ದಾವಣಗೆರೆ: ಜಂತುಹುಳು ನಿರ್ಮೂಲನಾ ಮಾತ್ರೆ ಸೇವನೆಯಿಂದ ಮಕ್ಕಳಲ್ಲಿ ಉಂಟಾಗುವ ಅಪೌಷ್ಟಿಕತೆ, ಏಕಾಗ್ರತೆ ಕೊರತೆ ಸೇರಿದಂತೆ ಅನೇಕ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ಹೇಳಿದ್ದಾರೆ.
ಬುಧವಾರ, ನಗರದ ಹೈಸ್ಕೂಲ್ ಮೈದಾನದಲ್ಲಿರುವ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾಮಟ್ಟದ ರಾಷ್ಟ್ರೀಯ ಜಂತುಹುಳು ನಿರ್ಮೂಲನಾ ದಿನಾಚರಣೆಯಲ್ಲಿ ಮಕ್ಕಳಿಗೆ ಜಂತುಹುಳು ನಿರ್ಮೂಲನೆ ಮಾತ್ರೆ ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಈ ಕಾರ್ಯಕ್ರಮ ಶೇ. 100ರಷ್ಟು ಯಶಸ್ವಿಯಾಗಬೇಕು ಎಂದು ಹೇಳಿದರು.
ದೇಹದಲ್ಲಿ ಜಂತು ಹುಳು ಉಂಟಾಗಲು ಮುಖ್ಯ ಕಾರಣ ಸ್ವಚ್ಛತೆ ಇಲ್ಲದಿರುವುದು. ಜಂತು ಹುಳುಗಳು ಮಕ್ಕಳ ಆರೋಗ್ಯದಲ್ಲಿ ಅನೇಕ ರೀತಿಯ ತೊಂದರೆ ಉಂಟುಮಾಡುತ್ತವೆ. ದೇಹದಲ್ಲಿನ ಪೌಷ್ಟಿಕಾಂಶ ಹೀರಿಕೊಂಡು ಅಪೌಷ್ಟಿಕತೆ ಉಂಟು ಮಾಡುತ್ತವೆ. ಇದರಿಂದ ಹಸಿವೆಯಾಗದಿರುವುದು, ನಿಶ್ಯಕ್ತಿ, ರಕ್ತಹೀನತೆ, ಹೊಟ್ಟೆ ನೋವು, ವಾಕರಿಕೆ, ವಾಂತಿ ಹಾಗೂ ದೇಹದ ತೂಕದಲ್ಲಿ ಇಳಿಕೆಯಾಗುತ್ತದೆ ಹಾಗೂ ಓದಿನಲ್ಲಿ ಏಕಾಗ್ರತೆಯೂ ಕಡಿಮೆಯಾಗುತ್ತದೆ. ಈ ರೀತಿಯ ಎಲ್ಲಾ ತೊಂದರೆಗಳಿಂದ ಮುಕ್ತರಾಗಬೇಕಾದರೆ ಮಕ್ಕಳು ಜಂತುಹುಳು ನಿವಾರಣಾ ಮಾತ್ರೆ ಸೇವಿಸಬೇಕು ಎಂದು ಸಲಹೆ ನೀಡಿದರು.
ನಾನು ಚಿಕ್ಕವನಿದ್ದಾಗ ಜಂತು ಹುಳುವಿನಿಂದ ತುಂಬಾ ಕಷ್ಟ ಅನುಭವಿಸಿದ್ದೇನೆ. ಜಂತುಹುಳುನಿಂದ ಓದಲು ಆಸಕ್ತಿ ಇರುತ್ತಿರಲಿಲ್ಲ. ದೇಹದಲ್ಲಿ ನಿಶ್ಯಕ್ತಿ ಉಂಟಾಗಿ ಓದಿದ್ದು ನೆನಪಿರುತ್ತಿರಲಿಲ್ಲ. ಹೆಚ್ಚು ಊಟ-ತಿಂಡಿ ತಿನ್ನಬೇಕೆನಿಸುತ್ತಿತ್ತು ಎಂದ ಅವರು, ಜಂತುಹುಳು ನಿವಾರಣೆಗೆ ಅಲ್ಬೆಂಡಝೋಲ್ ಮಾತ್ರೆಗಳನ್ನು ಕಡ್ಡಾಯವಾಗಿ ಸೇವಿಸುವುದರ ಮೂಲಕ ನಮ್ಮ ಜಿಲ್ಲೆಯ ಎಲ್ಲಾ ಮಕ್ಕಳು ಜಂತು ಹುಳು ಮುಕ್ತ ಮಕ್ಕಳಾಗಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಬಸವರಾಜ್ ಮಾತನಾಡಿ, ಸಿಹಿ ತಿಂಡಿಗಳಿಗೆ ಜಂತು ಹುಳುಗಳು ಬೇಗ ಆಕರ್ಷಿತವಾಗುತ್ತವೆ. ಜಂಕ್ ಫುಡ್, ಚಾಕಲೇಟ್‌ಗಳನ್ನು ತಿನ್ನುವುದರಿಂದ ಜಂತುಹುಳುಗಳು ಉಂಟಾಗುತ್ತವೆ. ಆದ್ದರಿಂದ ಸ್ವತ್ಛ ಮತ್ತು ಶುದ್ಧವಲ್ಲದ ಸಿಹಿ ಪದಾರ್ಥ, ಜಂಕ್ ಫುಡ್‌ಗಳನ್ನು ತಿನ್ನಬಾರದು. ಚಪ್ಪಲಿ ಬಳಕೆ ಅಭ್ಯಾಸ ಮಾಡಿಕೊಳ್ಳಬೇಕು. ನಾವು ಈಗ ಸೇವಿಸುತ್ತಿರುವ ಊಟದ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ ಮಾತನಾಡಿ, ಇಂದು ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಯ ಸುಮಾರು 2,55,000 ವಿದ್ಯಾರ್ಥಿಗಳಿಗೆ ಅಲ್ಬೆಂಡಝೋಲ್ ಮಾತ್ರೆ ನೀಡಲಾಗುತ್ತಿದೆ. ಈ ಮಾತ್ರೆಯು ಜಂತುಹುಳುವಿನಿಂದ ದೇಹದಲ್ಲಿ ಉಂಟಾಗುವ ಬಾಧೆ ತಡೆಯತ್ತದೆ ಎಂದು ಹೇಳಿದರು.
ಡಿಎಚ್‌ಓ ಡಾ| ರಾಘವೇಂದ್ರಸ್ವಾಮಿ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ| ಕೆ.ಎಸ್ ಮೀನಾಕ್ಷಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ| ರೇಣುಕಾರಾಧ್ಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ| ವೆಂಕಟೇಶ್. ಎಲ್ .ಡಿ, ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ, ಸರ್ಕಾರಿ ಬಾಲಕರ ಪಪೂ ಕಾಲೇಜಿನ
ಉಪ ಪ್ರಾಚಾರ್ಯ ಪರಮೇಶ್ವರಪ್ಪ, ಇತರರು ಇದ್ದರು.