Advertisement

ಆಟೋಗೆ ಮಾಹಿತಿ ಫಲಕ ಕಡ್ಡಾಯ

03:49 PM May 19, 2019 | Naveen |

ದಾವಣಗೆರೆ: ಹಗಲಿರುಳು ಕಷ್ಟಪಟ್ಟು ಕುಟುಂಬದ ನಿರ್ವಹಣೆ ಮಾಡುವ ಆಟೋ ಚಾಲಕರು ಪ್ರಾಮಾಣಿಕ ಶ್ರಮಜೀವಿಗಳು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ಅಭಿಪ್ರಾಯಪಟ್ಟರು.

Advertisement

ನಗರದ ಹೈಸ್ಕೂಲ್ ಮೈದಾನದ‌ಲ್ಲಿ ಶನಿವಾರ ಆಟೋ ಚಾಲಕರು ಮತ್ತು ಮಾಲೀಕರಿಗೆ ಮಾಹಿತಿ ಫಲಕ ವಿತರಿಸಿ, ಅವರು ಮಾತನಾಡಿ, ಆಟೋ ಚಾಲಕರು ಮತ್ತು ಮಾಲೀಕರು ಶ್ರಮಜೀವಿಗಳು. ಸಮಾಜದಲ್ಲಿ ಪ್ರತಿನಿತ್ಯ ಕಷ್ಟಪಟ್ಟು ಕುಟುಂಬ ನಿರ್ವಹಣೆಯಲ್ಲಿ ನಿಮ್ಮ ಪಾತ್ರ ದೊಡ್ಡದು. ನಿಮ್ಮ ಬಗ್ಗೆ ನಾವು ಅನುಮಾನ ಪಡುವುದಿಲ್ಲ. ಏಕೆಂದರೆ ಪೊಲೀಸ್‌ ಇಲಾಖೆಗೆ ಸಾಕಷ್ಟು ಮಾಹಿತಿ ನೀಡಿ ಅನುಕೂಲ ಮಾಡಿಕೊಟ್ಟಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾತ್ರಿ ವೇಳೆ ಜನರು ಆಟೋಗಳಲ್ಲಿ ಓಡಾಡುತ್ತಿದ್ದಾರೆ ಎಂದರೆ ಆಟೋ ತುಂಬಾ ಸುರಕ್ಷಿತ ಎಂಬ ಭಾವನೆ ಇದೆ. ಏಕೆಂದರೆ ಇದುವರೆಗೂ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಯ ಒಂದೂ ಪ್ರಕರಣ ಆಟೋ ಚಾಲಕರಿಂದ ಕಂಡುಬಂದಿಲ್ಲ. ಇದರಿಂದ ನಿಮ್ಮ ಮೇಲೆ ನಂಬಿಕೆ ಹೆಚ್ಚಾಗಿದೆ ಎಂದರು.

ಈಚೆಗೆ ಜನರು ಎಲ್ಲರನ್ನು ಅನುಮಾನದಿಂದ ನೋಡುವುದು ಹೆಚ್ಚಾಗಿದೆ. ಪ್ರಯಾಣ ಮಾಡುವ ಆಟೋಗಳಲ್ಲಿ ಹತ್ತಬೇಕೋ ಬೇಡವೋ ಎಂಬ ಅನುಮಾನ ಇರುತ್ತದೆ. ಕೆಲವರು ಡಿಎಲ್, ಇನ್ಸೂರೆನ್ಸ್‌ ಇಲ್ಲದೇ ಬಂದು ಪ್ರಯಾಣಿಕರನ್ನು ಕರೆದುಕೊಂಡು ಹೋಗಿ ಪ್ರಯಾಣಿಕರಿಗೆ ತೊಂದರೆ ಆಗುವ ಸಂದರ್ಭಗಳು ಎದುರಾಗಬಹುದು. ಹಾಗಾಗಿ ಎಲ್ಲಾ ಆಟೋ ಚಾಲಕರು ಮತ್ತು ಮಾಲೀಕರು ಮಾಹಿತಿ ಫಲಕಗಳನ್ನು ಆಟೋಗಳಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳುವ ಮೂಲಕ ಸಾರ್ವಜನಿಕರ ರಕ್ಷಣೆಗೆ ಬದ್ಧರಾಗಿ ಎಂದು ಸಲಹೆ ನೀಡಿದರು.

ಕಾರ್ಡ್‌ ನಕಲಿ ಮಾಡುವಂತಿಲ್ಲ: ಆಟೋ ಚಾಲಕರ ಮತ್ತು ಮಾಲೀಕರ ಮಾಹಿತಿ ಫಲಕಕ್ಕೆ 200 ರೂಪಾಯಿ ಖರ್ಚು ಬರುತ್ತದೆ. ಇದಕ್ಕೆ ಅಷ್ಟೊಂದು ಹಣ ಕೊಡಬೇಕಾ ಎಂದು ನಕಲಿ ಕಾರ್ಡ್‌ ಮಾಡಿಸಿಕೊಳ್ಳಬೇಡಿ. ಏಕೆಂದರೆ ಇದರಲ್ಲಿ ಕ್ಯೂಆರ್‌ ಕೋಡ್‌ ಇರುತ್ತದೆ. ಇದರಿಂದ ವಾಹನ ದಾಖಲೆಗಳ ಸತ್ಯಾಸತ್ಯತೆಯನ್ನು ಸುಲಭವಾಗಿ ಕಂಡು ಹಿಡಿಯಲು ಪೊಲೀಸರಿಗೆ ಅನುಕೂಲ ಆಗುತ್ತದೆ. ಯಾವುದೇ ಕಾರಣಕ್ಕೂ ನಕಲಿ ಕಾರ್ಡ್‌ ಮಾಡಿಸಿಕೊಳ್ಳಬೇಡಿ. ತೀವ್ರ ತೊಂದರೆ ಇದ್ದರೆ ಹೇಳಿ ಇಲಾಖೆಯಿಂದ ಕಾರ್ಡ್‌ ಮಾಡಿಸಿಕೊಡುತ್ತೇವೆ ಎಂದರು.

Advertisement

ಮಾಹಿತಿ ಫಲಕ ಕಳೆದರೆ ಕೇವಲ 30 ರೂಪಾಯಿಯಲ್ಲಿ ಮತ್ತೂಂದು ಕಾರ್ಡ್‌ ಮಾಡಿಕೊಡಲಾಗುತ್ತದೆ. ಈ ಫಲಕವನ್ನು ಆಟೋ ಸೀಟಿನ ಹಿಂಭಾಗದಲ್ಲಿ ಅಳವಡಿಸಿದರೆ ಪ್ರಯಾಣಿಕರಿಗೆ ಆಟೋ ಚಾಲಕರ ಮತ್ತು ಮಾಲೀಕರ ಮಾಹಿತಿ ಸುಲಭವಾಗಿ ತಿಳಿಯುವ ಜೊತೆಗೆ ಜನರು ಆಟೋದಲ್ಲಿ ಪ್ರಯಾಣಿಸಲು ನಂಬಿಕೆ ಬರುತ್ತದೆ ಎಂದರಲ್ಲದೇ, 15ದಿನದೊಳಗಾಗಿ ಎಲ್ಲಾ ಆಟೋ ಚಾಲಕರು ಮತ್ತು ಮಾಲೀಕರು ಕಡ್ಡಾಯವಾಗಿ ಮಾಹಿತಿ ಫಲಕ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರೀಪೇಯ್ಡ ಆಟೋ: ಈಗಾಗಲೇ ರೈಲ್ವೆ ನಿಲ್ದಾಣದಲ್ಲಿ ಒಂದು ಪ್ರಿಪೇಯ್ಡ ಆಟೋ ಕೌಂಟರ್‌ ತೆರೆಯಲಾಗಿದೆ. ಅದು ಚೆನ್ನಾಗಿ ನಡೆಯುತ್ತಿದೆ. ನಿನ್ನೆ ಮೊನ್ನೆಯಿಂದ ಕೆಲಸ ಮಾಡುತ್ತಿರುವುದರಿಂದ ಅಲ್ಲಿ ತೊಂದರೆ ಆಗುತ್ತಿದೆ. ಕೆಎಸ್‌ಆರ್‌ಟಿಸಿ ಬಳಿ ಮತ್ತೂಂದು ಕೌಂಟರ್‌ ತೆರೆಯುವ ಉದ್ದೇಶವಿದೆ. ಕೌಂಟರ್‌ಗಳನ್ನು ಸಾರ್ವಜನಿಕರಿಗೆ ಅನುಕೂಲ ಆಗುವ ಬೇರೆ ಕಡೆ ಶಿಫ್ಟ್‌ ಮಾಡುವ ಉದ್ದೇಶವಿದೆ. ಈ ಹಿಂದೆ ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕರು ಹತ್ತುವುದು ಕಡಿಮೆ ಆಗಿತ್ತು. ಆ ಸಮಸ್ಯೆ ಸರಿಪಡಿಸಿದ್ದೇವೆ ಎಂದು ಹೇಳಿದರು.

ನಗರ ವೃತ್ತ ನಿರೀಕ್ಷಕ ಶ್ರೀನಿವಾಸ್‌ ಮಾತನಾಡಿ, ಆಟೋ ಚಾಲಕರು ಕಡ್ಡಾಯವಾಗಿ ಮಾಲೀಕರ ಬಳಿ ಕರಾರು ಪತ್ರ ಮಾಡಿಸಿಕೊಳ್ಳಿ. ಇನ್ಸೂರೆನ್ಸ್‌ ಇಲ್ಲದಿದ್ದರೆ ಯಾವುದೇ ಮುಲಾಜು ಇಲ್ಲದೇ ವಾಹನ ಜಫ್ತಿ ಮಾಡಲಾಗುವುದು. ಜೊತೆಗೆ ಚಾಲಕರಿಗೆ 300, ಮಾಲೀಕರಿಗೆ 1000 ರೂ. ದಂಡ ವಿಧಿಸಲಾಗುವುದು. ಚಾಲಕರು ವಾಹನ ಚಾಲನಾ ಪರವಾನಗಿ (ಡಿಎಲ್) ಹೊಂದಿರಬೇಕು ಎಂದರು.

ಗೂಡ್ಸ್‌ ವಾಹನದಲ್ಲಿ ಪ್ರಯಾಣಿಕರನ್ನು ಕೂರಿಸಿಕೊಂಡು ಹೋಗುವ ಮಾಹಿತಿ ಇದ್ದರೆ ಅಂತಹ ವಾಹನಗಳ ಬಗ್ಗೆ ಮಾಹಿತಿ ನೀಡಿ. ಕೂಡಲೇ ದಂಡ ಹಾಕಲಾಗುವುದು ಎಂದರಲ್ಲದೇ, ಚಾಲಕರು ಮದ್ಯ ಸೇವಿಸಿ ವಾಹನ ಚಲಾಯಿಸಬೇಡಿ. ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ನಗರ ಡಿವೈಎಸ್‌ಪಿ. ನಾಗರಾಜ್‌, ನಗರ ವೃತ್ತ ನಿರೀಕ್ಷಕ ಆನಂದ್‌ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next