Advertisement

ಗ್ರಾಪಂ ಸದಸ್ಯರ ಮುಂದುವರಿಕೆಗೇ ಹೆಚ್ಚಿನ ಒಲವು

06:00 PM May 25, 2020 | Naveen |

ದಾವಣಗೆರೆ: ಎಡೆಬಿಡದೆ ಕಾಡುತ್ತಿರುವ ಮಹಾಮಾರಿ ಕೋವಿಡ್ ವೈರಸ್‌ ಆರ್ಭಟ, ಬಿರು ಬೇಸಿಗೆ, ಮುಂಗಾರು ಹಂಗಾಮಿನ ಪ್ರಾರಂಭ. ಹೀಗೆ ಹಲವಾರು ವಾಸ್ತವಿಕ ಅಂಶಗಳ ಆಧರಿಸಿ ಗ್ರಾಮ ಪಂಚಾಯತ್‌ ಚುನಾವಣೆ ಸದ್ಯಕ್ಕೆ ಬೇಡ, ಈಗಿರುವ ಸದಸ್ಯರನ್ನೇ ಮುಂದುವರೆಸಿ ಎಂಬ ಕೂಗು ಪ್ರಬಲವಾಗಿ ಕೇಳಿ ಬರುತ್ತಿದೆ.

Advertisement

ಪಂಚಾಯತ್‌ರಾಜ್‌ ವ್ಯವಸ್ಥೆಯಲ್ಲಿ ಅತೀ ಪ್ರಮುಖ ಹಂತ ಗ್ರಾಮ ಪಂಚಾಯತ್‌ಗಳಿಗೆ 2015ರ ಜೂ.2 ರಂದು ಚುನಾವಣೆ ನಡೆದಿತ್ತು. ಕಾಲಾವಧಿ ಮುಗಿದಿದ್ದು ಕೋವಿಡ್,  ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಚುನಾವಣೆ ನಡೆದಿಲ್ಲ. ಈಗಿನ ಪರಿಸ್ಥಿತಿಯ ಅವಲೋಕಿಸಿದರೆ ಚುನಾವಣೆ ಬೇಡ ಎಂಬುದು ಹಲವಾರು ಗ್ರಾಮ ಪಂಚಾಯತ್‌ ಸದಸ್ಯರು, ಗ್ರಾಮಸ್ಥರ ಅಭಿಪ್ರಾಯ. ಕೋವಿಡ್ ವೈರಸ್‌ ನಿಯಂತ್ರಣದ ಹಿನ್ನೆಲೆಯಲ್ಲಿ ಮಾ. 25 ರಿಂದ ಜಾರಿಯಲ್ಲಿರುವ ಲಾಕ್‌ಡೌನ್‌ನ ಪರಿಣಾಮ ಗ್ರಾಮೀಣ ಭಾಗದಲ್ಲಿ ಉಂಟಾಗಿದೆ. ಹೊನ್ನಾಳಿ ತಾಲೂಕಿನ ಮಾದೇನಹಳ್ಳಿ, ಚನ್ನಗಿರಿ ತಾಲೂಕಿನ ಕೆರೆಬಿಳಚಿ ಹೊರತುಪಡಿಸಿದರೆ ಹಳ್ಳಿಗಳಲ್ಲಿ ಕೋವಿಡ್ ಕಾಣಿಸಿಕೊಂಡಿಲ್ಲ ಎಂಬುದು ನೆಮ್ಮದಿಯ ವಿಚಾರ. ಗ್ರಾಮ ಪಂಚಾಯತ್‌ ಸದಸ್ಯರು, ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಾದಿಯಾಗಿ ಕೋವಿಡ್ ವಿರುದ್ಧದ ಸಮರದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಚುನಾವಣೆ ನಡೆಸುವುದು ಸಾಧುವೇ ಎಂಬ ಪ್ರಶ್ನೆಯೂ ಇದೆ.

ಗ್ರಾಮ ಪಂಚಾಯತ್‌ ಚುನಾವಣೆ ಪಕ್ಷಾತೀತವಾದುದು. ಪ್ರತ್ಯಕ್ಷವಾಗಿ ಪಕ್ಷಗಳ ಮಾತೇ ಇರುವುದಿಲ್ಲ. ಹಾಗಾಗಿ ಗ್ರಾಮಗಳಲ್ಲಿ ಪಕ್ಷಕ್ಕಿಂತಕಲೂ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸು ಇತರೆ ಅಂಶಗಳು ಅತೀ ಹೆಚ್ಚಿನ ಪಾತ್ರ ವಹಿಸುತ್ತಿವೆ. ಕೋವಿಡ್ ತಡೆಗಟ್ಟಲು ಗ್ರಾಮ ಪಂಚಾಯತ್‌ ಸದಸ್ಯರು ಪಕ್ಷಾತೀತವಾಗಿ ಶ್ರಮಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಏನಾದರೂ ಚುನಾವಣೆ ಎಂದಾದರೆ ಕೋವಿಡ್ ವಿರುದ್ಧದ ಸೆಣಸಾಡುವರು ಜವಾಬ್ದಾರಿ ಯಾರದ್ದು ಎಂಬ ಪ್ರಶ್ನೆಯೂ ಉದ್ಭವವಾಗಲಿದೆ.

ಗ್ರಾಮ ಪಂಚಾಯತ್‌ಗಳ ಅಧಿಕಾರಾವಧಿ ಮುಗಿದಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಸಬೇಕು ಎನ್ನುವುದು ಸರಿ. ಆದರೆ ಪರಿಸ್ಥಿತಿ ತಿಳಿಯಾಗಿಲ್ಲ. ಕೋವಿಡ್ ಎಂಬ ಮಹಾಮಾರಿ ಎಲ್ಲಾ ಕಡೆ ಕಾಣಿಸಿಕೊಳ್ಳುತ್ತಿದೆ. ಇನ್ನು ಚುನಾವಣೆ ಎಂದರೆ ಹಲವಾರು ವಿಚಾರಕ್ಕೆ ಸಿಟಿಗಳಿಗೆ ಹೋಗಿ ಬರಬೇಕು. ಮನೆ ಮನೆ, ಗಲ್ಲಿ, ಓಣಿ, ಬೀದಿಯಲ್ಲಿ ಪ್ರಚಾರ ಮಾಡಬೇಕಾಗುತ್ತದೆ. ಜನರು, ಅಧಿಕಾರಿ ವರ್ಗವೂ ಓಡಾಡಬೇಕಾಗುತ್ತದೆ. ಪಕ್ಷದ ಮುಖಂಡರು ಸಹ ಚುನಾವಣಾ ಕಾರ್ಯಕ್ಕೆ ಅಡ್ಡಾಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಏನಾದರೂ ಹೆಚ್ಚು ಕಡಿಮೆ ಆದಲ್ಲಿ ಏನು ಗತಿ. ಈಗ ನೆಮ್ಮದಿಯಾಗಿರುವ ಹಳ್ಳಿಗಳಲ್ಲಿ ಏನಾದರೂ ಕೊರೊನಾ ವಕ್ಕರಿಸಿದರೆ ಎಂಬ ಆತಂಕ ಅನೇಕರದ್ದಾಗಿದೆ.

ಈಗಾಗಲೇ ದಾವಣಗೆರೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಭರ್ಜರಿಯಾಗಿಯೇ ಕಾಲಿಟ್ಟಿದೆ. ಬಿತ್ತನೆ ಕಾರ್ಯ ಚಾಲನೆ ನೀಡಲಾಗುತ್ತಿದೆ. ಕೃಷಿ ಚಟುವಟಿಕೆಯ ಅತೀ ಪ್ರಮುಖವಾದ ಸಂದರ್ಭದಲ್ಲಿ ಚುನಾವಣೆ ನಡೆದರೂ ಜನರು ಅಷ್ಟಾಗಿ ಆಸಕ್ತಿ ತೋರುವುದಿಲ್ಲ. ಏಕೆಂದರೆ ಹೊಲ-ಗದ್ದೆಯಲ್ಲಿನ ಕೆಲಸವೇ ಮುಖ್ಯವಾಗುತ್ತದೆ ಹೊರತು ಚುನಾವಣೆ ಅಲ್ಲ. ಏನೋ ಚುನಾವಣೆ ಮಾಡಬೇಕು ಎನ್ನುವಂತಾಗುತ್ತದೆ. ಇವೆಲ್ಲವನ್ನೂ ನೋಡಿಕೊಂಡು ಈಗ ಚುನಾವಣೆ ಮಾಡದೇ ಇರುವುದು ಒಳ್ಳೆಯದು ಎಂಬ ಮಾತು ಸಹ ಕೇಳಿ ಬರುತ್ತಿವೆ.

Advertisement

ರಾಜ್ಯ ಸರ್ಕಾರ ತಾಲೂಕು ಮಟ್ಟದ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸುವ ಮಾತುಗಳಾಡುತ್ತಿದೆ. ವಿಪಕ್ಷ ಕಾಂಗ್ರೆಸ್‌ ಈಗಿರುವ ಸದಸ್ಯರನ್ನೇ ಮುಂದುವರಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದೆ. ಸದ್ಯ ಚುನಾವಣೆ ಬೇಡ ಎಂಬುದು ಕೆಲ ಗ್ರಾಮ ಪಂಚಾಯತ್‌ ಸದಸ್ಯರ ಒತ್ತಾಯವಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಗ್ರಾಮಾಡಳಿತದ ಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆ ತೂಗುಯ್ನಾಲೆಯಂತಾಗುತ್ತಿದೆ.

ಸದಸ್ಯರ ಮುಂದುವರಿಕೆಯೇ ಸೂಕ್ತ
ಎಲ್ಲಾ ಕಡೆ ಮಹಾಮಾರಿ ಕೋವಿಡ್ ವೈರಸ್‌ನ ಆಬ್ಬರ ಇರುವಂತಹ ಸಂದರ್ಭದಲ್ಲಿ ಗ್ರಾಮ ಪಂಚಾಯತ್‌ ಚುನಾವಣೆ ನಡೆಸುವುದು ಅಷ್ಟೊಂದು ಸರಿ ಅನಿಸಲಾರದು. ಗ್ರಾಮ ಪಂಚಾಯತ್‌ ಸದಸ್ಯರು ಕೋವಿಡ್ ವಿರುದ್ಧದ ಹೋರಾಟದಲ್ಲಿ ಪಕ್ಷಾತೀತವಾಗಿ, ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈಗ ಏನಾದರೂ ಚುನಾವಣೆ ಏರ್ಪಟ್ಟರೆ ಕೋವಿಡ್ ವಿರುದ್ಧದ ಹೋರಾಟಕ್ಕೆ ಅಡ್ಡಿಯಾಗುತ್ತದೆ. ಕೋವಿಡ್ ಹಾವಳಿ ಮತ್ತಿತರ ವಿಚಾರಗಳ ಸರ್ಕಾರ ಗಂಭೀರವಾಗಿ ಪರಿಗಣಿಸಿ ಈಗಿರುವ ಹಾಲಿ ಸದಸ್ಯರನ್ನೇ ಮುಂದುವರೆಸುವುದು ಸೂಕ್ತ ಎನ್ನುತ್ತಾರೆ ಗ್ರಾಮ ಪಂಚಾಯತ್‌ ಸದಸ್ಯರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಅಣಬೇರು ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ್‌.

ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next