Advertisement

ಏರ್‌ಪೋರ್ಟ್‌ ಮೀರಿಸಲಿದೆ ರೈಲ್ವೇ ನಿಲ್ದಾಣ

11:53 AM Oct 18, 2019 | Naveen |

ದಾವಣಗೆರೆ: ಏರ್‌ಫೋರ್ಟ್‌ಗಿಂತಲೂ ಸುಂದರವಾಗಿ ದಾವಣಗೆರೆ ರೈಲ್ವೆ ನಿಲ್ದಾಣ ನಿರ್ಮಿಸಲಾಗುವುದು ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದ್ದಾರೆ.

Advertisement

ಹೊಸಪೇಟೆ-ಹರಿಹರ ರೈಲು ಸಂಚಾರಕ್ಕೆ ಗುರುವಾರ ಬೆಳಿಗ್ಗೆ ಹೊಸಪೇಟೆಯಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ, ಅದೇ ರೈಲಿನಲ್ಲಿ ಮಧ್ಯಾಹ್ನ 4.45ಕ್ಕೆ ದಾವಣಗೆರೆಗೆ ಆಗಮಿಸಿ, ನಗರದಲ್ಲಿ ನಿರ್ಮಿಸಲಾಗುತ್ತಿರುವ ರೈಲ್ವೆ ನಿಲ್ದಾಣದ ಹೊಸ ಕಟ್ಟಡದ ಕಾಮಗಾರಿ ವೀಕ್ಷಣೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆಯಲ್ಲಿ ಅತ್ಯಂತ ಸುಂದರವಾದ ರೈಲ್ವೆ ನಿಲ್ದಾಣ ನಿರ್ಮಿಸಿ, ಸಾರ್ವಜನಿಕರಿಗೆ ಅನುಕೂಲವಾಗಲು ಎಲ್ಲಾ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ದಾವಣಗೆರೆಯಲ್ಲಿ ಅಂಡರ್‌ ಪಾಸ್‌, ರೈಲ್ವೆ ಮೇಲ್ಸೇತುವೆ ಸೇರಿದಂತೆ ಜನರಿಗೆ ಅನುಕೂಲವಾಗುವಂತಹ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ಸಣ್ಣ ಪುಟ್ಟ ಸಮಸ್ಯೆಗಳೇನೇ ಇದ್ದರೂ ಅವುಗಳನ್ನು ಬಗೆಹರಿಸಿ, ರೈಲ್ವೆ ಇಲಾಖೆಯಿಂದ ವಾಣಿಜ್ಯ ನಗರಿ ದಾವಣಗೆರೆಗೆ ಎಲ್ಲಾ ಸವಲತ್ತುಗಳನ್ನು ಕಲ್ಪಿಸಲಾಗುವುದು ಎಂದು ಅವರು ಹೇಳಿದರು.

ರೈಲ್ವೆ ಇಲಾಖೆ ಸುರಕ್ಷತೆ, ಸಮಯ ಪಾಲನೆ, ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಮುಂದಿನ 10 ವರ್ಷಗಳಲ್ಲಿ 50 ಲಕ್ಷ ಕೋಟಿ ರೂ. ಬಂಡವಾಳ ಹೂಡಲಿದೆ. ರೈಲ್ವೆ ವಲಯ ಜನರ ಜೀವನಾಡಿ. ರೈಲಿನಲ್ಲಿ ಜನಸಾಮಾನ್ಯರು, ಬಡವರು, ವಿದ್ಯಾರ್ಥಿಗಳು, ರೈತರು ಹೆಚ್ಚಾಗಿ ಪ್ರಯಾಣಿಸುವುದರಿಂದ ಅವರಿಗೆ ಏನೇನು ಸವಲತ್ತುಗಳು ಬೇಕೋ ಅವುಗಳನ್ನು ಒದಗಿಸಲು ಒತ್ತು ನೀಡಲು ಸಿದ್ಧವಿದೆ ಎಂದು ಸಚಿವರು ಹೇಳಿದರು.

ಹಳ್ಳಿಗಳಿಂದ ಸಣ್ಣ ಸಣ್ಣ ನಗರ, ತಾಲೂಕು ಹಾಗೂ ದೊಡ್ಡ ದೊಡ್ಡ ನಗರಗಳಿಗೆ ಸಂಪರ್ಕ ಕಲ್ಪಿಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಯಶವಂತಪುರದಿಂದ ತುಮಕೂರುವರೆಗೆ ರೈಲು ಸಂಚಾರ ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದರು ದಾವಣಗೆರೆ-ತುಮಕೂರು ನೇರ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಕೆಲವೆಡೆ ಜಮೀನು ಸ್ವಾಧೀನದ ಸಮಸ್ಯೆ ಇದೆ.

Advertisement

ಇತ್ತೀಚೆಗೆ ಸಿರಿಗೆರೆಯಲ್ಲಿ ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಈ ಬಗ್ಗೆ ಮಾತನಾಡಿದ್ದೇನೆ. ಈ ಭಾಗದ ಸಂಸದರೊಂದಿಗೆ ಚರ್ಚಿಸಿ, ಜಮೀನು ಸ್ವಾಧೀನ ಪ್ರಕ್ರಿಯೆ ಮುಗಿದ ತಕ್ಷಣ ಕೆಲಸ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಹಿರಿಯರು, ರೈಲ್ವೆ ಹೋರಾಟ ಸಮಿತಿಯವರು, ಜನಪ್ರತಿನಿಧಿಗಳು ಹಾಗೂ ಆ ಭಾಗದ ಜನರ 25 ವರ್ಷಗಳ ಹೋರಾಟ ಫಲವಾಗಿ ಹೊಸಪೇಟೆ-ಕೊಟ್ಟೂರು ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿದೆ. ರೈಲು ಹೊಸಪೇಟೆಯಿಂದ ಕೊಟ್ಟೂರು, ಹರಪನಹಳ್ಳಿ, ಹರಿಹರ ಮಾರ್ಗವಾಗಿ ದಾವಣಗೆರೆ ತಲುಪಲಿದೆ ಎಂದು ಸಚಿವರು ಹೇಳಿದರು.

ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್‌, ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ, ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್‌.ಎ.ರವಿಂದ್ರನಾಥ್‌, ನೈರುತ್ಯ ರೈಲ್ವೆ ಮಹಾಪ್ರಬಂಧಕ ಎ.ಕೆ.ಸಿಂಗ್‌, ಮೈಸೂರು ವಿಭಾಗದ ಎಆರ್‌ಎಂ ಅಪರ್ಣ ಗರ್ಗ್‌, ಇತರರು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next