Advertisement

ನವ ಭಾರತ ನಿರ್ಮಿಸೋಣ

10:57 AM Aug 16, 2019 | Naveen |

ದಾವಣಗೆರೆ: ಪ್ರತಿಯೊಬ್ಬರು ನಾಡು, ದೇಶ ನನ್ನದು ಎಂಬ ಭಾವನೆಯೊಂದಿಗೆ ಸರ್ವತೋಮುಖ ಅಭಿವೃದ್ಧಿಯ ಹೊಸ ಭಾರತದ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ ಮನವಿ ಮಾಡಿದ್ದಾರೆ.

Advertisement

ಗುರುವಾರ ಜಿಲ್ಲಾ ಕ್ರೀಡಾಂಗಣದಲ್ಲಿ 73ನೇ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದ ಅವರು, ನಮ್ಮ ಹೆಮ್ಮೆಯ ರಾಷ್ಟ್ರಕವಿ ಕುವೆಂಪುರವರು ಹೇಳಿದಂತೆ, ನನ್ನದು ಭಾಷೆ, ನನ್ನದು ನಾಡು, ನನ್ನದು ದೇಶ… ಎಂಬ ಮನೋಭಾವ ಎಲ್ಲರೂ ಮೈಗೂಡಿಸಿಕೊಂಡು. ನನ್ನ ದೇಶ ಎಂಬ ಕಿಚ್ಚಿನೊಂದಿಗೆ ದೇಶದ ಅಭಿವೃದ್ಧಿ ಮಾಡೋಣ ಎಂದು ತಿಳಿಸಿದರು.

ಹರಪ್ಪ, ಮೊಹಿಂಜೋದಾರೋನಂತಹ ಪ್ರಾಚೀನ, ಉತ್ಕೃಷ್ಟ ಸಂಸ್ಕೃತಿ ಭಾರತೀಯರದ್ದು. ಅಂತಹ ಉನ್ನತ ಸಂಸ್ಕೃತಿಯ ಬಗ್ಗೆ ನಮ್ಮ ಯುವಜನಾಂಗಕ್ಕೆ ಸರಿಯಾಗಿ ತಿಳಿಸದೇ ಇರುವ ಕಾರಣಕ್ಕೆ ದೇಶಭಕ್ತಿ, ದೇಶದ ಬಗೆಗೆ ಬದ್ಧತೆ ಕಂಡು ಬರುತ್ತಿಲ್ಲ. ನಮ್ಮ ಯುವಜನಾಂಗಕ್ಕೆ ನಮ್ಮ ಭಾರತೀಯ ಸಂಸ್ಕೃತಿ, ಪರಂಪರೆ, ಭವ್ಯ ಇತಿಹಾಸ ತಿಳಿಸುವ ಮುಖೇನ ಅವರಲ್ಲೂ ದೇಶಭಕ್ತಿ ಮೂಡಿಸುವಂತಾಗಬೇಕು ಎಂದು ಆಶಿಸಿದರು.

ನಮ್ಮ ಮಕ್ಕಳು ವೈದ್ಯರು, ಇಂಜಿನಿಯರ್‌ ಆಗಬೇಕು ಎಂದು ಬಯಸುವ ಪೋಷಕರು ದೇಶದ ಇತಿಹಾಸ, ಸಂಸ್ಕೃತಿ, ಪರಂಪರೆ ಇತರೆ ಆಯಾಮಗಳ ಬಗ್ಗೆ ತಿಳಿಸುತ್ತಲೇ ಇಲ್ಲ. ವೈದ್ಯರು, ಇಂಜಿನಿಯರ್‌ ಮಾತ್ರವಲ್ಲ, ಇನ್ನೂ ಅನೇಕ ಕ್ಷೇತ್ರದಲ್ಲಿ ಮಕ್ಕಳು ಉನ್ನತ ಸ್ಥಾನಕ್ಕೆ ಏರುವಂತಾಗಬೇಕು. ಅಂತಹ ಪ್ರೇರಣೆ, ಪ್ರೋತ್ಸಾಹದಾಯಕ ವಾತಾರವರಣವನ್ನು ಪೋಷಕರು ಒದಗಿಸಿಕೊಡಬೇಕು ಎಂದು ಸಲಹೆ ನೀಡಿದರು.

ಸ್ವಾತಂತ್ರ್ಯಪೂರ್ವದಲ್ಲಿ ಭಾರತದಲ್ಲಿನ 565 ಸಂಸ್ಥಾನಗಳ ರಾಜ್ಯ, ರಾಜರು ನಡುವಿನ ದ್ವೇಷ, ಅಸೂಯೆಯನ್ನೇ ಪರಿಣಾಮಕಾರಿಯಾಗಿ ಬಳಸಿಕೊಂಡ ಬ್ರಿಟೀಷರು ದೇಶವನ್ನೇ ಆಳಿದರು. 1857ರಲ್ಲಿ ಮೊಟ್ಟ ಮೊದಲ ಬಾರಿಗೆ ಬ್ರಿಟೀಷ್‌ ವಿರೋಧಿ ಚಳವಳಿ ಪ್ರಾರಂಭವಾಯಿತು. ಲಕ್ಷಾಂತರ ಜನರ ಹೋರಾಟ, ಬಲಿದಾನದ ನಂತರ 1947ರ ಆ. 15 ರಂದು ಸ್ವಾತಂತ್ರ್ಯ ಪಡೆಯಲಾಯಿತು. ಆ ನಂತರ ಭಾರತ ಶಿಕ್ಷಣ, ಆರೋಗ್ಯ, ತಂತ್ರಜ್ಞಾನ… ಎಲ್ಲಾ ಆಯಾಮದಲ್ಲಿ ವಿಶ್ವವೇ ನಿಬ್ಬೆರಗಾಗುವಂತೆ ಅಭಿವೃದ್ಧಿ ಸಾಧಿಸುತ್ತಿದೆ. ಸೈಕಲ್ನಲ್ಲಿ ಉಪಗ್ರಹ ತೆಗೆದುಕೊಂಡು ಹೋಗುವ ಕಾಲದಲ್ಲಿದ್ದ ಭಾರತ ಬಾಹ್ಯಕಾಶ ಕ್ಷೇತ್ರದಲ್ಲಿ ಒಂದೇ ಕ್ಷಣಕ್ಕೆ 101 ಉಪಗ್ರಹ ಉಡಾವಣೆ ಮಾಡುವಷ್ಟು ಬೆಳೆದು ನಿಂತಿದೆ ಎಂದು ಶ್ಲಾಘಿಸಿದರು.

Advertisement

ಭಾರತ ಮುಂದುವರೆಯುತ್ತಿರುವ ದೇಶ ಎನ್ನಲಾಗುತ್ತದೆ. ಅಮೆರಿಕಾ ಭಾರತ ಮುಂದುವರೆದ ರಾಷ್ಟ್ರಗಳ ಪಟ್ಟಿಯಲ್ಲಿ ಇದೆ ಎಂದು ಹೇಳಿದೆ. ಏನೇ ಆಗಲಿ, ನಮ್ಮ ಮಕ್ಕಳಲ್ಲಿನ ಪ್ರತಿಭೆಯನ್ನ ಹೆಕ್ಕಿ ತೆಗೆದು, ಒಳ್ಳೆಯ ಅವಕಾಶ, ವಾತಾವರಣ ಕಲ್ಪಿಸಿಕೊಡುವ ಮೂಲಕ ಇನ್ನಷ್ಟು ಬಲಿಷ್ಠ, ಸಶಕ್ತ ಭಾರತ ನಿರ್ಮಾಣ ಮಾಡೋಣ ಎಂದು ತಿಳಿಸಿದರು.

ದಾವಣಗೆರೆ ಜಿಲ್ಲೆಯ ಸಹ ಅಭಿವೃದ್ಧಿ ಪಥದಲ್ಲಿದ್ದು, ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯನ್ನು ನಂಬರ್‌ ಒನ್‌ ಜಿಲ್ಲೆಯನ್ನಾಗಿ ಮಾಡುವ ಪ್ರಯತ್ನ ನಡೆದಿದೆ. ಕೈಗಾರಿಕೆ ವಲಯದಲ್ಲಿ ಉತ್ತಮ ಅಭಿವೃದ್ಧಿ ಆಗುತ್ತಿದೆ. ಒಟ್ಟು 1,850 ಕೈಗಾರಿಕೆ ನೋಂದಣಿಯಾಗಿವೆ. 505 ಕೋಟಿ ಬಂಡವಾಳ ಹೂಡಿಕೆಯಾಗಿದೆ. 13,200 ಜನರು ಕೆಲಸ ಪಡೆದಿದ್ದಾರೆ. ಇನ್ನೂ 15 ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಬರಲಿವೆ ಎಂದು ತಿಳಿಸಿದರು.

ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ದಾವಣಗೆರೆ ಜಿಲ್ಲೆಯ ಜನರ ನೆರವು ಅವಿಸ್ಮರಣೀಯ. ಜಿಲ್ಲಾಡಳಿತ ಸದಾ ಅಭಾರಿ ಆಗಿದೆ. ಜಿಲ್ಲೆಯ ಪ್ರಗತಿ ಮತ್ತು ಸ್ವಾತಂತ್ರ್ಯ ಹೋರಾಟದ ಹಾದಿಯನ್ನ ಸ್ಮರಿಸುತ್ತಾ ಪ್ರಸ್ತುತ ಸವಾಲುಗಳನ್ನ ಸಮರ್ಥವಾಗಿ ಸ್ವೀಕರಿಸುತ್ತಾ, ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಮೂಲಕ ದೇಶವನ್ನ ಬಲಪಡಿಸೋಣ ಎಂದು ಆಶಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ್‌, ಶಾಸಕ ಎಸ್‌.ಎ. ರವೀಂದ್ರನಾಥ್‌, ವಿಧಾನ ಪರಿಷತ್ತು ಸದಸ್ಯ ಕೆ. ಅಬ್ದುಲ್ ಜಬ್ಟಾರ್‌, ಜಿಪಂ ಅಧ್ಯಕ್ಷೆ ಶೈಲಜಾ ಬಸವರಾಜ್‌ ಇತರೆ ಜನಪ್ರತಿನಿಧಿ, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಬಸವರಾಜಪ್ಪ, ಶಿವಲಿಂಗಸ್ವಾಮಿ, ನೀಲಪ್ಪ, ಸಿದ್ದರಾಮಪ್ಪ, ಬಾಳೆಹೊಲದ ಮರುಳಸಿದ್ದಪ್ಪ, ಕಲ್ಯಾಣಪ್ಪ ನ್ಯಾಮತಿ ಅವರನ್ನು ಸನ್ಮಾನಿಸಲಾಯಿತು.

ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಇಲಾಖಾ ಸಿಬ್ಬಂದಿ ಅತ್ಯಾಕರ್ಷಕ ಪಥಸಂಚಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next