ದಾವಣಗೆರೆ: ಗ್ರಾಮೀಣ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ತಿಳಿಸಿದ್ದಾರೆ. ನಿಟುವಳ್ಳಿಯ ಸೋಮೇಶ್ವರ ವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಲಾಗಿದ್ದ 2019-20ನೇ ಸಾಲಿನ ಬ್ಲಾಕ್ ಹಂತದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಶಿಕ್ಷಕರು ಗುರುತಿಸಿ, ಸೂಕ್ತ ಅವಕಾಶ, ವೇದಿಕೆ ಕಲ್ಪಿಸಬೇಕು ಎಂದರು.
ನಗರ ಪ್ರದೇಶದ ಶಾಲೆಗಳಲ್ಲಿ ವಾರ್ಷಿಕೋತ್ಸವ, ಮತ್ತಿತರ ಕಾರ್ಯಕ್ರಮಗಳ ಮೂಲಕ ಮಕ್ಕಳ ಪ್ರತಿಭೆಯನ್ನು ಗುರುತಿಸಲಾಗುತ್ತದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅಂತಹ ಅವಕಾಶಗಳು ಇರುವುದಿಲ್ಲ. ಗ್ರಾಮೀಣ ಭಾಗದ ಮಕ್ಕಳಿಗೆ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವೇಷಭೂಷಣ ಸ್ಪರ್ಧೆಗಳ ಮೂಲಕ ಮಕ್ಕಳ ಪ್ರತಿಭೆ ಅನಾವರಣ ಮಾಡುವ ಕೆಲಸ ಶಿಕ್ಷಕರಿಂದ ಆಗಬೇಕು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ದಾವಣಗೆರೆ ಜಿಲ್ಲೆಯ ಮಕ್ಕಳು ಭಾಗವಹಿಸಿ ಬಹುಮಾನ ಪಡೆದು ಕೀರ್ತಿ ತರಬೇಕು ಎಂದು ಶುಭ ಹಾರೈಸಿದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಪಠ್ಯದ ಜೊತೆಗೆ ಮಕ್ಕಳು ವೈವಿಧ್ಯಮಯ ಚಟುವಟಿಕೆಗಳಲ್ಲಿ ತೊಡಗಬೇಕು. ಅದೃಷ್ಟ ಮತ್ತು ಸಾಧನೆ ಉತ್ತುಂಗ ಸ್ಥಾನಕ್ಕೆ ಏರಿಸುತ್ತದೆ. ಮಕ್ಕಳು ಪರಿಶ್ರಮ ವಹಿಸಿದರೆ ಆ ಸ್ಥಾನ ಮುಂದುವರಿಯುತ್ತದೆ. ಹಾಗಾಗಿ ಮಕ್ಕಳು ಹೆಚ್ಚಿನ ಪರಿಶ್ರಮ ವಹಿಸಬೇಕು ಎಂದು ತಿಳಿಸಿದರು. ಪ್ರಾಸ್ತಾವಿಕ ಮಾತುಗಳಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್ ಪರಮೇಶ್ವರಪ್ಪ, ಪ್ರತಿಯೊಂದು ಮಗು ಹೊಂದಿರುವ ಪ್ರತಿಭೆಯನ್ನು ಗುರುತಿಸುವ ಕೆಲಸವನ್ನು ಪೋಷಕರು ಮತ್ತು ಶಿಕ್ಷಕರು ಮಾಡಬೇಕು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ಮಕ್ಕಳು ಸಕ್ರಿಯವಾಗಿ ತೊಡಗಬೇಕು ಎಂದು ತಿಳಿಸಿದರು.
ಎಲ್ಲಾ ಮಕ್ಕಳು ಡಾಕ್ಟರ್ ಮತ್ತು ಎಂಜಿನಿಯರ್ ಗಳಾಗಲು ಸಾಧ್ಯವಿಲ್ಲ. ಪ್ರತಿಯೊಂದು ಮಗುವು ಕಲೆ, ಸಂಗೀತ ಮತ್ತು ಚಿತ್ರಕಲೆ ಇಂತಹ ವಿಭಿನ್ನ ಕಲೆಗಳನ್ನು ಹೊಂದಿರುತ್ತದೆ. ಅದಕ್ಕೆ ಪ್ರೋತ್ಸಾಹ ನೀಡಿದಾಗ ಮಕ್ಕಳು ದೊಡ್ಡ ಕಲಾವಿದರಾಗುತ್ತಾರೆ ಎಂದು ತಿಳಿಸಿದರು.
1 ರಿಂದ 4ನೇ ತರಗತಿ, 5ರಿಂದ 7 ನೇ ತರಗತಿ ಮತ್ತು 8 ರಿಂದ 10 ನೇ ತರಗತಿ ಒಟ್ಟು ಮೂರು ಹಂತಗಳಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯುತ್ತಿದೆ. ಸಾಮೂಹಿಕ ಮತ್ತು ವೈಯಕ್ತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಉತ್ತಮ ಪ್ರದರ್ಶನ ನೀಡಿದ ನಿಜವಾದ ಪ್ರತಿಭೆಗಳನ್ನು ಆಯ್ಕೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಶೈಲಜಾ ಬಸವರಾಜ್, ಸದಸ್ಯ ಹದಡಿ ನಿಂಗಪ್ಪ, ತಾಲೂಕು ಪಂಚಾಯತ್ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಪಾಲಿಕೆ ಸದಸ್ಯರಾದ ಕೆ.ಎಂ ವೀರೇಶ್, ಎಸ್.ಮಂಜುನಾಥ್, ಉಮಾ ಪ್ರಕಾಶ್, ಶಿಕ್ಷಕರ ಸಮಘಟನೆಗಳ ಪದಾಧಿಕಾರಿಗಳಾದ ಮರುಳಪ್ಪ, ಬಿ.ಎಂ. ಚೌಡಪ್ಪ, ಶಿವಲಿಂಗಪ್ಪ, ಆರ್.ಜಿ. ಅಜ್ಜಯ್ಯ, ಕೆ. ಈಶಾನಾಯ್ಕ, ಶ್ರೀನಿವಾಸ್, ಗದಿಗೆಪ್ಪ, ಗಂಗಾಧರಪ್ಪ, ಪಂಚಾಕ್ಷರಪ್ಪ ಇತರರು ಇದ್ದರು. ವಿವಿಧ ವಿಭಾಗದ ಸ್ಪರ್ಧೆ ನಡೆದವು.