ದಾವಣಗೆರೆ: ಮಹಿಳೆಯರು ಭಾರತೀಯ ಸಂಸ್ಕೃತಿ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಬುಧವಾರ ಹರಜಾತ್ರಾ ಮಹೋತ್ಸವದ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ಇಂದಿನ ಆಧುನಿಕ, ಫ್ಯಾಷನ್, ಕಂಪ್ಯೂಟರ್, ತಂತ್ರಜ್ಞಾನ ಯುಗದಲ್ಲಿ ಮಹಿಳೆಯರು ಭಾರತೀಯ ಸಂಸ್ಕೃತಿ ಮರೆತು ಪಾಶ್ಚಾತ್ಯ ಸಂಸ್ಕೃತಿ ಮೈಗೂಡಿಸಿಕೊಳ್ಳುತ್ತಿದ್ದಾರೆ. ಆದರೆ, ಪಾಶ್ಚಾತ್ಯ ಮಹಿಳೆಯರು ಭಾರತೀಯ ಸಂಸ್ಕೃತಿ ಅನುಸರಣೆ ಮಾಡುವುದು ಕಂಡು ಬರುತ್ತಿದೆ. ಹಾಗಾಗಿ ನಮ್ಮ ಸಂಸ್ಕೃತಿ ಉಳಿಸಿ, ಬೆಳಸುವ ಕಾರ್ಯದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದರು.
ಹೆಣ್ಣು ಮತ್ತು ಗಂಡು ಸಮಾಜದ ಕಣ್ಣು. ಇಬ್ಬರಲ್ಲಿ ಯಾರೂ ಉತ್ಛರಲ್ಲ ಮತ್ತು ನೀಚರಲ್ಲ. ಇಬ್ಬರು ಸರಿ ಸಮಾನರು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಸಮಾನತೆ ನೀಡಿದವರು ವಿಶ್ವ ಗುರು ಬಸವಣ್ಣ. ಆಗ ನೀಡಿದ ಸಮಾನತೆಯ ಫಲವಾಗಿಯೇ ಇಂದು ಮಹಿಳೆಯರು ವಿವಿಧ ಕ್ಷೇತ್ರದಲ್ಲಿ ಕಂಡು ಬರುತ್ತಿದ್ದಾರೆ. ಯಶಸ್ವಿಯಾಗಿ ಸಾಧನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಹೆಣ್ಣು ಮಗು ಬೇಡ. ಹೆಣ್ಣು ಮಗು ಹುಟ್ಟಿತೆಂದರೆ ಪೀಡೆ ಎಂದುಕೊಳ್ಳುವರು ಇದ್ದಾರೆ. ಗಂಡು ಹುಟ್ಟಿದರೆ ಪೇಡಾ… ಹಂಚುವವರು ಇದ್ದಾರೆ. ಇಂತಹ ಜ್ವಲಂತ ಸಮಸ್ಯೆಗಳ ನಡುವೆಯೂ ಮಹಿಳೆಯರು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಅತ್ಯಾಚಾರ, ದೌರ್ಜನ್ಯದ ವಿರುದ್ಧ ಹೋರಾಟ ಮಾಡಬೇಕು. ನಮ್ಮ ಸನಾತನ ಭಾರತೀಯ ಪರಂಪರೆ, ಸಂಸ್ಕೃತಿಗೆ ಉಳಿಸಿ, ಬೆಳೆಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ವೀರ ವೀರಾಗ್ರಣಿ, ವೈರಾಗ್ಯದ ನಿಧಿ ಅಕ್ಕಮಹಾದೇವಿ ಅರಮನೆ, ವೈಭೋಗದ ಜೀವನ ತೊರೆದು, ಆಧ್ಯಾತ್ಮಿಕ ಬೆಳಕು ನೀಡಿದವರು. ಬ್ರಿಟಿಷರ ವಿರುದ್ಧ ಮೊದಲ ಬಾರಿಗೆ ಮಹಿಳಾ ಸೈನ್ಯ ಕಟ್ಟಿದ ಕೆಳದಿ ಚನ್ನಮ್ಮ, ವೀರ ರಾಣಿ ಚನ್ನಮ್ಮ ನಮ್ಮ ಸಮಾಜದ ಮಹಾನ್ ಸಾಧಕಿಯರು. ಅಂತಹವರ
ಮಾರ್ಗದರ್ಶನದಲ್ಲಿ ಸಮಾಜದ ಮಹಿಳೆಯರು ಮುಂದುವರೆಯಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲಾ ಸೌಲಭ್ಯಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮಹಿಳೆಯರು, ಮಕ್ಕಳು, ಹಿರಿಯರು ಮತ್ತು ವಿಕಲ ಚೇತನರಿಗೆ ಸೌಲಭ್ಯಗಳನ್ನು ಒದಗಿಸುವ ಇಲಾಖೆ ತಮ್ಮದು. ಪ್ರತಿ ಮನೆಗೆ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.