ದಾವಣಗೆರೆ: ಸೋಮವಾರ ಮತ್ತೆ ಸುರಿದ ಭಾರೀ ಮಳೆಗ ದಾವಣಗೆರೆ ತಾಲೂಕಿನ ಪುಟಗನಾಳ್ ಗ್ರಾಮದಲ್ಲಿ ಮನೆ ಗೋಡೆ ಕುಸಿದ ಪರಿಣಾಮ 45 ವರ್ಷದ ಪೀರಿಬಾಯಿ ಮಹಿಳೆಯೊಬ್ಬರು ಬಲಿಯಾಗಿದ್ದಾರೆ.
ಹಲವಾರು ಕಡೆ ಮನೆ, ಹೊಲ-ಗದ್ದೆಗಳಿಗೆ ನೀರು ನುಗ್ಗಿದೆ. ಕೆಲವಾರು ಕಡೆ ರಸ್ತೆ ಸಂಪರ್ಕ ಕಡಿತಗೊಂಡು ಜನರು ತೀವ್ರ ತೊಂದರೆ ಅನುಭವಿಸಿದರು. ದಾವಣಗೆರೆ ತಾಲೂಕಿನ ಆನಗೋಡು, ಮಾಯಕೊಂಡ, ಹುಚ್ಚವ್ವನಹಳ್ಳಿ, ಬಸಾಪುರ, ಲೋಕಿಕೆರೆ, ಅಣಜಿ, ಮಳಲ್ಕೆರೆ, ಕೋಲ್ಕುಂಟೆ ಇತರೆ ಗ್ರಾಮಗಳಲ್ಲಿ ಮನೆಗಳು ಭಾಗಶಃ ಹಾನಿಗೊಳಗಾಗಿದೆ. ಮಾಯಕೊಂಡ ಹೋಬಳಿಯಲ್ಲಿ 500 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿನ ಮೆಕ್ಕೆಜೋಳ. ರಾಗಿ, ಜೋಳ ಇತರೆ ಬೆಳೆ ಜಲಾವೃತ್ತಗೊಂಡಿವೆ.
ಹರಿಹರ ತಾಲೂಕಿನ ಚಿಕ್ಕಬಿದರಿ-ಸಾರಥಿ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹರಪನಹಳ್ಳಿ ರಸ್ತೆಯ ಕರಲಹಳ್ಳಿ ಬಳಿ ರಸ್ತೆ ಮೇಲೆ ಸಾಕಷ್ಟು ಪ್ರಮಾಣದಲ್ಲಿ ನೀರು ನಿಂತಿತ್ತು. ಆದರೆ, ವಾಹನ ಸಂಚಾರಕ್ಕೆ ಯಾವುದೇ ಅಡಚಣೆ ಆಗಲಿಲ್ಲ. ದಾವಣಗೆರೆಯಿಂದ ಹರಿಹರದ ಮೂಲಕ ತುಂಗಭದ್ರಾ ನದಿ ಸೇರುವ ಹಿರೇಹಳ್ಳ ಉಕ್ಕಿ ಹರಿಯುತ್ತಿರುವ ಪರಿಣಾಮ ಅಕ್ಕಪಕ್ಕದ ಹೊಲಗಳಿಗೆ ನೀರು ನುಗ್ಗಿದೆ. ಹರಿಹರದ ಬೆಂಕಿನಗರ, ಕಾಳಿದಾಸ ನಗರದ ಅನೇಕ ಭಾಗದ ಮನೆಗಳಿಗೆ ಸೋಮವಾರವೂ ನೀರು ನುಗ್ಗಿದ ಪರಿಣಾಮ ಜನರು ಮತ್ತೆ ತತ್ತರಿಸಿ ಹೋದರು. ಸತತ ಎರಡು ದಿನಗಳ ಕಾಲ ಮಳೆಯ ನೀರು ನುಗ್ಗಿದ್ದರಿಂದ ಸಾಕಷ್ಟು ಸಮಸ್ಯೆಗೆ ಸಿಲುಕಿದರು.
ಹೊನ್ನಾಳಿ ಪಟ್ಟಣದ ತಾಲೂಕು ಪಂಚಾಯತಿ ಎದುರು ಮನೆಯೊಂದು ಸಂಪೂರ್ಣ ಧರಶಾಹಿಯಾಗಿದ್ದು ಮನೆಯಲ್ಲಿದ್ದ ತಾಹೀರಾಬಾನು ಪವಾಡ ಸದೃಶ್ಯ ರೀತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕತ್ತಿಗೆ, ಆರುಂಡಿ, ಕೆಂಚಿಕೆರೆ, ಕುಂದೂರು, ಕೂಲಂಬಿ, ಸಾಸ್ವೇಹಳ್ಳಿ… ಒಳಗೊಂಡಂತೆ ಅನೇಕ ಕಡೆ ಹೊಲ-ಗದ್ದೆಗಳಿಗೆ ನೀರು ನುಗ್ಗಿದ ಪರಿಣಾಮ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. 63ಕ್ಕೂ ಹೆಚ್ಚಿನ ಮನೆಗಳಿಗೆ ಹಾನಿಯಾಗಿದೆ. ಚನ್ನಗಿರಿ ತಾಲೂಕಿನ ದೊಡ್ಡೇರಿಕಟ್ಟೆ ಇತರೆ ಭಾಗದಲ್ಲಿ ಮಳೆ ನೀರು ನುಗ್ಗಿದ ಪರಿಣಾಮ ಬೆಳೆಗಳು ಹಾನಿಯಾಗಿದೆ. ಸಂತೇಬೆನ್ನೂರು- ಕಾಕನೂರು ಮಧ್ಯೆದಲ್ಲಿ ಹರಿಯುವ ಹಿರೇಹಳ್ಳ ಭೋರ್ಗರೆದು ಹರಿದ ಪರಿಣಾಮ ಹೊಲ- ಗದ್ದೆಗಳಲ್ಲಿ ಸಾಕಷ್ಟು ಪ್ರಮಾಣದ ನೀರು ನಿಂತಿದೆ.
ಬೆಳೆ ಕಳೆದುಕೊಳ್ಳುವ ಆತಂಕ ರೈತಾಪಿ ವರ್ಗದಲ್ಲಿದೆ. ಜಗಳೂರು ತಾಲೂಕಿನ ಮಾಳಮ್ಮನಹಳ್ಳಿ, ಮುಸ್ಟೂರು, ದಿದ್ದಿಗೆ, ತಾರೇಹಳ್ಳಿ ಒಳಗೊಂಡಂತೆ ಇತರೆಡೆ 8 ಮನೆಗಳಿಗೆ ಹಾನಿಯಾಗಿದೆ. ಭಾರೀ ಮಳೆಯಿಂದ ತೋರಣಗಟ್ಟೆ ಮತ್ತು ಅರಿಶಿಣಗುಂಡಿಯ ನಡುವೆ ರಸ್ತೆ ಸಂಪರ್ಕ ಕಡಿತಗೊಂಡಿತ್ತು.