Advertisement

Davanagere; ತಾವರೆ ಹೂವು ಮುಡಿದು ಸಂಸತ್‌ ಪ್ರವೇಶಿಸುತ್ತೇನೆ: ಗಾಯತ್ರಿ ಸಿದ್ದೇಶ್ವರ

07:36 PM Mar 14, 2024 | Team Udayavani |

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಎಲ್ಲ ಜನರ ಆಶೀರ್ವಾದ, ಸಹಕಾರದಿಂದ ಗೆದ್ದೇ ಗೆಲ್ಲುವ ಮೂಲಕ ತಾವರೆ ಹೂವು ಮುಡಿದು ಸಂಸತ್‌ಗೆ ಪ್ರವೇಶಿಸುತ್ತೇನೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಹಿರಿಯರು, ಮುಖಂಡರು ದೇಶಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಇಲ್ಲಿಯವರೆಗೆ ಮನೆಯೇ ನನ್ನ ಕುಟುಂಬವಾಗಿತ್ತು. ಈಗ ನನಗೆ ದಾವಣಗೆರೆಯೇ ಕುಟುಂಬವಾಗಿದೆ. ಇಡೀ ಕ್ಷೇತ್ರದ ಜನರಿಗೆ ಎಲ್ಲ ರೀತಿಯಲ್ಲಿ ಸ್ಪಂದಿಸುವುದಾಗಿ ತಿಳಿಸಿದರು.

ಕಳೆದ 28 ವರ್ಷದಿಂದಲೂ ಕಾರ್ಯಕರ್ತರೊಂದಿಗೆ ಒಡನಾಟವಿದೆ.ನಮ್ಮ ಮಾವನವರು ಏಳು ವರ್ಷ, ಪತಿ ಸಿದ್ದೇಶ್ವರ್ 20 ವರ್ಷ ಸೇವೆ ಮಾಡಿದ್ದಾರೆ. ಚುನಾವಣ ಪ್ರಚಾರದ ಸಂದರ್ಭದಲ್ಲಿ ಎಲ್ಲ ಮನೆ ಗಳಿಗೆ ಹೋಗಿದ್ದೇನೆ. ಕಾರ್ಯಕರ್ತರ ಒಡನಾಟವಿದೆ. ಅದರಿಂದ ಸಕ್ರಿಯ ರಾಜಕಾರಣ ನನಗೇನು ಹೊಸದು ಅನಿಸುತ್ತಿಲ್ಲ ಎಂದರು.

ಟೀವಿ ನೋಡುತ್ತಿದ್ದಾಗ. ನನ್ನ ಹೆಸರು ಬರುತ್ತಿದ್ದಂತೆಯೇ ಖುಷಿಯಾಯಿತು. ಅಲ್ಲಿಯವರೆಗೆ ನನಗೆ ಟಿಕೆಟ್ ಸಿಗುತ್ತದೆ ಎಂದು ಅನಿಸಿಯೇ ಇರಲಿಲ್ಲ. ರಾಷ್ಟ್ರದ ನಾಯಕರು ನನಗೆ ಅವಕಾಶ ನೀಡಿದ್ದಾರೆ. ಯಾವುದೇ ಕಳಂಕ ಬಾರದಂತೆ ಎಲ್ಲರ ಸಹಕಾರದಿಂದ ಗೆದ್ದು ಬರಲಿದ್ದೇನೆ. ಪತಿಯ ಸಹಕಾರದಿಂದ ಎಲ್ಲ ಕೆಲಸ ಸಮರ್ಥವಾಗಿ ನಿಭಾಯಿಸುವೆ ಎಂದರು.

ಸಿದ್ದೇಶ್ವರ ಅವರೇನು ಎಲ್ಲಿಗೂ ಹೋಗುವುದೇ ಇಲ್ಲ. ಅವರು ಕ್ಷೇತ್ರದ ಜನರೊಂದಿಗೆ ಇದ್ದೇ ಇರುತ್ತಾರೆ. ಅವರು 20 ವರ್ಷಗಳ ಕಾಲ ಉತ್ತಮ ಕೆಲಸ ಮಾಡಿದ್ದಾರೆ. ಮುಂದೆ ಅವರ ಸಲಹೆ, ಸಹಕಾರ ಪಡೆದು ಕೆಲಸ ಮಾಡುತ್ತೇನೆ ಎಂದರು.

Advertisement

ಇಲ್ಲಿಯವರೆಗೆ ಮನೆ ವ್ಯವಹಾರ, ತೋಟ ನೋಡುವುದು ನನ್ನ ಕೆಲಸವಾಗಿತ್ತು. ಇದೀಗ ರಾಜಕೀಯಕ್ಕೆ ನಾನೇ ಬರುತ್ತಿದ್ದೇನೆ. ಈಗ ದೇಶ ಸೇವೆಗೆ ಬಿಟ್ಟಿದ್ದಾರೆ. ಸಣ್ಣ ಕುಟುಂಬದಿಂದ ಈಗ ದೊಡ್ಡ ಕುಟುಂಬಕ್ಕೆ ಪಾದಾರ್ಪಣೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಗೋ ಬ್ಯಾಕ್ ಸಿದ್ದೇಶ್ವರ… ಸಿದ್ದೇಶ್ವರ ಹಠಾವೋ… ದಾವಣಗೆರೆ ಬಚಾವೋ… ಎಂದೆಲ್ಲ ಹೋರಾಟ ಮಾಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ, ಈಗ ಅದರ ಬಗ್ಗೆ ಮಾತನಾಡಲಿಕ್ಕೆ ಆಗುವುದಿಲ್ಲ. ವಿರೋಧ ಎಲ್ಲಿಲ್ಲ ಹೇಳಿ? ದೇಶದಲ್ಲಿ ಎಲ್ಲ ಕಡೆ ವಿರೋಧ ಇದ್ದೇ ಇರುತ್ತದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next