ದಾವಣಗೆರೆ: ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಯ 32 (ಹರಪನಹಳ್ಳಿ ತಾಲೂಕು ಸೇರಿ) ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭವಾಗಿದ್ದು, ಜೂನ್ 7ರ ವರೆಗೆ ಒಟ್ಟು 843 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
Advertisement
ಕಳೆದ ಮೇ 29ರಂದು ಶಾಲಾ ಪ್ರಾರಂಭೋತ್ಸವದೊಂದಿಗೆ ಆಂಗ್ಲ ಮಾಧ್ಯಮಕ್ಕೂ ಚಾಲನೆ ನೀಡಲಾಗಿದ್ದು, ಕೆಲವೊಂದು ಶಾಲೆಗಳಲ್ಲಿ ಅತಿ ಕಡಿಮೆ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಆಂಗ್ಲ ಮಾಧ್ಯಮಕ್ಕಾಗಿಯೇ ಹೊಸದಾಗಿ ಶಿಕ್ಷಕರ ನೇಮಕ ಪ್ರಕ್ರಿಯೆ ನಡೆದಿಲ್ಲ. ಈಗಾಗಲೇ ಸೇವೆಯಲ್ಲಿರುವ ಶಿಕ್ಷಕರಲ್ಲೇ ಇಬ್ಬರನ್ನು ಆಯ್ಕೆ ಮಾಡಿ ಆಂಗ್ಲ ಮಾಧ್ಯಮ ಹೊಣೆಗಾರಿಕೆ ವಹಿಸಲಾಗಿದೆ. ಜಿಲ್ಲಾ ಮತ್ತು ಶಿಕ್ಷಣ ತರಬೇತಿ ಸಂಸ್ಥೆ (ಡಯಟ್)ನಲ್ಲಿ 15 ದಿನಗಳ ಕಾಲ ಶಿಕ್ಷಕರಿಗೆ ಆಂಗ್ಲ ಮಾಧ್ಯಮದ ಬಗ್ಗೆ ವಿಶೇಷ ತರಬೇತಿ ಸಹ ನೀಡಲಾಗಿದೆ.
Related Articles
Advertisement
ಕೆಲವು ಶಾಲೆಗಳಲ್ಲಿ 15 ರಿಂದ 40 ವಿದ್ಯಾರ್ಥಿಗಳು ದಾಖಲಾಗಿದ್ದು, ಅರ್ಜಿ ಪಡೆದ ಇನ್ನೂ 103 ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸಬೇಕಿದೆ. ಪ್ರವೇಶಕ್ಕೆ 20 ದಿನ ಕಾಲಾವಕಾಶ ಇರುವುದರಿಂದ ಮತ್ತಷ್ಟು ವಿದ್ಯಾರ್ಥಿಗಳು ದಾಖಲಾಗಬಹುದೆಂದು ನಿರೀಕ್ಷಿಸಲಾಗಿದೆ.
ಜಿಲ್ಲೆಯ 32 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಲಾಗಿದೆ. ಈ ಸಾಲಿನಲ್ಲಿ ಒಂದು ಶಾಲೆಗೆ 30 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೆಲವೆಡೆ ಕಡಿಮೆ ಇದ್ದರೆ ಹಲವೆಡೆ ನಿರೀಕ್ಷೆಗಿಂತ ಹೆಚ್ಚು ಮಕ್ಕಳು ದಾಖಲಾಗಿದ್ದಾರೆ. ವಿದ್ಯಾರ್ಥಿಗಳ ದಾಖಲಾತಿಗೆ ಜೂನ್ 30ರ ವರೆಗೆ ಅವಕಾಶ ಇದೆ. ಸದ್ಯ ಮೊದಲಿದ್ದ ಶಿಕ್ಷಕರಿಗೇ ತರಬೇತಿ ನೀಡಿ, ಆಂಗ್ಲ ಮಾಧ್ಯಮಕ್ಕೆ ನಿಯೋಜಿಸಲಾಗಿದೆ. ಮುಂದೆ ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 120 ಹಾಗೂ ಹರಪನಹಳ್ಳಿ ತಾಲೂಕಿನಲ್ಲಿ 120 ಮಂದಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಸದ್ಯ ಯಾವುದೇ ಸಮಸ್ಯೆ ಆಗುವುದಿಲ್ಲ. ಮುಂದೆ ತರಗತಿ, ಶಿಕ್ಷಕರ ಕೊರತೆ ಉಂಟಾಗಬಹುದು.• ಸಿ.ಆರ್. ಪರಮೇಶ್ವರಪ್ಪ,
ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ.