ದಾವಣಗೆರೆ: ರಾಜ್ಯದ್ಯಾಂತ ಲಕ್ಷಾಂತರ ಜನರಿಗೆ ವಂಚಿಸಿರುವ ಐಎಂಎ ಪ್ರಕರಣವನ್ನುಸಿಬಿಐ ತನಿಖೆಗೆ ವಹಿಸಬೇಕು ಎಂದು ಜಿಲ್ಲಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಎಸ್. ಅಬ್ದುಲ್ ಮಜೀದ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅತಿ ಹೆಚ್ಚಿನ ಬಡ್ಡಿ ನೀಡುವ ಆಸೆ, ಆಮಿಷವೊಡ್ಡಿ ಲಕ್ಷಾಂತರ ಜನರಿಂದ ಠೇವಣಿ ಪಡೆದು ವಂಚಿಸಿರುವ ಐಎಂಎ ಕಂಪನಿ ವಿರುದ್ಧ ದೂರು ಸಲ್ಲಿಕೆಯಾಗಿದ್ದರೂ ರಾಜ್ಯ ಸರ್ಕಾರ ಈವರೆಗೆ ಸೂಕ್ತ ಕ್ರಮ ತೆಗೆದುಕೊಂಡಿಲ್ಲ ಮತ್ತು ಪರಿಹಾರ ಕೊಡಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಹಾಗಾಗಿ ಐಎಂಎ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಐಎಂಎ ಪ್ರಕರಣವನ್ನು ಎಸ್‌ಐಟಿ ತನಿಖೆ ನಡೆಸುತ್ತಿದ್ದು ಯಾವ ಹಂತದಲ್ಲಿದೆ ಎಂಬುದೇ ಗೊತ್ತಾಗುತ್ತಿಲ್ಲ. ಐಎಂಎ ಯಿಂದ ವಂಚನೆಗೊಳಗಾದವರಲ್ಲಿ ಈವರೆಗೆ 8 ಜನರು ಸಾವನ್ನಪ್ಪಿದ್ದಾರೆ. ಆ ಎಲ್ಲಾ ಸಾವಿಗೆ ಐಎಂಎ ಕಾರಣ ಎಂದು ದೂರಿದರು.
ಖುದ್ದು ಐಎಂಎ ಕಂಪನಿ ಮಾಲೀಕ ಮನ್ಸೂರ್‌ಖಾನ್ ಸಿಡಿ ಬಿಡುಗಡೆ ಮಾಡಿ, ತನ್ನನ್ನು ಬಂಧಿಸುವಂತೆ ಕೋರಿಕೊಂಡರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದು ಸಾಕಷ್ಟು ಅನುಮಾನಕ್ಕೆ ಕಾರಣ ಆಗುತ್ತಿದೆ. ಈ ಪ್ರಕರಣದ ಹಿಂದೆ ರಾಜಕಾರಣಿಗಳು ಇರಬಹುದು ಎಂದೆನಿಸುತ್ತಿದೆ. ನ್ಯಾಯ ದೊರೆಯುವ ವಿಶ್ವಾಸ ಇಲ್ಲದಂತಾಗುತ್ತಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು. ಐಎಂಎ ವಂಚನೆ ಬಗ್ಗೆ ಪ್ರಧಾನ ಮಂತ್ರಿ ಅವರಿಗೆ ಫ್ಯಾಕ್ಸ್ ಮೂಲಕ ಪತ್ರ ಕಳುಹಿಸಲಾಗಿದೆ. ಎರಡು ದಿನಗಳಲ್ಲಿ ಉತ್ತರ ತಿಳಿಸಿ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಹ ಪ್ರತಿ ಕಳುಹಿಸಲಾಗಿದೆ. ಆದರೂ ಏನೂ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಐಎಂಎ ಕಂಪನಿಯ ದಾವಣಗೆರೆಯ ಗ್ಲೋಬಲ್ ಸ್ಕೂಲ್ಗೆ ಜು.1ರಂದು 11 ಲಕ್ಷ ವೇತನ ಬಂದಿದೆ. ಶಾಲಾ ಬಾಡಿಗೆಗೆ 90 ಸಾವಿರ ನೀಡಲಾಗಿದೆ. ಹಣ ಹೇಗೆ ಬಂದಿದೆ ಎನ್ನುವುದರ ಬಗ್ಗೆ ಪೊಲೀಸರು ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ನಸೀವುಲ್ಲಾ ಮಾತನಾಡಿ, ಐಎಂಎ ಕಂಪನಿ ಮಾಲೀಕ ಮನ್ಸೂರ್ ಖಾನ್ ಮೋಸ ಮಾಡಿ ಒಂದು ತಿಂಗಳು ಕಳೆಯುತ್ತಾ ಬಂದಿದ್ದರೂ ರಾಜ್ಯ ಸರ್ಕಾರ ಬಂಧಿಸುವಲ್ಲಿ ವಿಫಲವಾಗಿದೆ. ಸರ್ಕಾರದ ಮೇಲೆ ಭರವಸೆಯೇ ಇಲ್ಲದಂತಾಗಿದೆ. ಐಎಂಎ ಕಂಪನಿ ವಂಚನೆ ಪ್ರಕರಣವನ್ನು ತನಿಖೆಗೆ ಸಿಬಿಐಗೆ ವಹಿಸಬೇಕು. ಎಲ್ಲರಿಗೂ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಹಿರಿಯ ಮುಖಂಡ ಕೆ.ಎನ್.ಓಂಕಾರಪ್ಪ, ಉಮೇಶ್ ಪಾಟೀಲ್, ಸೈಯದ್ ಗೌಸ್, ಜಮೀರ್ ಅಹಮ್ಮದ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.