Advertisement

ಜಲಶಕ್ತಿ ಸಾಕಾರಕ್ಕೆ ಸಹಕರಿಸಿ

12:07 PM Sep 04, 2019 | Naveen |

ದಾವಣಗೆರೆ: ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಜಲಮೂಲಗಳನ್ನು ಕಾಪಾಡಿ, ವೃದ್ಧಿಸುವಲ್ಲಿ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಎಲ್ಲ ಇಲಾಖೆಗಳು, ಸಾರ್ವಜನಿಕರು ಕೈಜೋಡಿಸಿ ಮಹಾತ್ವಾಕಾಂಕ್ಷಿ ಜಲಶಕ್ತಿ ಅಭಿಯಾನ ಯಶಸ್ವಿಗೊಳಿಸಬೇಕೆಂದು ಭಾರತ ಸರ್ಕಾರದ ಜಂಟಿ ನಿರ್ದೇಶಕರು ಹಾಗೂ ಜಲಶಕ್ತಿ ಅಭಿಯಾನದ ನೋಡಲ್ ಅಧಿಕಾರಿ ವಿಜಯಲಕ್ಷ್ಮಿ ೕ ಬಿದರಿ ಮನವಿ ಮಾಡಿದ್ದಾರೆ.

Advertisement

ಮಂಗಳವಾರ, ಜಲಶಕ್ತಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿರುವ ಜಗಳೂರು, ಚನ್ನಗಿರಿ ಮತ್ತು ದಾವಣಗೆರೆ ತಾಲೂಕುಗಳ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿ, ನಂತರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರ ಭಾಗದಲ್ಲಿ ಸೀವೇಜ್‌ ಟ್ರೀಟ್ಮೆಂಟ್ ಪ್ಲಾಂಟ್(ಎಸ್‌ಟಿಪಿ)ಮತ್ತು ಮಳೆಕೊಯ್ಲಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಯಾವುದಾದರೂ ಸಾಂಪ್ರದಾಯಿಕ ಮೂಲದ ಜಲ ಯೋಜನೆ ಯಶಸ್ವಿಯಾಗಿ ನಡೆಯುತ್ತಿದ್ದರೆ ಅದಕ್ಕೆ ಉತ್ತೇಜನ ನೀಡಬೇಕು. ಕೃಷಿ ವಿಜ್ಞಾನ ಕೇಂದ್ರಗಳ ಸಹಭಾಗಿತ್ವದೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು. ನಗರ ಸ್ಥಳೀಯ ಸಂಸ್ಥೆಗಳ ಮೂಲಕ ನಗರದ ತ್ಯಾಜ್ಯ ನೀರು ಮರುಬಳಕೆ ಮಾಡಿ ಉದ್ಯಾನ, ಸ್ವಚ್ಛತೆ ಕಾರ್ಯಗಳಿಗೆ ಬಳಸಿಕೊಳ್ಳಬೇಕು. ಮುಖ್ಯವಾಗಿ ನಗರ ಸ್ಥಳೀಯ ಸಂಸ್ಥೆಗಳು ಕಟ್ಟಡ ನಿರ್ಮಿಸಲು ಪರವಾನಗಿ ನೀಡುವಾಗ ಕಡ್ಡಾಯವಾಗಿ ಮಳೆಕೊಯ್ಲು ಅಳವಡಿಸಿಕೊಳ್ಳುವ ಷರತ್ತಿಗೊಳಪಟ್ಟು ನೀಡಬೇಕು. ಇದರ ಅಳವಡಿಕೆ ಬಗ್ಗೆ ಕಾಲ ಕಾಲಕ್ಕೆ ಸ್ವಯಂ ದೃಢೀಕರಣ ಪಡೆಯಬೇಕು ಎಂದು ಪಾಲಿಕೆ ಆಯುಕ್ತರಿಗೆ ಆದೇಶಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ್‌ ಜಿ.ಬೀಳಗಿ ಮಾತನಾಡಿ, ಜಿಲ್ಲೆಯಲ್ಲಿ ಜಲಶಕ್ತಿ ಯೋಜನೆ ಕುರಿತು ಒಂದು ಉತ್ತಮ ಮುನ್ನೋಟ ಹೊಂದಲಾಗಿದೆ. ನೀರಿನ ಸುಸ್ಥಿರತೆ ಮತ್ತು ಎಲ್ಲೆಡೆ ಹಸಿರೀಕರಣಗೊಳಿಸುವ ನಿಟ್ಟಿನಲ್ಲಿ ಐಇಸಿ ಸೇರಿದಂತೆ ಕೆಲಸಗಳು ಪ್ರಗತಿಯಲ್ಲಿವೆ. ಸ್ಥಳೀಯ ಸಂಸ್ಥೆಗಳಿಂದ ಈ ಕುರಿತು ಪ್ರಸ್ತಾವನೆ ಪಡೆದು, ಕ್ರಿಯಾ ಯೋಜನೆ ರಚಿಸಿ ಅನುಮೋದನೆಗೊಳಿಸಿ, ಯೋಜನೆ ಅನುಷ್ಠಾನದ ಉದ್ದೇಶ ಹೊಂದಲಾಗಿದೆ ಎಂದರು. ಈ ಅಭಿಯಾನದಡಿ ತಯಾರಾಗುವ ಕ್ರಿಯಾಯೋಜನೆಗಳಲ್ಲಿನ ಕಾಮಗಾರಿಗಳಿಗೆಂದು ಸರ್ಕಾರದಿಂದ ಪ್ರತ್ಯೇಕ ಅನುದಾನ ಇರುವುದಿಲ್ಲ. ತಮ್ಮ ತಮ್ಮ ಇಲಾಖೆ, ಸಂಸ್ಥೆಗಳಲ್ಲಿನ ಅನುದಾನದಲ್ಲೇ ಸರಿದೂಗಿಸಿಕೊಂಡು ಕಾಮಗಾರಿ ಕೈಗೊಂಡು ಜಲ ಸಂರಕ್ಷಣೆ ಮಾಡಬೇಕಿದೆ ಎಂದರು.

ನೋಡಲ್ ಅಧಿಕಾರಿಗಳ ಮುಂದಿನ ಭೇಟಿ ವೇಳೆಗೆ ಕ್ರಿಯಾಯೋಜನೆ ಅನುಮೋದನೆಗೊಳಿಸಿ ಕೆಲಸ ಆರಂಭಿಸುವುದಾಗಿ ಭರವಸೆ ನೀಡಿದ ಅವರು, ಜಿಲ್ಲಾ ಮಟ್ಟದ ಅಧಿಕಾರಿಗಳು ಮುಂದಿನ ಸಭೆಗಳಿಗೆ ತಮ್ಮ ಅಧಿಧೀನ ಅಧಿಕಾರಿಗಳನ್ನು ನಿಯೋಜಿಸದೇ ಖುದ್ದು ಪಾಲ್ಗೊಂಡು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸದಿದ್ದಲ್ಲಿ ಸೂಕ್ತ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು. ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಶರಣಪ್ಪ.ಬಿ ಮುದುಗಲ್, ಜಲಶಕ್ತಿಯ ಐದು ಮುಖ್ಯ ಕಾರ್ಯಕ್ರಮಗಳ ಸಂಬಂಧ ಮೂರು ತಾಲೂಕುಗಳಲ್ಲಿ ಕ್ರಿಯಾ ಯೋಜನೆ ಬಗ್ಗೆ ಮಾಹಿತಿ ನೀಡಿದರಲ್ಲದೆ, ಚನ್ನಗಿರಿ ಮತ್ತು ಜಗಳೂರಿನ ಹಲವೆಡೆ ಫಾರ್ಮ್ ಪಾಂಡ್‌ ಮತ್ತು ಗೋಕಟ್ಟೆಗಳನ್ನು ಈ ಅಭಿಯಾನದಡಿ ನಿರ್ಮಿಸಲಾಗಿದೆ. ಕೆಲವು ನಿರ್ಮಾಣ ಹಂತದಲ್ಲಿವೆ. ಇನ್ನೂ ಹಲವಾರು ಗ್ರಾಪಂ ಗಳಿಂದ ಪಟ್ಟಿ ತರಿಸಿಕೊಳ್ಳಲಾಗಿದೆ. ಜಲಶಕ್ತಿ ಅನುಷ್ಠಾನಕ್ಕೆ ಮೂರು ತಾಲೂಕುಗಳ ಗ್ರಾ.ಪಂ.ಗಳಲ್ಲಿ ವಿಶೇಷ ಗ್ರಾಮ ಸಭೆ ಕರೆದು ಮನವರಿಕೆ ಮಾಡಲಾಗಿದೆ ಎಂದರು.

Advertisement

ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಜಿಪಂ ವತಿಯಿಂದ ಈ ಹಿಂದೆ ಸ್ವಚ್ಛಮೇವ ಜಯತೇ ಎಂಬ ಕಾರ್ಯಕ್ರಮ ಮಾಡಿ ಪ್ರತಿ ಗ್ರಾಪಂ ಹಂತದಲ್ಲಿ ಹಸಿರೀಕರಣ ಮಾಡಲಾಗಿದೆ. ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗಿದೆ. ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಸಾಮಾನ್ಯವಾಗಿ ನರೇಗಾ ದೊಂದಿಗೆ ಈ ಕೆಲಸ ಆಗಬೇಕಿದ್ದು, ಈ ಕುರಿತು ಸ್ಥಳೀಯ ಸಂಸ್ಥೆಗಳಿಂದ ಕ್ರಿಯಾಯೋಜನೆ ರೂಪಿಸಿ ಅನುಮೋದನೆ ಆದಷ್ಟು ಶೀಘ್ರದಲ್ಲಿ ಪಡೆಯಬೇಕೆಂದರು.

ಎಲ್ಲ ಸ್ಥಳೀಯ ಸಂಸ್ಥೆಗಳು ಮತ್ತು ಇಲಾಖೆಗಳ ಕ್ರಿಯಾ ಯೋಜನೆ ರೂಪಿಸುವಾಗ ಜಲ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಜಲ ಮೂಲ ಅತ್ಯಂತ ಕಡಿಮೆ ಇರುವ ಪ್ರದೇಶಗಳಲ್ಲಿ ಮುಂದಿನ ಸಾಲಿನ ಹೊತ್ತಿಗೆ ಉತ್ತಮ ಕಾರ್ಯಕ್ರಮಗಳನ್ನು ಕೈಗೊಂಡು ಜಲಮೂಲ ವೃದ್ಧಿಸಬೇಕು. ಈ ನಿಟ್ಟಿನಲ್ಲಿ ಜಲಶಕ್ತಿ ಅಭಿಯಾನ ಯಶಸ್ವಿಗೊಳಸುವಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲೆಯ ಎಲ್ಲ ಅಧಿಕಾರಿ ವರ್ಗದವರು ಕೈಜೋಡಿಸಬೇಕೆಂದು ಸೂಚಿಸಿದ ನೋಡಲ್ ಅಧಿಕಾರಿ, ಅಧಿಕಾರಿಗಳ ಗೌಪ್ಯತಾ ವರದಿ ಬರೆಯುವಾಗ ಜಲಶಕ್ತಿ ಅಭಿಯಾನದಲ್ಲಿ ಉತ್ತಮವಾಗಿ ಪಾಲ್ಗೊಂಡವರಿಗೆ ಹೆಚ್ಚಿನ ಮಾನ್ಯತೆ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಡಿಡಿಪಿಐ ಪರಮೇಶ್ವರಪ್ಪ ಮಾತನಾಡಿ, ಮೂರು ತಾಲೂಕಗಳ 40 ಸರ್ಕಾರಿ ಶಾಲೆಗಳಲ್ಲಿ ಬೋರ್‌ವೆಲ್ ರಿಚಾರ್ಜ್‌ ಮತ್ತು 46 ಶಾಲೆಗಳಲ್ಲಿ ಮಳೆಕೊಯ್ಲು ಅಳವಡಿಸಲು ಯೋಜನೆ ರೂಪಿಸಲಾಗಿದ್ದು, ಶಾಲಾ ಅನುದಾನದೊಂದಿಗೆ ನರೇಗಾದಡಿ ಅನುದಾನದ ದೊರೆತರೆ ಕೆಲಸ ಪ್ರಾರಂಭಿಸಲಾಗುವುದು ಎಂದರು.

ಆಗ, ನೋಡಲ್ ಅಧಿಕಾರಿ ವಿಜಯಲಕ್ಷ್ಮಿ ಬಿದರಿ ಪ್ರತಿಕ್ರಿಯಿಸಿ, ಶಾಲೆಗಳಲ್ಲಿ ಮಳೆಕೊಯ್ಲು ಉತ್ತಮ ಕಾರ್ಯಕ್ರಮವಾಗಿದ್ದು, ಶಾಲೆಯ ಉಳಿಕೆ ಅನುದಾನದೊಂದಿಗೆ ನರೇಗಾದಡಿ ಅವಕಾಶ ಒದಗಿಸಿ ಜಿ.ಪಂ. ವತಿಯಿಂದ ಸಹಕರಿಸುವಂತೆ ತಿಳಿಸಿದರಲ್ಲದೆ, ಪ್ರಸ್ತುತ ಜಲಶಕ್ತಿ ಯೋಜನೆಯ ಅನುಷ್ಠಾನದ ಮೂಲಕ ಮುಂದಿನ ಪೀಳಿಗೆಗೆ ಜಲ ಸಂರಕ್ಷಿಸಬೇಕಾಗಿದೆ. ಅದಕ್ಕಾಗಿ ಎಲ್ಲಾ ಇಲಾಖೆಯವರು ಕಡ್ಡಾಯವಾಗಿ ಸೋಮವಾರದ ವೇಳೆಗೆ ಕ್ರಿಯಾಯೋಜನೆ ರೂಪಿಸಿ, ಇನ್ನೆರೆಡು ತಿಂಗಳಲ್ಲಿ ಅನುಷ್ಠಾನಗೊಳಿಸಲು ಸೂಚಿಸಿದರು.

ಸಭೆಯಲ್ಲಿ ಬ್ಲಾಕ್‌ ನೋಡಲ್ ಅಧಿಕಾರಿಗಳಾದ ವಿಶಾಲ್ ಸಿಂಗ್‌, ದೇವಿಕ್‌ ರಾಜ್‌, ಗಿರೀಶ್‌, ಎಸಿ ಬಿ.ಟಿ.ಕುಮಾರಸ್ವಾಮಿ, ಡಿಯುಡಿಸಿ ಯೋಜನಾ ನಿರ್ದೇಶಕಿ ನಜ್ಮಾ, ಪಾಲಿಕೆ ಆಯುಕ್ತ ಮಂಜುನಾಥ್‌ ಬಳ್ಳಾರಿ, ಶಿವಾನಂದ ಕುಂಬಾರ್‌, ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next