಾನವೂ ತಡೆಯಲು ಸಾಧ್ಯವಾಗುತ್ತಿಲ್ಲ ಎಂದರು.

ಮನುಷ್ಯನ ಎಲ್ಲ ನಡವಳಿಕೆಗಳೂ ಪ್ರಕೃತಿಯನ್ನು ಅವಲಂಬಿಸಿವೆ. ಸಂಸ್ಕೃತಿ, ಸಂಸ್ಕಾರದ ಮೂಲಕ ಮಾದರಿಯಾಗಬೇಕು. ಪೋಷಿಸಿ, ಬೆಳೆಸಿದ ಪರಿಸರವನ್ನು ನಾಶ ಮಾಡಿದರೆ ಮುಂದೆ ಆಗುವ ಅನಾಹುತಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬುದನ್ನ ತಿಳಿಯಬೇಕು ಎಂದು ತಾಕೀತು ಮಾಡಿದರು.

ವಿಶ್ವವಿದ್ಯಾಲಯಗಳು ಪ್ರಕೃತಿಯ ಗರ್ಭದಲ್ಲಿ ಅಡಗಿರುವ ಹಲವು ವಿಷಯ, ವೈಶಿಷ್ಟ, ಕೌತುಕಗಳನ್ನು ಗುರುತಿಸಿ, ಮೂಲ ಸತ್ವಗಳಿಗೆ ಬೆಳಕು ನೀಡಬೇಕು. ಸಣ್ಣಪುಟ್ಟ ಸಂಗತಿಗಳಲ್ಲಿ ಅಡಗಿರುವ ವಿಜ್ಞಾನವನ್ನು ಗುರುತಿಸಿ ಹೊರತರುವ ಕೆಲಸದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಮಕ್ಕಳಲ್ಲಿನ ಪ್ರಶ್ನೆಗಳಿಗೆ ಉತ್ತರ ನೀಡುವ, ಕುತೂಹಲ ತಣಿಸುವ ಚಿಂತನೆ ಮಾಡಬೇಕು. ಮಕ್ಕಳು ಪ್ರಶ್ನೆ ಕೇಳಿದಾಗ ಹತ್ತಿಕ್ಕುವ ಮನೋಭಾವ ತೋರಿದರೆ ಅವರಲ್ಲಿರುವ ವೈಜ್ಞಾನಿಕ ಮನೋಭಾವ ದೂರವಾಗಲಿದೆ. ಮಾರ್ಕ್ಸ್ ಪಡೆಯುವ ಯಂತ್ರಗಳಾಗುತ್ತಾರೆ ಎಂಬ ಆತಂಕವೂ ಗಮನದಲ್ಲಿ ಇರಬೇಕು. ಪ್ರತಿ ಮಗುವಿನಲ್ಲಿರುವ ಸಾಮರ್ಥ್ಯ ಗುರುತಿಸಿ, ಪ್ರೋತ್ಸಾಹಿಸುವ ಪ್ರಯತ್ನ ಎಲ್ಲರಿಂದಲೂ ಆಗಬೇಕು ಎಂದು ತಿಳಿಸಿದರು.

Advertisement

ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ| ಕೆ.ಎಂ. ಇಂದಿರೇಶ್‌ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನದ ಯುಗವೆನಿಸಿದ ಆಧುನಿಕ ಜಗತ್ತು ಜ್ಞಾನ, ಮಾಹಿತಿಗಳನ್ನೇ ಅವಲಂಬಿಸಿದೆ. ಅವು ಗಾಳಿ, ನೀರು, ಬೆಳಕಿನಷ್ಟೇ ಬದುಕಿನ ಭಾಗವಾಗಿ ಎಲ್ಲವನ್ನೂ ಆವರಿಸಿಕೊಂಡಿವೆ. ಎಲ್ಲ ಕ್ಷೇತ್ರಗಳಲ್ಲಿ ಅದ್ಭುತ ಪ್ರಗತಿ ಸಾಧಿಸಿರುವ ಮನುಷ್ಯ ಭೂಮಿಯ ಮೇಲಿನ ಎಷ್ಟೋ ಅಜ್ಞಾತವಾಗಿದ್ದ ವಿಷಯ ಮತ್ತು ಪ್ರಕೃತಿಯಲ್ಲಿ ಅಡಗಿದ ರಹಸ್ಯಗಳನ್ನು ಅನಾವರಣಗೊಳಿಸುವ ಮಟ್ಟಿಗೆ ಸಶಕ್ತನಾಗಿದ್ದಾನೆ ಎಂದು ತಿಳಿಸಿದರು.

ವೈಜ್ಞಾನಿಕ ಸಂಶೋಧನೆಗಳು ಎಲ್ಲಾ ಕ್ಷೇತ್ರದ ಯಶಸ್ಸು, ಸಾಧನೆಗೆ ನೆರವಾಗಿವೆ. ವಿಜ್ಞಾನ, ತಂತ್ರಜ್ಞಾನ, ವ್ಯವಸಾಯ, ಪರಮಾಣು, ಬಾಹ್ಯಾಕಾಶ, ರಕ್ಷಣಾ ಕ್ಷೇತ್ರಗಳಲ್ಲಿನ ಸಂಶೋಧನೆಗಳು ಎಲ್ಲರನ್ನೂ ಬೆರಗುಗೊಳಿಸುವಂತಿವೆ. ಭಾರತ ವೈಜ್ಞಾನಿಕ ಸಂಶೋಧನೆಗಳ ಮೂಲಕ ಅಭಿವೃದ್ಧಿ ರಾಷ್ಟ್ರಗಳ ಸಾಲಿನತ್ತ ಮುನ್ನಡೆಯುತ್ತಿರುವುದು ದೇಶದ ಸಮಗ್ರ ಬೆಳವಣಿಗೆಗೂ ಸಹಕಾರಿ ಎಂದರು.

ಶಾಲೆಗಳಲ್ಲಿ ಸೈದ್ಧಾಂತಿಕವಾಗಿ ಬೋಧನೆ ಮಾಡುವ ಬದಲಾಗಿ ಪ್ರಾಯೋಗಿಕ, ಪ್ರಾತ್ಯಕ್ಷಿಕ ತರಬೇತಿ ನೀಡಬೇಕು. ಆದರೆ, ವೈಜ್ಞಾನಿಕ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಈಗ ಸಾಧ್ಯವಾಗುತ್ತಿಲ್ಲ. ತಾರ್ಕಿಕ ತಿಳಿವಳಿಕೆ ಮತ್ತು ಗಣಿತದ ಸ್ಪಷ್ಟತೆಯೂ ಬೇಕಾಗಿದೆ. ವಿಜ್ಞಾನಿಗಳು ಹೊಸ ಆವಿಷ್ಕಾರ ಮಾಡಿದರೆ, ತಂತ್ರಜ್ಞರು ಅದಕ್ಕೆ ಪೂರಕ ಸಲಕರಣೆ ತರುವುದು ಮುಖ್ಯವಾಗಿದೆ ಎಂದು ತಿಳಿಸಿದರು.

ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಬಿ.ಪಿ. ವೀರಭದ್ರಪ್ಪ ಮಾತನಾಡಿ, ವಿಜ್ಞಾನದ ವಿಚಾರಗಳನ್ನು ವಾಸ್ತವದ ನೆಲೆಯಲ್ಲಿ ಇದ್ದುಕೊಂಡು ಜನರನ್ನು ತಲುಪುವ ಕೆಲಸ ಆಗಬೇಕಾಗಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮೌಲ್ಯಗಳನ್ನು ಒಳಗೊಂಡ ವಿಜ್ಞಾನವು ನೈತಿಕವಾಗಿ ಬೆಳೆದಾಗ ಯಶಸ್ಸು ಕಾಣಲು ಸಾಧ್ಯ. ಜನರು ಪ್ರಯೋಜನ ಪಡೆದು ಉನ್ನತಿ ಸಾಧಿಸಿದರೆ ಸಂಶೋಧನೆ ಸಾರ್ಥಕತೆ ಪಡೆಯುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಶರಣಪ್ಪ ವಿ.ಹಲಸೆ ಮಾತನಾಡಿ, ವಿಜ್ಞಾನದ ಆವಿಷ್ಕಾರಗಳು ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಅವರ ಅಭಿವೃದ್ಧಿಗೆ ಪೂರಕವಾಗಿರಬೇಕು. ಸಂಶೋಧನೆ ಮಾಡಿದರಷ್ಟೇ ಮುಗಿಯುವುದಿಲ್ಲ. ಸಮಾಜಕ್ಕೆ ಅವುಗಳ ಉಪಯೋಗವೂ ಆಗಬೇಕು. ಆ ನಿಟ್ಟಿನಲ್ಲಿ ಸಂಶೋಧಕರು, ಶಿಕ್ಷಕರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಹೇಳಿದರು.

ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ|ವೈ.ಕೆ.ಕೋಟಿಕಲ್ ಉಪನ್ಯಾಸ ನೀಡಿದರು. ಕುಲಸಚಿವ ಪ್ರೊ| ಬಸವರಾಜ್‌ ಬಣಕಾರ್‌ ಇತರರು ಇದ್ದರು. ಎಂ.ಎಸ್‌. ರಾಜಕುಮಾರ್‌ ಸ್ವಾಗತಿಸಿದರು. ಪ್ರೊ| ಗಾಯತ್ರಿ ದೇವರಾಜ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next